ಬಸ್ ನಿಲ್ದಾಣ, ರಸ್ತೆ ರಿಪೇರಿಗೆ ಆಗ್ರಹಿಸಿ ರಸ್ತೆ ತಡೆ
ಕೆಜಿಎಫ್: ನಗರಸಭೆ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸಬೇಕು ಮತ್ತು ನಗರದಲ್ಲಿ ಹದೆಗೆಟ್ಟಿರುವ ಪ್ರಮುಖ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬಸ್ ನಿಲ್ದಾಣದ ಮುಂಭಾಗ ರಸ್ತೆತಡೆ ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರಸಭೆ ಬಸ್ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಿ ಮೂರು ತಿಂಗಳು ಕಳೆಯುತ್ತಿದ್ದರೂ ಇನ್ನು ಕಮಗಾರಿ ಕೆಲಸ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಬಸ್ ನಿಲ್ದಾಣದ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಆದರೆ, ಬಸ್ ನಿಲ್ದಾಣ ದುರಸ್ತಿ ಕಾಮಗಾರಿಯನ್ನು ಪಡೆದ ಗುತ್ತಿಗೆದಾರರಿಗೆ ಹೇಳುವವರಿಲ್ಲ, ಕೇಳುವವರಿಲ್ಲ. ನಗರಸಭೆ ಪೌರಾಯುಕ್ತರು ಮತ್ತು ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ ಎಂದು ಆರೋಪಿಸಿದರು. ಇನ್ನೊಂದೆಡೆ ನಗರದ ಪ್ರಮುಖ ರಸ್ತೆಗಳು ಹಳ್ಳಕೊಳ್ಳಗಳಿಂದ ಕೂಡಿದ್ದು, ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೀವ್ರವಾದ ತೊಂದರೆಯಾಗುತ್ತಿದೆ. ಕ್ಷೇತ್ರದ ಶಾಸಕಿ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆ ದುರಸ್ತಿಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಅಧ್ಯಕ್ಷ ಎ.ಪೂಂಡಿರಾಜ್, ಗೌರವಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸೈಯದ್ ಅಲ್ಲಾಬಖಾಷ್, ಕೆ.ಶಂಷುದ್ದೀನ್, ಬಾಬು, ಕಾಣಿಕ್ಕರಾಜ್, ಜಾನ್ಸನ್, ಆರೋಗ್ಯಸ್ವಾಮಿ, ಶಫಿ, ಗಜೇಂದ್ರಕುಮಾರ್, ಜಾವೀದ್ ಪಾಷಾ, ಶ್ರೀಧರ್, ನಯಾಜ್‌ಅಹ್ಮದ್, ನಟರಾಜನ್, ವಿನ್ಸೆಂಟ್ ಜಾನ್ಸನ್, ಚಂದ್ರಾಚಾರಿ, ಶಂಕರಾಚಾರಿ ಮತ್ತಿತರರು ಇದ್ದರು.