ಕೋಚಿಮುಲ್: ಮೂವರ ನಾಮಪತ್ರ ತಿರಸ್ಕೃತ
ಕೋಲಾರ: ಪ್ರತಿಷ್ಠಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಂಡಳಿಗೆ ಮೇ 25ರಂದು ನಡೆಯಲಿರುವ ಚುನಾವಣೆಗೆ ಸಲ್ಲಿಕೆಯಾಗಿದ್ದ 66 ನಾಮಪತ್ರಗಳಲ್ಲಿ ಮೂರು ತಿರಸ್ಕೃತಗೊಂಡಿವೆ.
ಮುಳಬಾಗಲು ತಾಲೂಕಿನ ಉತ್ತನೂರು ಶ್ರೀನಿವಾಸ್, ಶಿಡ್ಲಘಟ್ಟದ ರಘುನಾಥರೆಡ್ಡಿ, ಕೋಲಾರದ ಶೋಭಾ ಅವರ ನಾಮಪತ್ರ ತಿರಸ್ಕೃತವಾಗಿವೆ. ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಮಂಜುನಾಥ್ ಅವರು ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆಸಿದರು.
13 ಸ್ಥಾನಗಳಿಗೆ ನಡೆಯಬೇಕಾಗಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಭಾನುವಾರ ಕಡೆ ದಿನವಾಗಿತ್ತು. 11ತಾಲೂಕಿನಿಂದ 11 ಮಂದಿ ಹಾಗೂ ಮಹಿಳಾ ಕ್ಷೇತ್ರದಿಂದ ಇಬ್ಬರು ಸೇರಿ 13 ಮಂದಿ ಆಯ್ಕೆಯಾಗಬೇಕಿದೆ.
63 ನಾಮಪತ್ರಗಳು ಪುರಸ್ಕೃತವಾಗಿದ್ದು, ಮೇ 20 ನಾಮಪತ್ರ ಹಿಂದಕ್ಕೆ ಪಡೆಯಲು ಕಡೆ ದಿನ. ಆಡಳಿತಾರೂಢ ಕಾಂಗ್ರೆಸ್ನಿಂದ ಎಲ್ಲಾ 13 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಎರಡೂ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕೇಂದ್ರದ ಮಾಜಿ ಸಚಿವರಾದ ಕೆ.ಎಚ್.ಮುನಿಯಪ್ಪ ಹಾಗೂ ಎಂ.ವೀರಪ್ಪ ಮೊಯ್ಲಿ ಗೆದ್ದ ನಂತರ ಮತ್ತಷ್ಟು ಹುರುಪಿನಿಂದ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಮುಖಂಡರು, ಜೆಡಿಎಸ್ಗೆ ಅಧಿಕಾರ ದಕ್ಕದಂತೆ ಮಾಡಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಜೆಡಿಎಸ್ನ ಅಭ್ಯರ್ಥಿಗಳು ಸೇರಿದಂತೆ ಮುಖಂಡರು ಕಾರ್ಯಕರ್ತರಿಗೆ ಸಿಗದೆ ಧಿಕ್ಕಾಪಾಲು ಆಗಿದ್ದಾರೆ. ಕೋಚಿಮುಲ್ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಅಭ್ಯರ್ಥಿಗಳು ತಮ್ಮದೇ ರೀತಿಯ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಕೋಲಾರ, ಮೂಲೂರು ತಾಲೂಕಿನಲ್ಲಿ ಒಮ್ಮತದ ಅಭ್ಯರ್ಥಿಗಳ ಆಯ್ಕೆ ಸಾಧ್ಯವಾಗಿಲ್ಲ. ಬಂಡಾಯದ ಬಿಸಿ ತಟ್ಟಿದೆ. ಕೋಲಾರದಿಂದ ಮಾಜಿ ಸಚಿವ ಶ್ರೀನಿವಾಸಗೌಡರ ಸಹೋದರ ಶಿವಾನಂದ(ಶಿವಣ್ಣ)ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇದರಿಂದ ಛದತ್ರಕೋಡಿಹಳ್ಳಿ ರಾಮಕೃಷ್ಣೇಗೌಡ, ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಶಂಕರೇಗೌಡ ಬಂಡಾಯ ಬಾವುಟ ಹಾರಿಸಿದ್ದಾರೆ.
ಮಾಜಿ ಸಚಿವ ಶ್ರೀನಿವಾಸಗೌಡರಿಗೆ ತಮ್ಮನ ಪರವಾಗಿ ಒಲ್ಲದ ಮನಸಿನಿಂದಲೇ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇದರಿಂದ ಅಸಮಾಧಾನಗೊಂಡಿರುವ ರಾಮಕೃಷ್ಣೇಗೌಡ ಹಾಗೂ ಶಂಕರೇಗೌಡರ ಮನಮೊಲಿಸುವುದು ಕಷ್ಟವಾಗಿದ್ದು, ಇದು ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಮಾಲೂರು ತಾಲೂಕಿನಿಂದ ಆಯ್ಕೆಯಾಗಿ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿರುವ ಡಾ.ಪ್ರಸನ್ನ ಅವರು ಮತ್ತೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಆದರೆ,ಪಕ್ಷದ ತಾಲೂಕು ಮುಖಂಡರು ಹಾಗೂ ಶಾಸಕ ಮಂಜುನಾಥಗೌಡರು ನಂಜೇಗೌಡರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಇದರಿಂದ ಇಲ್ಲೂ ಅಸಮಾಧಾನದ ಹೊಗೆಯಾಡಲು ಕಾರಣವಾಗಿದೆ.