ಕುಡಿವ ನೀರಿಗೆ ರು. 50 ಲಕ್ಷ ಬಿಡುಗಡೆ
ಶಿಡ್ಲಘಟ್ಟ: ಜಿಲ್ಲಾಡಳಿತದಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸುಮಾರು ರು. 50 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಕೊಳವೆ ಬಾವಿಗಳನ್ನು ಕೊರೆಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪುರಸಭಾ ಮುಖ್ಯಾಧಿಕಾರಿ ರಾಮ್ ಪ್ರಕಾಶ್ ತಿಳಿಸಿದ್ದಾರೆ.
ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಕೊಳವೆ ಬಾವಿ ಕೊರೆಸಲು ಪುರಸಭಾ ಅಧ್ಯಕ್ಷೆ ಮುಷ್ಟರಿ ತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮ ರಮೇಶ್, ಸೇರಿದಂತೆ ಪುರಸಭಾ ಸದಸ್ಯರು ಚಾಲನೆ ನೀಡಿದ ನಂತರ ಮಾತನಾಡಿ, ತೀವ್ರ ಸಮಸ್ಯೆ ಇರುವ ವಾರ್ಡ್ಗಳಿಗೆ ಕುಡಿಯುವ ನೀರನ್ನು ಪೂರೈಸಲು ಅನುದಾನ ಬಿಡುಗಡೆಯಾಗಿದ್ದು, ಚುನಾವಣಾ ನೀತಿ ಸಂಹಿತೆಯಿಂದ ಪುರಸಭಾ ಸದಸ್ಯರ ಸಭೆ ಕರೆದು ಚರ್ಚಿಸಲು ಸಾಧ್ಯವಾಗಲಿಲ್ಲ ಎಂದರು.
ಜಿಲ್ಲಾಡಳಿತದಿಂದ ಎಸ್ಎಫ್ಸಿ ಯೋಜನೆಯಡಿ ಮಂಜೂರಾಗಿರುವ ವಿಶೇಷ ಅನುದಾನದ ಬಗ್ಗೆ ಪುಸರಭೆ ಸದಸ್ಯರ ಗಮನಕ್ಕೆ ತಾರದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದೀರಿ ಎಂದು ಕೆರಳಿದ ಸದಸ್ಯರು, ಕೊಳವೆಬಾವಿ ಕೊರೆಸುವ ಜಾಗಕ್ಕೆ ಬರುವುದಿಲ್ಲವೆಂದು ಪಟ್ಟು ಹಿಡಿದು ಪುರಸಭೆ ಅಧಿಕಾರಿಗೆ ದಿಗ್ಬಂಧನ ಹಾಕಿದರು. ಸದಸ್ಯರ ಮನವೊಲಿಸಲು ಮುಂದಾದ ಮುಖ್ಯಾಧಿಕಾರಿ ರಾಮ್ ಪ್ರಕಾಶ್, ಸಂಬಂಧ ಪಟ್ಟ ಎಂಜಿನಿಯರುಗಳ ಬಳಿ ಚರ್ಚೆ ಮಾಡಿ ಪಟ್ಟಿ ಮಾಡಲಾಗಿದೆ, ಮುಂದಿನ ಅನುದಾನದಲ್ಲಿ ಎಲ್ಲಾ ಸದಸ್ಯರ ತೀರ್ಮಾನದಂತೆ ಕ್ರಮ ಕೈಗೊಳ್ಳುತ್ತೇವೆ ಎಂದ ನಂತರ ಚಾಲನೆ ನೀಡಲಾಯಿತು. ಬಾಲಕೃಷ್ಣ, ಶಬಾನಾಮುಸ್ತು, ಎಸ್.ವಿ. ಬಾಬು, ಶಾಹಿದಾ, ಮಂಜುನಾಥ್ ಇದ್ದರು.