ಡೊನೇಷನ್ ವಿರುದ್ಧ ದಸಸೇ ಪ್ರತಿಭಟನೆ
ಬಂಗಾರಪೇಟೆ: ತಾಲೂಕಿನಲ್ಲಿ ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ವಿಪರೀತ ನಡೆಯುತ್ತಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ದಲಿತ ಸಮಾಜಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಮೆರವಣಿಗೆ ಮಾಡಿ, ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿರುವ ಎಲ್ಲಾ ಖಾಸಗಿ ಶಾಲೆಗಳು ನಿಯಮ ಉಲ್ಲಂಘಿಸಿ ಪೋಷಕರಿಂದ ಹಣ ಸುಲಿಗೆ ಮಾಡುತ್ತಿವೆ. ಒಂದನೇ ತರಗತಿಗೆ 15ರಿಂದ 20 ಸಾವಿರ ಹಣವನ್ನು ಪಡೆಯುತ್ತಿದ್ದಾರೆ. ಇಷ್ಟೆಲ್ಲಾ ವಂಚನೆ ನಡೆಯುತ್ತಿದ್ದರೂ ಬಿಇಒ ಮತ್ತು ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ತಮಗೂ ಅದಕ್ಕೂ ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ ವರ್ತಿಸುತ್ತಿವೆ. ಈ ಕೂಡಲೆ ಖಾಸಗಿ ಶಾಲೆಗಳಿಗೆ ಈ ಬಗ್ಗೆ ನೋಟೀಸ್ ಜಾರಿ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ಆಗ್ರಹಿಸಿದರು.
ಬಿಇಒ ಕೆ.ಜಯರಾಜ್ ಮಾತನಾಡಿ, ಇದುವರೆಗೂ ಯಾರಿಂದಲೂ ಡೊನೇಷನ್ ಸಂಗ್ರಹ ಬಗ್ಗೆ ದೂರು ಬಂದಿಲ್ಲ. ಲಿಖಿತ ದೂರು ಬಂದರೆ ಅಂತಹ ಶಾಲೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸೂಲಿಕುಂಟೆ ಆನಂದ್, ದೇವಗಾನಹಳ್ಳಿ ಯತೀಂದ್ರ, ರಮೇಶ್ ಸೇರಿದಂತೆ ಅನೇಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.