ಗಬ್ಬು ನಾರುವ ವಾರ್ಡ್, ಕಿತ್ತು ಹೋಗಿರೋ ಮಂಚ, ಸ್ಟೂಲ್!
ಬಂಗಾರಪೇಟೆ: ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅನಿರೀಕ್ಷಿತವಾಗಿ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಸಿಬ್ಬಂದಿ ಹಾಗೂ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಶನಿವಾರ ಪಟ್ಟಣದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲವಾದರು. ಅವರ ಕಣ್ಣಿಗೆ ಕಡಿದ್ದು ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿರುವ ವಾರ್ಡುಗಳು, ಕಿತ್ತು ಹೋಗಿರುವ ಮಂಚಗಳು, ತುಕ್ಕು ಹಿಡಿದಿರುವ ಸ್ಟೂಲ್‌ಗಳು, ಇಡೀ ಆಸ್ಪತ್ರೆಗೆ ಇಬ್ಬರೇ ಒಳರೋಗಿಗಳಿದ್ದು ಇವರ ಕಾರ್ಯದಕ್ಷತೆಗೆ ಹಿಡಿದ ಕನ್ನಡಿಯಾಗಿತ್ತು. ಪ್ರತಿ ವಾರ್ಡನಲ್ಲೂ ವಾಸನೆ, ಗಲೀಜು, ಹಾಸಿಗೆ ಮೇಲಿನ ಬೇಡ್‌ಶೀಟ್ ಹಾಗೂ ತಲೆದಿಂಬು ಬದಲಾಯಿಸಿ ಎಷ್ಟೋ ದಿನಗಳಾಗಿತ್ತು. ಇನ್ನು ಬೆಟ್‌ಶೀಟ್ ತೆಗೆದರೆ ಒಳಗೆ ಹರಿದು ಹೋಗಿರುವ ಹಾಸಿಗೆಗಳು. ಕಿತ್ತು ಹೋಗಿರುವ ತಲೆದಿಂಬುಗಳು ಇವುಗಳನ್ನು ಕಂಡು ಶಾಸಕರು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕ ಆಸ್ಪತೆಗೆ ಬರುವವರೆಲ್ಲ ಬಡವರು ಕೂಲಿ ಕಾರ್ಮಿಕರು ಆದುದರಿಂದ ಅವರಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ನೀಡುವುದು ನಮ್ಮ ಕರ್ತವ್ಯವಾಗಿದೆ ಆದರೆ ಎಲ್ಲಾ ಬೇಜಾವಾಬ್ದಾರಿತನ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತೆಯಲ್ಲಿ ಕರ್ತವ್ಯದ ಮೇಲೆ ಇದ್ದದ್ದು ಒಬ್ಬ ವೈದ್ಯರು ಮಾತ್ರ ಆದರೆ ಆಡಳಿತಾಧಿಕಾರಿ ನಾಪತ್ತೆಯಾಗಿದ್ದರು. ಔಷಧಿ ವಿತರಣೆ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರಿಗೆ ಕಂಡು ಬಂದಿದ್ದು ಸರ್ಕಾರ ಸರಬರಾಜು ಮಾಡಿರುವುದಕ್ಕಿಂತ ಹೆಚ್ಚು ಮಾತ್ರೆಗಳು ಸ್ಟಾಕ್‌ನಲ್ಲಿತ್ತು. ಇದರಿಂದ ಕುಪಿತರಾದ ಶಾಸಕರು ಇದಕ್ಕೆ ಕಾರಣ ಕೊಡಿ ಎಂದರು. ಉತ್ತರ ನೀಡಲು ಆಗದೇ ಸಿಬ್ಬಂದಿ ತಡವರಿಸಿದರು. ಆಸ್ಪತ್ರೆಯಲ್ಲಿ ಹೊಸ ಬೆಡ್‌ಶೀಟ್ ಖರೀದಿ ಮಾಡಲಾಗಿದ್ದು ಇರುವ ಬೇಡ್‌ಶೀಟ್‌ಗಳನ್ನು ಪ್ರತಿ ದಿನ ಬದಲಾಯಿಸಿ ಹಾಕಬೇಕು. ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳು ಬಡ ರೋಗಿಗಳಾಗಿದ್ದು ಅವರಿಂದ ಲಂಚ ಕೇಳುವುದಾಗಲೀ ಪಡೆಯುವುದಾಗಲೀ ದೂರುಗಳು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.