ಶಾಲೆ ಬಿಟ್ಟ ಮಕ್ಕಳಿಗಾಗಿ ಚಿಣ್ಣರ ಅಂಗಳಕ್ಕೆ ಚಾಲನೆ
ಕೋಲಾರದಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 872
ಕೋಲಾರ: ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕೆಲಸ ಆರಂಭವಾಗಿದೆ.
ಚಿಣ್ಣರ ಅಂಗಳ ಕಾರ್ಯಕ್ರಮದ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಸಲುವಾಗಿ ವಿವಿಧ ಕ್ಲಸ್ಟರ್‌ಗಳ ಸಂಪನ್ಮೂಲ ವ್ಯಕ್ತಿಗಳು ನಗರದಲ್ಲಿ ಮನೆ ಮನೆಗೂ ತೆರಳಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸುತ್ತಿದ್ದಾರೆ.
ಸೋಮವಾರ ನಗರದ ಗಂಗಮ್ಮನ ಪಾಳ್ಯದಲ್ಲಿ ಶಾಲೆ ಬಿಟ್ಟ ಮಕ್ಕಳ ಮನೆಗಳ ವಿಳಾಸ ಪತ್ತೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ತಾಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಪ್ರಯತ್ನಿಸುತ್ತಿದರು. 8ನೇ ತರಗತಿವರೆಗೂ ಪೂಲಷಾ ಮೊಹಲ್ಲಾದಲ್ಲಿ ಓದಿದ ವಿದ್ಯಾರ್ಥಿ ಆಯಿಷಾ ಪಿರ್‌ದೋಸ್, ಗಂಗಮ್ಮನ ಪಾಳ್ಯದ ನಿವಾಸಿಯಾಗಿದ್ದು, ಸಂಪನ್ಮೂಲ ವ್ಯಕ್ತಿಗಳು ಅವರ ಮನೆಗೆ ತೆರಳಿ ಪೋಷಕರ ಮನಮೊಲಿಸುವ ಕಾರ್ಯದಲ್ಲಿ ತೊಡಗಿದ್ದರು.
ಆಕೆ 8ನೇ ತರಗತಿಯಲ್ಲಿ ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, 9ನೇ ತರಗತಿಗೆ ಕಳುಹಿಸದಿರುವ ಕುರಿತು ತಾಯಿ ಜರೀನಾತಾಜ್‌ರನ್ನು ಪ್ರಶ್ನಿಸಲಾಯಿತು. ತಾಯಿ ಹಾಗೂ ಅಕ್ಕಪಕ್ಕದ ಮನೆಯವರು ಹೇಳುವಂತೆ ಈ ವಿದ್ಯಾರ್ಥಿನಿಯನ್ನು ಮದರಸ ಶಿಕ್ಷಣಕ್ಕೆ ಕಳುಹಿಸುತ್ತಿದ್ದು, ಶಾಲೆಗೆ ಕಳುಹಿಸಲು ಸಾಧ್ಯವೇ ಇಲ್ಲ ಎಂಬ ಉತ್ತರ ಬಂತು. ಸಂಪನ್ಮೂಲ ವ್ಯಕ್ತಿಗಳು ಹಲವಾರು ರೀತಿಯಲ್ಲಿ ಪೋಷಕರನ್ನು ಮನವೊಲಿಸುವ ಯತ್ನ ಫಲಿಸಲಿಲ್ಲ.
ಏ.22ರಿಂದ ಪ್ರಾರಂಭಿಸಲಾಗಿರುವ ಕಾರ್ಯಕ್ರಮ ಜು.22ವರೆಗೂ ನಡೆಯಲಿದೆ ಎಂದು ಎಂದು ಸಂಪನ್ಮೂಲ ವ್ಯಕ್ತಿ ಎಂ.ನಾಗರಾಜ್ ತಿಳಿಸಿದ್ದಾರೆ.
ನಗರದ ಕಮಲಾ ಮಹಡಿ ಶಾಲೆಯಲ್ಲಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಒಂದೆಡೆ ಕರೆತರಲು ಚಿಣ್ಣರ ಅಂಗಳ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೋಲಾರ ತಾಲೂಕಿನಲ್ಲಿ ಶಾಲೆ ಬಿಟ್ಟ 872 ಮಕ್ಕಳಿದ್ದು, ಅವರಲ್ಲಿ 280 ಮಕ್ಕಳನ್ನು ಗುರುತಿಸಲಾಗಿದೆ. ಚಿಣ್ಣರ ಅಂಗಳಕ್ಕೆ ತಾಲೂಕಿನ ಎಲ್ಲಾ ಚಿಣ್ಣರನ್ನು ಕರೆತಂದು ಅಲ್ಲಿ ಸೇತುಬಂಧದಡಿ ಅವರನ್ನು ಸಿದ್ಧಪಡಿಸಿ, ಅವರು ಇಷ್ಟಪಟ್ಟ ಶಾಲೆಗೆ ದಾಖಲಿಸುವ ಮೂಲಕ ಮಕ್ಕಳನ್ನು ಶೈಕ್ಷಣಿಕ ಮುಖ್ಯವಾಹಿನಿಗೆ ತಲುಪಿಸುವ ಕೆಲಸ ನಡೆಯುತ್ತಿದೆ.
ತಾಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆಂಪೇಗೌಡ, ಸಿಆರ್‌ಪಿಗಳಾದ ಎಂ.ನಾಗರಾಜ್, ಕೆ.ಎಸ್.ಮುನಿರಾಜು, ಅಶ್ವತ್ಥನಾರಾಯಣ, ಚಂದ್ರಶೇಖರ್, ಮುನಿಯಪ್ಪ, ಬೈರೇಗೌಡ, ನಂಜುಂಡಪ್ಪ, ಪುಷ್ಪ, ಮುನಿಸ್ವಾಮಿರೆಡ್ಡಿ ಮತ್ತಿತರರು ಮರಳಿ ಮಕ್ಕಳನ್ನು ಶಾಲೆಗೆ ಕರೆತರುವ ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆ.