ಕಾರ್ಮಿಕರ ಮನೆ ತೆರವುಗೊಳಿಸಿದರೆ ಹೋರಾಟ: ಸಂಪಂಗಿ
ಕೆಜಿಎಫ್: ಚಿನ್ನದ ಗಣಿ ಕಾರ್ಮಿಕರ ಮನೆಗಳನ್ನು ತೆರವುಗೊಳಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಚಿನ್ನದ ಗಣಿ ಕಾರ್ಮಿಕ ಒಕ್ಕೂಟ ಸಂಘಗಳ ಅಧ್ಯಕ್ಷ ಹಾಗೂ ಮಾಜಿ ಶಾಸಕ ವೈ. ಸಂಪಂಗಿ ಎಚ್ಚರಿಕೆ ನೀಡಿದ್ದಾರೆ.
ಬಿಜಿಎಂಎಲ್ ಆಡಳಿತ ಮಂಡಳಿ ಕಚೇರಿ ಸವರ್ಣ ಭವನದಲ್ಲಿ ವಿಶೇಷ ಕರ್ತ್ಯವ್ಯ ಅಧಿಕಾರಿ ಪುರುಷೋತ್ತಮ್ ಅವರೊಂದಿಗೆ ಮಾತುಕತೆ ನಡೆಸಿದ ಸಂಪಂಗಿ ಅವರು, ಚಿನ್ನದ ಗಣಿ ಮುಚ್ಚಿದ ಬಳಿಕ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದ ಸರ್ಕಾರ, ಇದೀಗ ಜಾಗತಿಕ ಟೆಂಡರ್ ಹೆಸರಿನಲ್ಲಿ ವಿದೇಶಿ ಕಂಪನಿಗಳಿಗೆ ಲಾಭ ಮಾಡಿಕೊಡಲು ಹೊರಟಿದ್ದು, ಕಾರ್ಮಿಕರ ಮನೆಗಳನ್ನು ತೆರವುಗೊಳಿಸುವುದು ಸೂಕ್ತವಲ್ಲ. ಇದು ಆಡಳಿತ ಮಂಡಳಿಯ ಕಾನೂನುಬಾಹಿರ ಕ್ರಮವಾಗಿದೆ ಎಂದು ಆರೋಪಿಸಿದರು. 30 ಸಾವಿರಕ್ಕೂ ಹೆಚ್ಚು ಕಾರ್ಮಿಕರು ವಾಸವಿರುವ ಕಾಲೋನಿಯನ್ನೇ ತೆರವುಗೊಳಿಸಿ, ವಿದೇಶಿ ಕಂಪನಿಗಳಿಗೆ ಚಿನ್ನದ ಗಣಿಗಳನ್ನು ಪುನರಾರಂಭಕ್ಕೆ ಮುಂದಾದರೆ ಕೂಡಂಕುಲಂ ಅಣು ತ್ಯಾಜ್ಯ ವಿಲೇವಾರಿ ಸಂದರ್ಭದಲ್ಲಿ ನಡೆಸಿದ ಉಗ್ರ ಹೋರಾಟದಂತೆ ಕ್ಷೇತ್ರದ ಶಾಸಕಿ ವೈ.ರಾಮಕ್ಕ ಹಾಗೂ ಕಾರ್ಮಿಕ ಸಂಘಟನೆಗಳೊಂದಿಗೆ ನಡೆಸುವುದಾಗಿ ಎಚ್ಚರಿಸಿದರು.
ಈ ವೇಳೆ ಮಾತನಾಡಿದ ವಿಶೇಷ ಕರ್ತವ್ಯ ಅಧಿಕಾರಿ ಪುರುಷೋತ್ತಮ್, 'ಶಿಕ್ಷಣ ಸಂಸ್ಥೆ, ಅಂಗಡಿ ವ್ಯಾಪಾರಸ್ಥರಿಗೆ, ಕಾರ್ಖಾನೆಗಳಿಗೆ ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳಿಗೆ ಮಾತ್ರ ನೋಟಿಸ್ ನೀಡಲಾಗಿದೆ. ಕಾರ್ಮಿಕರು ವಾಸಿಸುವ ಕಾಲೋನಿಗಳಿಗೆ ನೋಟೀಸ್ ನೀಡದಂತೆ ಗಣಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಬಿಜಿಎಂಎಲ್ ಕಾರ್ಮಿಕರನ್ನು ಅವರ ಕುಟುಂಬಕ್ಕೆ ಎಲ್ಲಾ ರೀತಿಯ ಸೌಲಭ್ಯ ನೀಡುವುದು ನಮ್ಮ ಆದ್ಯತೆಯಾಗಿದೆ' ಎಂದರು.
ಈ ವೇಳೆ ಬಿಜಿಎಂಎಲ್ ಕಾರ್ಮಿಕರ ಒಕ್ಕೂಟ ಸಂಘದ ಅಧ್ಯಕ್ಷ ಯಶ್ವಂತ್‌ರಾಜ್, ಬಿಜೆಪಿ ನಗರಾಧ್ಯಕ್ಷ ಸುರೇಶ್ ನಾರಾಯಣ್ ಸೇರಿದಂತೆ ಅನೇಕರು ಹಾಜರಿದ್ದರು.