ಮೂಲ ಸೌಲಭ್ಯಗಳಿಲ್ಲದ ರೇಲ್ವೇ ನಿಲ್ದಾಣ
- ಕೆ. ರಮೇಶ್
ಬಂಗಾರಪೇಟೆ: ರಾಜ್ಯದ ಎರಡನೆ ಅತಿ ದೊಡ್ಡ ರೈಲ್ವೆ ನಿಲ್ದಾಣವಾದ ಪಟ್ಟಣದ ನಿಲ್ದಾಣ ಮೂಲ ಸೌಲಭ್ಯಗಳ ಕೊರತೆಯಿಂದ ನಲುಗಿದ್ದು, ಪ್ರತಿನಿತ್ಯ ಪ್ರಯಾಣಿಕರು ರಕ್ಷಣೆ ಹಾಗೂ ಅನಾನುಕೂಲಗಳ ನಡುವೆ ಸಂಚರಿಸುವಂತಾಗಿದೆ.
ಪ್ರತಿನಿತ್ಯ ಪಟ್ಟಣದ ಮೂಲಕ ನೂರಾರು ರೈಲುಗಳು ಸಂಚರಿಸಲಿವೆ. 25 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ನಿತ್ಯ ಬೆಂಗಳೂರಿಗೆ ಪ್ರಯಾಣಿಸುವರು. ಪ್ರಯಾಣಿಕರಿಗೆ ತಕ್ಕಂತೆ ರೈಲುಗಳ ಕೊರತೆ ಇದೆ. ಇಲ್ಲಿ ಪ್ರಯಾಣಿಕರಿಗೆ ರಕ್ಷಣೆಯ ವ್ಯವಸ್ಥೆಯಿಲ್ಲ. ಜನದಟ್ಟಣೆ ಹೆಚ್ಚಾಗಿರುವ ನಿಲ್ದಾಣಗಳಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಿಸಿ ಕ್ಯಾಮೆರ ಅಳವಡಿಸಬೇಕೆಂದು ಆದೇಶವಿದ್ದರೂ ಇಲ್ಲಿ ಅದು ಪಾಲನೆಯಾಗಿಲ್ಲ. ಕುಡಿಯಲು ನೀರಿಲ್ಲ. ಶುಚಿತ್ವ ಇಲ್ಲ.
ಸಂಜೆಯಾದರೆ ನಿಲ್ದಾಣ ಅನೈತಿಕ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿದ್ದರೂ ಕೇಳುವವರೇ ಇಲ್ಲ. ರೈಲ್ವೆ ಪೊಲೀಸರು ಹಾಗೂ ಆರ್ಪಿಎಫ್ ಸಿಬ್ಬಂದಿ ಕೊರತೆಯಿಂದ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಜೊತೆಗೆ ಇಲ್ಲಿ ರೈಲಿಗೆ ಸಿಕ್ಕಿ ಆಹ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಗೆ ಕೊರತೆಯಿಲ್ಲ. ನಿಲ್ದಾಣದಲ್ಲಿ ಐದು ಪ್ಲಾಟ್ ಫಾರಂಗಳಿದ್ದರೂ ಒಂದಕ್ಕೂ ತಡೆ ಗೋಡೆಗಳಿಲ್ಲದ ಕಾರಣ ಹಳಿಗಳ ಮೇಲೆಯೇ ಸಾರ್ವಜನಿಕರು ಸಂಚರಿಸುವರು. ಇಲಾಖೆ ಮೇಲಾಧಿಕಾರಿಗಳು ಬಂದಾಗ ಮಾತ್ರ ನಿಲ್ದಾಣನಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸುವರು ನಂತರ ಯಥಾಸ್ಥಿತಿ ಮುಂದುವರೆಯುವುದು.
ಜಿಲ್ಲೆಯ ಸಂಸದ ಕೆ.ಎಚ್. ಮುನಿಯಪ್ಪ ಈ ಹಿಂದೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರೂ ಜಿಲ್ಲೆಯ ಯಾವುದೇ ನಿಲ್ದಾಣಗಳಿಗೆ ಮೋಕ್ಷ ಸಿಕ್ಕಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಇವರ ಅವಧಿಯಲ್ಲಾದರೂ ಈ ನಿಲ್ದಾಣ ಅಭಿವೃದ್ಧಿಯಾಗುವುದೇ ಎಂದು ಪ್ರಯಾಣಿಕರು ಎದುರು ನೋಡುತ್ತಿದ್ದಾರೆ.