ವೇತನಕ್ಕೆ ಆಗ್ರಹಿಸಿ ಬಿಇಒ ಕಚೇರಿ ಮುಂದೆ ಧರಣಿ ಕುಳಿತ ಶಿಕ್ಷಕಿ
ಕೋಲಾರ: ವೇತನ ಬಿಡುಗಡೆಗೆ ಆಗ್ರಹಿಸಿ ಶಿಕ್ಷಕಿಯೊಬ್ಬರು ಮಕ್ಕಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.
ತಾಲೂಕಿನ ಕ್ಯಾಲನೂರು ಕ್ರಾಸ್ನ ವಿಶ್ವನಗರದಲ್ಲಿರುವ ಅರುಣೋದಯ ವಿದ್ಯಾಸಂಸ್ಥೆಯಲ್ಲಿ ಸಹ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಎಚ್.ವಂಸತಕುಮಾರಿ ತನ್ನ ಇಬ್ಬರು ಮಕ್ಕಳು, ಪತಿ ರಾಮಾನುಜಂ, ಅತ್ತೆ ನಾಗವೇಣಮ್ಮ ಜತೆ ಬಿಇಒ ಕಚೇರಿ ಮುಂಭಾಗ ಧರಣಿ ಕುಳಿತು ಬೇಡಿಕೆ ಈಡೇರಿಸಲು ಒತ್ತಾಯಿಸಿದರು. 2003 ರಿಂದ ವಿದ್ಯಾಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, 2006-07 ರಲ್ಲಿ ಜಿ.ಪಂ.ಅನುದಾನ ರಹಿತ ಶಾಲೆಗೆ ಅನುಮೋದನೆ ನೀಡಿತು. ಈ ಸಂದರ್ಭದಲ್ಲಿ ಶಾಲೆಯಲ್ಲಿದ್ದ 7 ಶಿಕ್ಷಕರ ಪೈಕಿ ತಮ್ಮನ್ನು ಹೊರತುಪಡಿಸಿ ಉಳಿದವರನ್ನು ಸಹಾಯಾನುದಾನಕ್ಕೆ ಒಳಪಡಿಸಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಪರಿಶಿಷ್ಟ ಜಾತಿ ಸೇರಿದ ತಮ್ಮನ್ನು ಕೈ ಬಿಟ್ಟ ಬಗ್ಗೆ ಪ್ರಶ್ನಿಸಿದಾಗ ಲೋಪ ಸರಿಪಡಿಸುವುದಾಗಿ ಹೇಳಿ ಭರವಸೆ ಈಡೇರಿಸಿಲ್ಲ. ಕಳೆದ 10 ವರ್ಷಗಳಿಂದ ಯಾವುದೇ ವೇತನವಿಲ್ಲದೆ ದುಡಿಯುತ್ತಿದ್ದು ಬಾಕಿ ವೇತನ ಪಾವತಿಸದಿದ್ದರೆ ಜೀವನಕ್ಕೆ ತೊಂದರೆ ಆಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮರುಪರಿಶೀಲನಾ ಅರ್ಜಿ ಹಾಕಿ: ಕಸಾಪ ಅಧ್ಯಕ್ಷ
ಬಂಗಾರಪೇಟೆ: ಮಕ್ಕಳ ಕಲಿಕಾ ಮಾಧ್ಯಮ ಪಾಲಕರ ಹಕ್ಕು ಎಂದು ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಕನ್ನಡ ನಾಡು ನುಡಿಯ ಪಾಲಿಗೆ ಕರಾಳ ತೀರ್ಪಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಶ್ವತ್ಥ್ ಆಗ್ರಹಿಸಿದ್ದಾರೆ.
ತೀರ್ಪುನಿಂದ ರಾಜ್ಯ ಸರ್ಕಾರಗಳ ಆಧ್ಯ ಕರ್ತವ್ಯಗಳಿಗೆ ದಕ್ಕೆ ಬರುವ ಅಪಾಯವಿದೆ. ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ದೇಶದ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಸಹಕಾರದೊಂದಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಎಂದು ಅಶ್ವಥ್ ಒತ್ತಾಯಿಸಿದ್ದಾರೆ.