ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

20 ನಿಮಿಷ 20 ಸುದ್ದಿ

Srinivasa Murthy VN
Updated On : 11 May 2014, 1:07 am

ಕೋಲಾರ: ಸಾವಿರಾರು ಜನ ಬುದ್ಧಿಜೀವಿಗಳು ಪ್ರಕೃತಿಯ ರಹಸ್ಯ ಬೇಧಿಸಲು ನಡೆಸುತ್ತಿರುವ ನಿರಂತರ ಪ್ರಯತ್ನಗಳು ವಿಫಲವಾಗುತ್ತಿವೆ ಎಂದು  ಯಳಗೊಂಡಹಳ್ಳಿ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಎಂ.ವಿ ನಾಗರತ್ನಮ್ಮ ಅಭಿಪ್ರಾಯಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೇಖಕ ಜಿ.ಪರಮೇಶ್ವರ ರಚಿತ ಸನಾತನ ಸತ್ಯ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಶೂನ್ಯದಿಂದಲೇ ವಿಶ್ವದ ಸೃಷ್ಟಿ ಚಿದಂಬರ ರಹಸ್ಯವಾಗಿ ಆಧ್ಯಾತ್ಮಿಕ ಆಧಾರದ ಮೇಲೆ ಸನಾತನ ಸತ್ಯ ಪುಸ್ತಕವನ್ನು ರಚಿಸಲಾಗಿದೆ ಎಂದರು. ವೇದಗಳ ಆದಾರದ ಮೇಲೆ ಕಾರ್ಯನಿರ್ವಹಿಸುವವರು ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ, ಲೇಖಕ ಸಂಶೋಧಕರು ನಡೆಸುವ ಸಾಧನೆಗಳು ಸಫಲವಾಗಲಿ ಎಂದು ಶುಭ ಹಾರೈಸಿದರು.  ಕಾರ್ಯಕ್ರಮದಲ್ಲಿ ನರಸಿಂಹಚಾರಿ, ಈಶ್ವರಿ ಬ್ರಹ್ಮಕುಮಾರಿ ಮಠದ ಯೋಗಿಣಿ, ಸನಾತನ ಸತ್ಯ ಪುಸ್ತಕ ರಚಿಯಿತ ಜಿ.ಪರಮೇಶ ಇದ್ದರು.

ಸುಪ್ರೀಂ ಕೋರ್ಟ್ ತೀರ್ಪುಮರುಪರಿಶೀಲನೆಗೆ ಒತ್ತಾಯ
ಕೋಲಾರ: ಕನ್ನಡ ಭಾಷೆಯನ್ನು ಉಳಿಸುವ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಜ್ಯಾಧ್ಯಕ್ಷ ಎಸ್.ಎನ್.ರಾಜಗೋಪಾಲ್‌ಗೌಡ ಮಾತನಾಡಿ ತೀರ್ಪಿನಿಂದ ಕನ್ನಡ ಭಾಷೆಯ ಸರ್ವನಾಶಕ್ಕೆ ಕಾರಣವಾಗಲಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಮನವಿ ಸಲ್ಲಿಸುವಾಗ ಜಿಲ್ಲಾಧ್ಯಕ್ಷ ಚಿನ್ನಿವೆಂಕಟೇಶ್, ಕಾನೂನು ಘಟಕದ ಜಿಲ್ಲಾಧ್ಯಕ್ಷ ಎಂ.ಅಶೋಕ್‌ಕುಮಾರ್, ರಾಜ್ಯ ಕಲಾವಿದರ ಘಟಕದ ಅಧ್ಯಕ್ಷ ಅರಿಕೆರೆ ಸತ್ಯನಾರಾಯಣ, ರಾಜ್ಯ ಸಹಕಾರ್ಯದರ್ಶಿ ಟಿ.ಆರ್.ಮಿನಿಸ್ವಾಮಿ, ವಿನೋದ್‌ಕುಮಾರ್, ಗೌರವಾಧ್ಯಕ್ಷ ಶ್ರೀನಿವಾಸ್, ಕೇಶವಮೂರ್ತಿ, ಬಂಗಾರಪೇಟೆ ಪ್ರಧಾನ ಕಾರ್ಯದರ್ಶಿ ಮದುಸೂಧನ್, ಸಂಚಾಲಕ ಮುರುಗೇಶ್, ಜಂಟಿ ಕಾರ್ಯದರ್ಶಿ ಮಂಜುನಾಥ್ ಇದ್ದರು.

ಬೇಸಿಗೆ ಶಿಬಿರದಲ್ಲಿ ಅರಳಿದ ಕುಸುಮಗಳು
ಕೋಲಾರ: ಬೇಸಿಗೆ ಶಿಬಿರದಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡರೆ ಕುಸುಮಗಳಾಗಿ ಅರಳಲು ಸಹಾಯವಾಗುತ್ತದೆ ಎಂದು ಅರಿವು ಕೇಂದ್ರ ಸಂಸ್ಥಾಪಕ ಜಿ.ಶಿವಪ್ಪ ಅಭಿಪ್ರಾಯಪಟ್ಟರು. ಮುಳಬಾಗಲಿನ ಅರಿವು ಕೇಂದ್ರದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಅವರು ಭಾಗವಹಸಿ ಮಾತನಾಡುತ್ತಾ ಮಕ್ಕಳಿಗೆ ಇಂಥ ಶಿಬಿರಗಳನ್ನು ಏರ್ಪಡಿಸುವುದರಿಂದ ಮಕ್ಕಳಲ್ಲಿರುವ ಪ್ರತಿಭೆ ಹೊರತೆಗೆಯಲು ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಮುಳಬಾಗಲಿನ ಅರಿವು ಕೇಂದ್ರದಲ್ಲಿ 10 ದಿನಗಳ ಕಾಲ ಹಮ್ಮಿಕೊಂಡಿರುವ ಬೇಸಿಗೆ ಶಿಬಿರದಲ್ಲಿ 5 ನೇ ದಿನವಾದ ಶುಕ್ರವಾರ ರಾಜ್ಯ ಪ್ರಶಸ್ತಿ ವಿಜೇತ ಮಾರ್ಜೇನಹಳ್ಳಿ ಆರ್.ಮುನಿಸ್ವಾಮಿರವರಿಂದ ಜಾನಪದ ಹಾಡುಗಳಿಗೆ ನೃತ್ಯವನ್ನು ಕಲಿಸಲಾಯಿತು. ಜಾನಪದ ಗಾಯಕ ವಿ.ವೆಂಕಟಾಚಲಪತಿ ಜಾನಪದ ಗೀತೆಗಳನ್ನು ಹಾಡುತ್ತಾ ಹತ್ತು ದಿನಗಳ ಶಿಬಿರದಲ್ಲಿ ಸುಮಾರು ಏಳೆಂಟು ಜಾನಪದ ಗೀತೆಗಳನ್ನು ಮಕ್ಕಳಿಗೆ ಕಲಿಸಿದರು. ಆ ಜಾನಪದ ಗೀತೆಗಳಿಗೆ ನೃತ್ಯವನ್ನು ಕಲಿಸಲಾಗುತ್ತಿದೆ.

ಅರಿವು ಕಾರ್ಯಕ್ರಮ...
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ಶ್ರೀ ಸರಸ್ವತಿ ಮಹಿಳಾ ಮಂಡಳಿ ವತಿಯಿಂದ ಚಿಂತಾಮಣಿ ನಗರದ ಮಾಳಪಲ್ಲಿಯಲ್ಲಿ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಅದ್ಧೂರಿ ವಾಸವಿ ಜಯಂತಿ ಆಚರಣೆ
ಮಾಲೂರು: ಇಲ್ಲಿನ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ತಾಲೂಕು ಆರ್ಯವೈಶ್ಯ ಸಂಘದವರು ಶ್ರೀ ವಾಸವಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದರು.
ಪಟ್ಟಣದ ದೊಡ್ಡ ಪೇಟೆಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಮುಖ್ಯ ಪುರೋಹಿತ ಪ್ರಕಾಶ್‌ದೀಕ್ಷಿತ್ ನೇತೃತ್ವದಲ್ಲಿ ಬೆಳಿಗಿನಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಕನ್ನಿಕಾ ದೇವಿಗೆ ನೂತನವಾದ ರೇಷ್ಮೆ ಸೀರೆ ತೊಡಿಸಲಾಗಿತ್ತು. ಸುಮಂಗಲಿರವರಿಂದ ದೀಪೋತ್ಸವ ನಡೆಯಿತು. ಮಧ್ಯಾಹ್ನ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು.
ಸಂಜೆ ಪ್ರಸಿದ್ಧ ನಾದಸ್ವರದೂಂದಿಗೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಯ ಪುಷ್ಪ ಪಲ್ಲಕ್ಕಿ ಉತ್ಸವ ನಡೆಯಿತು. ಮೆರವಣಿಗೆಯಲ್ಲಿ ಖ್ಯಾತ ಉದ್ಯಮಿಗಳಾದ ಎಂಎಸ್ ವಂಸತ್‌ಕುಮಾರ್, ಕೆ.ಎಂ.ಶ್ರೀನಿವಾಸ್ ಶೆಟ್ಟಿ, ರಮಾನಂದಂ, ವಿಶ್ವನಾಥ್ ಗುಪ್ತ, ಬಿ.ರಮೇಶ್ ಮೂರ್ತಿ, ಎನ್.ಆರ್.ಶ್ರೀನಾಥ್, ಗೋವಿಂದಶೆಟ್ಟಿ, ನಾಗಭೂಷಣಂ ಸೇರಿದಂತೆ ಅನೇಕರಿದ್ದರು.

ಆಸ್ತಿಗಾಗಿ ಜಗಳ: ಕೊಲೆ ಬೆದರಿಕೆ, ದೂರು ದಾಖಲು
ಮಾಲೂರು: ಪಿತ್ರಾರ್ಜಿತ ಆಸ್ತಿಯ ವಿತರಣೆಗೆ ಸಂಬಂಧಿಸಿದಂತೆ ಸಹೋದರ ಮತ್ತು ಸಹೋದರಿಯ ಮಧ್ಯೆ ಜಗಳವಾಗಿ, ಹಲ್ಲೆ ನಡೆದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮದ ಭಾಗ್ಯಮ್ಮ ಎಂಬಾಕೆ ತಮ್ಮ ಸಹೋದರರು ವಿರುದ್ಧ ದೂರು ನೀಡಿದ್ದಾರೆ. ನನ್ನ ಹಾಗೂ ನನ್ನ ಮೂವರು ಸಹೋದರಿಯರನ್ನು ತವರು ಮನೆಯಾದ ತಾಲೂಕಿನ ಪಿಚ್ಚಗುಂಟ್ರಹಳ್ಳಿಗೆ ಕರೆಸಿಕೊಂಡ ಸಹೋದರ ನಾಗರಾಜ್ ಹಾಗೂ ಇತರೆ ಮೂವರು ಸಹೋದರರು, ಜಮೀನನಲ್ಲಿ ಭಾಗ ಬೇಕಾ ಎಂದು ಪ್ರಶ್ನಿಸಿದರಲ್ಲದೇ ಕಾನೂನಿನಂತೆ ನೀಡಿ ಎಂದಾಗ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ದೂಣ್ಣೆಗಳಿಂದ ಹೊಡೆದು ಬಟ್ಟೆ ಹರಿದು ಹಾಕಿದ್ದಾರೆ. ಜಮೀನು-ಭಾಗ ಎಂಬ ವಿಷಯ ತೆಗೆದರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಭಾಗ್ಯಮ್ಮ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಪ್ರಬುದ್ಧ ಕವಿತೆ ಕಟ್ಟುವ ಚಂದ್ರು: ಕವಿ ಯಲ್ಲಪ್ಪ
ಮಾಲೂರು: ಬಂಡಾಯದ ಮುಖ್ಯ ನೆಲೆಯಲ್ಲಿ ಕವಿತೆಯನ್ನು ಪ್ರಬುದ್ಧವಾಗಿ ಕಟ್ಟುತ್ತಾ ತಮ್ಮ ನೋವು ನಲಿವುಗಳನ್ನು ವೇದಿಕೆ ಮಾಡಿಕೊಂಡಿರುವ ಕವಿ ಜ.ಮು.ಚಂದ್ರ ಅವರು ಸರಳ ಸಜ್ಜನಿಕೆಯ ವ್ಯಕ್ತಿ ಎಂದು ಕವಿ ಪ್ರೊ. ಟಿ.ಯಲ್ಲಪ್ಪ ಹೇಳಿದರು. ಪತ್ರಕರ್ತರ ಭವನದಲ್ಲಿ ಸ್ಥಳೀಯ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ 'ನಾ ಕಂಡ ಕವಿ-ಕಾವ್ಯ ವಿಚಾರ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಚಂದ್ರ ಅವರ ಕವನಗಳಲ್ಲಿ ಅಕ್ಷರ ಪ್ರೇಮ- ಭಾವಗಳ ಬೆವರಿದೆ. ಅವರು ತಾವೂ ಬೆಳೆಯುವ ಜತೆಯಲ್ಲಿ ತಾವು ಕಟ್ಟಿದ ಸಂಘದೊಂದಿಗೆ ನೂರಾರು ಯುವ ಕವಿಗಳನ್ನು ಬೆಳೆಸುತ್ತಿರುವುದು ಶ್ಲಾಘನೀಯ ಎಂದರು ತಿಳಿಸಿದರು. ಚುಸಾಪ ಅಧ್ಯಕ್ಷ ಕುಂ.ಚಂದ್ರಪ್ಪ ಪ್ರಸ್ತಾವಿಕ ಮಾತನಾಡಿದರು. ಜ.ಮು.ಚಂದ್ರ ಅವರನ್ನು ಸನ್ಮಾನಿಸಲಾಯಿತು. ಕವಿ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಡಿ.ನಾರಾಯಣಸ್ವಾಮಿ, ವಿಮರ್ಶಕ ಮಾ.ವೆಂ.ತಮ್ಮಯ್ಯ, ಡಾ.ರಾಧ ಪ್ರಕಾಶ್ ಸೇರಿ ಅನೇಕರಿದ್ದರು.

ಮುಂದಿನ ವರ್ಷದಿಂದ ನೂತನ ಅಂಗನವಾಡಿ ಕೇಂದ್ರ ಶುರು
ಬಂಗಾರಪೇಟೆ: ಕ್ಷೇತ್ರದ ಯಾವ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಇಲ್ಲವೋ ಆ ಗ್ರಾಮದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ಅಂಗನವಾಡಿ ಕೇಂದ್ರ ಪ್ರಾರಂಭಿಸಲಾಗುವುದೆಂದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಪುರಸಭಾ ಬಯಲು ರಂಗಮಂದಿರದಲ್ಲಿ ತಾಲೂಕು ಪಂಚಾಯತಿ, ಶಿಶು ಅಭಿವೃದ್ಧಿ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಇಂದಿರಾಗಾಂಧಿ ಮಾತೃತ್ವ ಸಹಯೋಗ ಯೋಜನೆ ಮತ್ತು ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ವರ್ಷದಿಂದ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಹಲವು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದಭದಲ್ಲಿ ತಾ.ಪಂ. ಅಧ್ಯಕ್ಷೆ ರೇಣುಕಾ ಬಾಲಚಂದ್ರ, ಸಿಡಿಪಿಒ ಸಿ.ವಿ. ರಾಮನ್, ತಾಲೂಕು ಆರೋಗ್ಯಾಧಿಕಾರಿ ಡಾ. ಕಮಲಾಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಸರ್ಕಾರಿ ಸೌಲಭ್ಯಗಳ ಬಗ್ಗೆ ಅರಿವು ಕಾರ್ಯಕ್ರಮ
ಚಿಂತಾಮಣಿ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಶ್ರೀ ಸರಸ್ವತಿ ಮಹಿಳಾ ಮಂಡಳಿ ವತಿಯಿಂದ ನಗರದ ಮಾಳಪಲ್ಲಿಯಲ್ಲಿ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ವೈದ್ಯ ಶಿಕ್ಷಣಾಧಿಕಾರಿಗಳಾದ ವಿಂದ್ಯಾ ಅವರು,  ಸಾರ್ವಜನಿಕ ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಗರಸಭೆಯ ಮಂಜುನಾಥ್ ಮಾತನಾಡಿ, ನಗರಸಭೆವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಚಿತ ಟೈಲರಿಂಗ್ ಮತ್ತು ಕಂಪ್ಯೂಟರ್ ಸೇರಿದಂತೆ ಇತ್ಯಾದಿ ತರಬೇತಿ ನೀಡಲಾಗುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸರಸ್ವತಿ ಮಹಿಳಾ ಮಂಡಳಿಯ ಕಾರ್ಯದರ್ಶಿ ರಾಜೇಂದ್ರರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಕೃಷ್ಣಪ್ಪ, ಆರೋಗ್ಯ ಇಲಾಖೆಯ ಶ್ರೀನಿವಾಸರೆಡ್ಡಿ ಮಾತನಾಡಿದರು. ವೆಂಕಟರವಣಪ್ಪ, ಸುಜಾತ ಸೇರಿ ಅನೇಕರಿದ್ದರು.

ಗುಣಮಟ್ಟದ ಕಾಮಗಾರಿಡೆಪ್ಯೂಟಿ ಸ್ಪೀಕರ್ ಸಲಹೆ
ಗೌರಿಬಿದನೂರು: ಪಟ್ಟಣದಲ್ಲಿ ಸೀಮೆಂಟ್ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪವಿದೆ. ಕಾಮಗಾರಿ ಗುಣಮಟ್ಟ ಕಾಪಾಡದಿದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಗುತ್ತಿಗೆದಾರರಿಗೆ ಡೆಪ್ಯೂಟಿ ಸ್ಪೀಕರ್  ಎನ್.ಎಚ್.ಶಿವಶಂಕರರೆಡ್ಡಿ  ಎಚ್ಚರಿಕೆ ನೀಡಿದರು. ಗೌರಿಬಿದನೂರು ಪಟ್ಟಣದ ಸಂತೇ ಮೈದಾನ ಸಿಮೆಂಟ್ ರಸ್ತೆ ಕಾಮಗಾರಿ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಿಸುವುದು ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ಹೇಳಿದರು. ವಿಶೇಷ ಅನುದಾನದ ಅಡಿಯಲ್ಲಿ 50 ಲಕ್ಷ ಹಣ ಬಿಡುಗಡೆಯಾಗಿದೆ. ಈ ಹಣವನ್ನು ವಿಶೇಷವಾಗಿ ಕೊಳಚೆ ಪ್ರದೇಶಗಳನ್ನು ಸ್ವಚ್ಚತೆ ಮತ್ತು ನೈರ್ಮಲ್ಯ ಕಾಪಾಡಲು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಎಂ.ನರಸಿಂಹಮೂರ್ತಿ, ಉಪಾಧ್ಯಕ್ಷ ಚಿದಾನಂದಾ ಗುಪ್ತ , ಮಾಜಿಪುರಸಭಾ ಅಧ್ಯಕ್ಷರಾದ ಗೀತಾ ಜಯಂದರ್, ಸದಸ್ಯರಾದ ಖಲೀಂಉಲ್ಲಾ, ಶಫೀಖಾನ್, ಗೋವಿಂದಪ್ಪ, ಗೋಪಿನಾಥ್ , ಕೊಳಚೆ ನಿರ್ಮೂಲನಾ ಅಭಿಯಂತರರಾದ ಪ್ರಶಾಂತ್‌ಕುಮಾರ್ ಮುಂತಾದವರು ಭಾಗವಹಿಸಿದ್ದರು.

ಕಾಮಗಾರಿಗೆ ಚಾಲನೆ
ಗೌರಿಬಿದನೂರು ಪಟ್ಟಣದ ಸಂತೇ ಮೈದಾನ ಸಿಮೆಂಟ್ ರಸ್ತೆ ಕಾಮಗಾರಿಗೆ ಡೆಪ್ಯೂಟಿ ಸ್ಪೀಕರ್ ಎನ್.ಎಚ್.ಶಿವಶಂಕರ್ ರೆಡ್ಡಿ ಅವರು ಶನಿವಾರ ಚಾಲನೆ  ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಜತೆಗಿದ್ದರು.

'ನೌಕರರಿಗೆ ಸಂಪೂರ್ಣ ಕಾನೂನು ಅರಿವು ಅಗತ್ಯ'
ಮಾಲೂರು: ಸಾರ್ವಜನಿಕರ ಸೇವೆಗಾಗಿ ನಿರತವಾಗುವ ಸರ್ಕಾರಿ ಕಚೇರಿ ನೌಕರರು ಕಾನೂನಿನ ಬಗ್ಗೆ ಸಂಪೂರ್ಣ ಅರಿವು ಹೊಂದಿರುವುದು ಅವಶ್ಯವಾಗಿದೆ ಎಂದು ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ್ ಹೇಳಿದರು. ಅವರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾ.ಪಂ. ಸಂಯುಕ್ತಾಶ್ರಯದಲ್ಲಿ ಗುರುವಾರ ಬೆಳಿಗ್ಗೆ ಗ್ರಾ.ಪಂ. ಕಾರ್ಯದರ್ಶಿ, ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 2ನೇ ಅಧಿಕ ಸಿವಿಲ್ ನ್ಯಾಯಾಧೀಶ ಪಿ. ಶಿವರಾಜ್ ಮಾತನಾಡಿ ರಾಜ್ಯದಲ್ಲಿರುವ ಪ್ರತಿ ಇಂಚು ಭೂಮಿಯ ಬಗ್ಗೆ ದಾಖಲೆ ಇದ್ದು,ಅದನ್ನು ಹುಡುಕಿ ಅನ್ಯಾಯವಾದವರಿಗೆ ನ್ಯಾಯ ಕೊಡಿಸಬೇಕಾದ ಜವಾಬ್ದಾರಿ ಅಧಿಕಾರಿಗಳಾಗಿ ನಿಮ್ಮ ಮೇಲಿದೆ ಎಂದರು.  ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಧಿಕಾರಿಗಳು ಹಾಗೂಕಾರ್ಯದರ್ಶಿಗಳ ಜತೆಯಲ್ಲಿ ಕಾನೂನುಗಳ ಬಗ್ಗೆ ನ್ಯಾಯಧೀಶರಿಬ್ಬರು ಸಂವಾದ ನಡೆಸಿದರು. ತಹಸೀಲ್ದಾರ್ ಶಿವುಕುಮಾರ್, ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ,ವಕೀಲ ಸುಬ್ರಮಣಿ ಇದ್ದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

108 ವಾಹನ ರಿಪೇರಿ, ಗಾಯಾಳುಗಳ ಪರದಾಟ
ಚಿಂತಾಮಣಿ: ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಕೋಲಾರ ಆಸ್ಪತ್ರೆಗೆ ಸಾಗಿಸುತ್ತಿದ್ದ 108 ವಾಹನ ರಸ್ತೆಯಲ್ಲಿ ಕೆಟ್ಟು ನಿಂತಿದ್ದರಿಂದ ಗಾಯಾಳುಗಳು ಭಾರಿ ತೊಂದರೆ ಅನುಭವಿಸಿದ ಘಟನೆ ನಡೆದಿದೆ. ತಾಲೂಕಿನ ಕುರುಟಹಳ್ಳಿ ಗ್ರಾಮದ ನಂದೀಶ ಎಂಬ ಯುವಕನಿಗೆ ಗೊಲ್ಲಹಳ್ಳಿ ಗ್ರಾಮದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿತ್ತು. ಗಾಯಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ 108 ವಾಹನದಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ವಾಹನ ಮೈಲಾಂಡ್ಲಹಳ್ಳಿ ಗೇಟ್ ಬಳಿ ಬರುತ್ತಿದ್ದಂತೆ ಕೆಟ್ಟು ನಿಂತಿತು. ಇದರಿಂದ ಗಾಯಾಳುಗಳು ಭಾರಿ ತೊಂದರೆ ಅನುಭವಿಸಬೇಕಾಯಿತು.
ಯುವತಿ ನಾಪತ್ತೆ - ಪೋಲೀಸರಿಗೆ ದೂರು: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಟಿ.ಹೊಸಹಳ್ಳಿ ಗ್ರಾಮದ 22 ವರ್ಷದ ಯುವತಿ ಸೌಮ್ಯ ನಾಪತ್ತೆಯಾಗಿದ್ದು, ಠಾಣೆಯಲ್ಲಿ ದೂರು ದಾಖಲಾಗಿದೆ. ಯುವತಿ ನೀರು ತರಲು ಹೋಗುವುದಾಗಿ ಪೋಷಕರಿಗೆ ಹೇಳಿ ಹೋದವಳು ಮತ್ತೆ ಮರಳಿ ಬಂದಿಲ್ಲ.  ಪೋಷಕರು ನೆರೆಹೊರೆಯರನ್ನು ವಿಚಾರಿಸಿದ್ದಾರೆ. ಆದರೂ ಆಕೆ ಪತ್ತೆಯಾಗಿಲ್ಲ. ಕೊನೆಗೆ ಯುವತಿಯ ತಂದೆ ರಾಮಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.

ತೊರಲಕ್ಕಿಯಲ್ಲಿ ಚೌಡೇಶ್ವರಿದೇವಿ, ಸಾಕಮ್ಮದೇವಿ ಪಲ್ಲಕ್ಕಿ ಉತ್ಸವ
ಟೇಕಲ್: ತೊರಲಕ್ಕಿ ಗ್ರಾಮದಲ್ಲಿ ವಿಜೃಂಭಣೆಯಿಂದ ಶ್ರೀ ಚೌಡೇಶ್ವರಿದೇವಿ, ಶ್ರೀ ಸಾಕಮ್ಮದೇವಿ ಮತ್ತು ಗಂಗಮ್ಮ ದೇವಿಯ ಪಲ್ಲಕ್ಕಿ ಉತ್ಸವಗಳು ನಡೆಯಿತು. ಶುಕ್ರವಾರ ಬೆಳಿಗ್ಗೆ 11 ಗಂಟೆಯಿಂದ ಚೌಡೇಶ್ವರಿದೇವಿಗೆ ವಿಶೇಷವಾಗಿ ಅಲಂಕಾರ ಸೇವೆ ನಡೆದು ಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ಸಮಸ್ತ ನಂದವರಿಕ ಬ್ರಾಹ್ಮಣ ಕುಟುಂಬಗಳು ಹಾಗೂ ಜಿಲ್ಲಾ ನಂದವರಿಕ ಸಂಘದವರು ಶ್ರೀ ಲಕ್ಷ್ಮೀನಾರಾಯಣಶಾಸ್ತ್ರೀ ಹಾಗೂ ಟಿ.ಎ. ಮುರುಳಿಧರ ಶರ್ಮಾ ಇವರ ನೇತೃತ್ವದಲ್ಲಿ ವಿಶೇಷವಾಗಿ ಹೋಮಗಳನ್ನು ನಡೆಸಿದರು. ಹಾಗೂ ದೀಪಾರಾಧನೆ, ಗ್ರಾಮಸ್ಥರಿಂದ ಕಳಶ ಪೂಜೆ ನೆರವೇರಿತು. ಚೌಡೇಶ್ವರಿದೇವಿ, ಸಾಕಮ್ಮದೇವಿ, ಗಂಗಮ್ಮದೇವಿ, ವೆಂಕಟೇಶ್ವರಸ್ವಾಮಿ, ಆಂಜನೇಯಸ್ವಾಮಿ, ವೇಣುಗೋಪಾಲಸ್ವಾಮಿ ದೇವರುಗಳ ಪಲ್ಲಕ್ಕಿ ಉತ್ಸವಗಳು ನಡೆಯಿತು. ನೆರೆದಿದ್ದ ಜನಸ್ತೋಮಕ್ಕೆ ಹಾಗೂ ಭಕ್ತಾಧಿಗಳಿಗೆ ತೊರಲಕ್ಕಿ ಗ್ರಾಮಸ್ಥರಿಂದ ಅನ್ನಸಂತರ್ಪಣೆ, ಪಾನಕ ಸೇವೆ ಏರ್ಪಡಿಸಲಾಗಿತ್ತು. ತೊರಲಕ್ಕಿ, ಚಿಕ್ಕತೊರಲಕ್ಕಿ, ಗುರುವಗೊಲ್ಲಹಳ್ಳಿ, ಹಿಂದೂ ಮುಸ್ಲಿಂ ಮೈತ್ರಿಕೂಟ ಮತ್ತು 44 ಗ್ರಾಮಗಳ ಪಾಳೆಪಟ್ಟು ರವರ ಗ್ರಾಮಸ್ಥರುಗಳು ಈ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಐತಿಹಾಸಿಕ ಭಾವೈಕ್ಯತೆಯನ್ನು ಸಾರಿದರು.

 ದೇಗುಲ ಬೀಗ ಒಡೆದು ಚಿನ್ನಾಭರಣ ದರೋಡೆ
ಚಿಂತಾಮಣಿ: ದೇವಾಲಯದ ಬೀಗವನ್ನು ಒಡೆದು ಸಾವಿರಾರು ರುಪಾಯಿ ಬೆಲೆ ಬಾಳುವ ಬಂಗಾರದ ಒಡವೆ ಹಾಗೂ ಹಣ ದೋಚಿ ಪರಾರಿಯಾಗಿರುವ ಘಟನೆ ಕೆಂಚಾರ್ಲಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯ ಏನಿಗಿದಲೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಏನಿಗಿದಲೆ ಗ್ರಾಮದ ಹೊರವಲಯದಲ್ಲಿರುವ ಚೌಡೇಶ್ವರಿ ದೇವಾಲಯದ ಬಾಗಿಲು ಬೀಗ ಒಡೆದು ಒಳ ನುಗ್ಗಿದ ಕಳ್ಳರು, ದೇವಿಯ ಮೈಮೇಲಿದ್ದ ಬಂಗಾರದ ತಾಳಿ ಹಾಗೂ ಬೆಳ್ಳಿ ಒಡವೆ ಮತ್ತು ಹುಂಡಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಇನ್ಸ್‌ಪೆಕ್ಟರ್ ರಾಜಣ್ಣ ಹಾಗೂ ಸಿಬ್ಬಂದಿ ಆಗಮಿಸಿ, ಪರಿಶೀಲಿಸಿದರು.

ವಿದ್ಯುತ್ ಸ್ಪರ್ಶ: ವ್ಯಕ್ತಿ ಸಾವು
ಮುಳಬಾಗಲು: ತಾಲೂಕಿನ ಹೊನ್ನಿಕೆರೆ ಗ್ರಾಮದ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಚಂಗಲರಾಯಪ್ಪ(40) ಎಂಬುವವರು ಶುಕ್ರವಾರ ರಾತ್ರಿ ಮೃತರಾಗಿದ್ದಾರೆ. ಜಾನುವಾರುಗಳಿಗೆ ಮೇವು ತಂದು ತೆಂಗಿನ ಗರಿ ತೆರವುಗೊಳಿಸುವ ವೇಳೆ ಮರಕ್ಕೆ 11 ಕೆವಿ ವಿದ್ಯುತ್ ತಗುಲಿ ಸ್ಧಳದಲ್ಲಿಯೇ ಮೃತರಾಗಿದ್ದಾರೆ. ಶವವನ್ನು ಮುಳಬಾಗಲು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಮೃತರ ಪತ್ನಿ ಜಯಮ್ಮನವರು ಗುಡಿಪಲ್ಲಿ ಗ್ರಾ.ಪಂ. ಸದಸ್ಯೆಯಾಗಿದ್ದಾರೆ.

29.52 ಲಕ್ಷ ಸಾಲ ಮನ್ನಾ: ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ
ಮುಳಬಾಗಲು: ತಾಲೂಕಿನ ಪಿಎಲ್‌ಡಿ ಬ್ಯಾಂಕ್‌ನಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಾಲ ಮನ್ನಾ  ಯೋಜನೆಯಡಿ 70 ಜನ ಫಲಾನುಭವಿಗಳನ್ನು ಆಯ್ಕೆ ಮಾಡಿ, 29.52 ಲಕ್ಷ ಮನ್ನಾ ಮಾಡಲಾಗಿದೆ ಎಂದು  ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ತಿಳಿಸಿದ್ದಾರೆ.
ಶನಿವಾರ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ 'ಕನ್ನಡಪ್ರಭ' ಜತೆ ಮಾತನಾಡಿದ ಅವರು, ರೈತರು ಕಟ್ಟಬೇಕಾದ 2.77 ಲಕ್ಷ ಮೊತ್ತವನ್ನು ಶಾಸಕ ಕೊತ್ತೂರು ಮಂಜಿನಾಥ್ ತಮ್ಮ ವೇತನದಲ್ಲಿ ನೀಡಲಿದ್ದಾರೆ ಎಂದರು. ಕಳೆದ  ಸಾಲಿನಲ್ಲಿ ಶಾಸಕರ  ಹಣದಿಂದ 328 ಮಂದಿ ರೈತರಿಗೆ ಅನುಕೂಲವಾಗಿ ಇದೇ ರೀತಿಯಾಗಿ ಈ ಸಾಲಿನಲ್ಲಿ ಕೂಡ 70 ಜನ ರೈತರ ಸಾಲ ಮನ್ನಾ ಮಾಡಲು ಸಹಾಯ ಮಾಡಿದ್ದು ಅವರಿಗೆ ಬ್ಯಾಂಕ್ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಸರ್ಕಾರಿ ನೀರಿಗೆ ಜಿಪಂ ಮಾಜಿ ಸದಸ್ಯ ಕನ್ನ!
ಮುಳಬಾಗಲು: ಸರ್ಕಾರ ಕೊರೆಯಿಸಿದ್ದ ಕೊಳವೆಬಾವಿಯನ್ನು ರಾಜಕಾರಣೆಯೊಬ್ಬರು ಅತಿಕ್ರಮಿಸಿಕೊಂಡು ತೋಟಕ್ಕೆ ನೀರು ಬಳಸಿಕೊಳ್ಳುತ್ತಿದ್ದ ಕುರಿತು ಮಾಹಿತಿ ಮೇರೆಗೆ ತಹಸೀಲ್ದಾರ್ ಏಕೇಶಬಾಬು ಸ್ಧಳಕ್ಕೆ ಆಗಮಿಸಿ ನೀರಿನ ಸಂಪರ್ಕವನ್ನು ಸ್ಧಗಿತಗೊಳಿಸಿದರು. ತಾಲೂಕಿನ ತಾಯಲೂರು ಹೋಬಳಿ ವಜ್ರನಾಗೇನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ಉಪಯೋಗಕ್ಕೆ 6 ತಿಂಗಳ ಹಿಂದೆ ಕೊಳವೆಬಾವಿ ಕೊರೆಯಿಸಲಾಗಿತ್ತು. ಗ್ರಾಮದಲ್ಲಿ ಸ್ಧಾಪಿಸಲಾದ ಶುದ್ಧನೀರಿನ ಘಟಕಕ್ಕೆ ಆ ಕೊಳವೆಬಾವಿಯಿಂದ ಸಂಪರ್ಕ ನೀಡಲಾಗಿತ್ತು. ಆದರೆ, ಕೊಳವೆಬಾವಿಯನ್ನು ಜಿಪಂ ಮಾಜಿ ಸದಸ್ಯ ರಾಮಚಂದ್ರಪ್ಪ  ಅಕ್ರಮವಾಗಿ ವಶಪಡಿಸಿಕೊಂಡು ನೀರನ್ನು ತಮ್ಮ ಮಾವಿನತೋಟಕ್ಕೆ ಬಳಸುತ್ತಿದ್ದರು. ಇದನ್ನು ಪತ್ತೆ ಹಚ್ಚಿದ ಗ್ರಾಮಸ್ಥರು ಕೋಲಾರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ತಹಸೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ, ಸಂಪರ್ಕ ಸ್ಥಗಿತಗೊಳಿಸಿದ್ದಾರೆ.

ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ
ಚಿಂತಾಮಣಿ: ವಾಯು ವಿಹಾರಕ್ಕೆ ತೆರಳಿದ ಒಂಟಿ ಮಹಿಳೆ ಮೈಮೇಲಿದ್ದ ಲಕ್ಷಾಂತರ ರುಪಾಯಿ ಬೆಲೆ ಬಾಳುವ ಮಾಂಗಲ್ಯ ಸರವನ್ನು ಅಪರಿಚಿತ ಯುವಕರಿಬ್ಬರು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಶನಿವಾರ ಬೆಳಗ್ಗೆ ರಾಯಲ್ ಸರ್ಕಲ್‌ನಲ್ಲಿ ನಡೆದಿದೆ. ನಗರದ ಪಿಟೀಲ್ ಬಾಲರಾಮಯ್ಯ ಬಡಾವಣೆಯ ನಿವಾಸಿ ಶಿವ ಜ್ಯೋತಿ ಎಂಬಾಕೆ ಶನಿವಾರ ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದರು. ಆಗ ಇಬ್ಬರು ಬೈಕ್‌ನಲ್ಲಿ ಬಂದು ಮಹಿಳೆಯ ಕೊರಳಲ್ಲಿದ್ದ 25 ಗ್ರಾಮದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂಲಿ ಕಾರ್ಮಿಕ ಸಾವು
ಚಿಂತಾಮಣಿ:  ನಗರದ ಅಶ್ವಿನಿ ಬಡಾವಣೆಯಲ್ಲಿ ಕಟ್ಟವೊಂದಕ್ಕೆ ಪೇಂಟ್ ಮಾಡುತ್ತಿದ್ದ ಕಾರ್ಮಿಕನೊಬ್ಬ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಶನಿವಾರ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ 45 ವರ್ಷ ವಯಸ್ಸಿನ ನರಸಿಂಹಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

 ಮಾರಿಕಾಂಬಾದೇವಿ ದೇಗುಲ ಜೀರ್ಣೋದ್ಧಾರ
ಟೇಕಲ್: ಇಲ್ಲಿನ ಕೂಗಿಟಗಾನಹಳ್ಳಿಯಲ್ಲಿ ಶುಕ್ರವಾರ ಶ್ರೀ ಮಾರಿಕಾಂಬಾದೇವಿ ದೇಗುಲ ಜೀರ್ಣೋದ್ಧಾರ ನೂತನ ದೇವಾಲಯ ಸಂಪ್ರೋಕ್ಷಣೆ ಹಾಗೂ ನೂತನ ಸ್ಥಿರ ಶಿಲಾವಿಗ್ರಹದ ಪ್ರಾಣ ಪ್ರತಿಷ್ಠಾನೆ ನೆರವೇರಿಸಲಾಯಿತು. ಮುಂಜಾನೆ 9-30ರಿಂದ 10-30 ರೊಳಗಾಗಿ ದೇವಿಯ ಪ್ರಾಣ ಪ್ರತಿಷ್ಠಾಪನೆಯನ್ನು ಆಗಮಿಕ ಪುರೋಹಿತರಾದ ಪಿ.ಎಸ್.ಪವನ್‌ಕುಮಾರ್ ಶರ್ಮಾ ಹಾಗೂ ಪಿ.ಎಸ್.ಸಂತೋಷ್‌ಕುಮಾರ್ ಅವರು ವೇದಘೋಷಗಳೊಂದಿಗೆ ಅಷ್ಟೋತ್ತರ ಧೂಪದೀಪ ನೈವೇದ್ಯ ಮಾಡಿದರು. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ನಡೆಯಿತು.
ಸರ್ಕಾರಿ ಕಾಲೇಜಿಗೆ ಶೇ.80 ಫಲಿತಾಂಶ
ದೊಡ್ಡನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿ 23 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 18 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ.80 ಫಲಿತಾಂಶ ದೊರೆತಿದೆ. ಆಶಾ ಎನ್. 493, ಅರುಣಾ 475, ಮಾಲಾಶ್ರೀ 472 ಅಂಕ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಬಾಲಾಜಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement