ಶಿಕ್ಷಣ ಪ್ರೇರಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ
ಮಾಲೂರು: ತಾಲೂಕಿನ ಲೋಕ ಶಿಕ್ಷಣ ಪ್ರೇರಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಅರಳೇರಿ ಕೇಂದ್ರದ ಪ್ರೇರಕ ನಾಗೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಸಾಕ್ಷರತಾ ಸಮಿತಿಯ ಸಂಯೋಜಕ ರಾಜಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಿಕ್ಕಕುಂತೂರು ಕೇಂದ್ರದ ಪ್ರೇರಕಿ ಪಿ.ವಿ.ನಾಗಮ್ಮ ಉಪಾಧ್ಯಕ್ಷೆ, ಚಿಕ್ಕತಿರುಪತಿ ಕೇಂದ್ರದ ಪ್ರೇರಕ ಮಹದೇವ ಕಾರ್ಯದರ್ಶಿಯಾಗಿ, ರಾಜೇನಹಳ್ಳಿ ಕೇಂದ್ರದ ಪ್ರೇರಕ ಆರ್.ಎಸ್.ಚಂದ್ರಶೇಖರ್ ಸಹಕಾರ್ಯದರ್ಶಿಯಾಗಿ, ಡಿ.ಎನ್.ದೂಡ್ಡಿ ಕೇಂದ್ರದ ಪ್ರೇರಕ ಡಿ.ಎನ್.ಸುಬ್ರಮಣಿ ಖಂಜಾಚಿ, ಬೈರತ್ನಹಳ್ಳಿ ನಾರಾಯಣಸ್ವಾಮಿ ಜಿಲ್ಲಾ ಪ್ರತಿನಿಧಿಯಾಗಿ, ದೊಡ್ಡಶಿವಾರದ ಅನುಸೂಯಾ, ನೂಟವೆ ಶ್ರೀನಿವಾಸ್, ಚಲಪತಿ, ವಾಣಿ, ಮಣಿಕುಮಾರ್, ಮುನಿತಿಮ್ಮಕ್ಕ, ಎಸ್.ಎ.ವೀಣಾ, ರವಿರಾಜ್ ಹಾಗೂ ಪದ್ಮಾವತಿ ಅವರು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಸಂಯೋಜಕ ರಾಧಾ ಸೇರಿದಂತೆ ತಾಲೂಕಿನ 28 ಪಂಚಾಯ್ತಿಗಳ ಪ್ರೇರಕರು ಹಾಜರಿದ್ದರು.
ಜಯಮ್ಮಅಧ್ಯಕ್ಷೆ
ಮಧುಗಿರಿ: ತಾಲೂಕಿನ ಮರುವೇಕೆರೆ ಗ್ರಾ.ಪಂ.ಅಧ್ಯಕ್ಷರ ಚುನಾವಣೆ ಸೋಮವಾರ ನಡೆದು ಕಾಂಗ್ರೆಸ್ ಅಭ್ಯರ್ಥಿ ಜಯಮ್ಮ ಸದಾನಂದಾಸ್ ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಈಗ 2 ತಿಂಗಳ ಹಿಂದಷ್ಟೇ ಸ್ವಪಕ್ಷದವರೇ ಅಧ್ಯಕ್ಷೆ ಜಯಮ್ಮ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಸಿದ್ದರು. ಈ ಗ್ರಾ.ಪಂನಲ್ಲಿ 14 ಮಂದಿ ಸದಸ್ಯ ಬಲವಿದ್ದು ಈ ಪೈಕಿ 7 ಜನ ಸದಸ್ಯರು ಜಯಮ್ಮ ಅವರನ್ನು ಬೆಂಬಲಿಸಿದರು. ಅವರ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಾಧಮ್ಮ 6 ಮತ ಪಡೆದು ಪರಾಭವಗೊಂಡರು.
ಸಿಡಿಲು ಬಡಿದು 2 ಹಸು ಸಾವು
ಮಧುಗಿರಿ: ಸಿಡಿಲು ಬಡಿದು 2 ಹಸು ಮೃತಪಟ್ಟರುವ ದಾರುಣ ಘಟನೆ ಮಧುಗಿರಿ ಕಸಬಾ ಕೃಷ್ಣಯ್ಯನ ಪಾಳ್ಯ ಗ್ರಾಮದಲ್ಲಿ ಸೋಮವಾರ ನಡೆದಿದೆ. ರೈತ ಅಶ್ವತ್ಥನಾರಾಯಣ ಅವರು ಸಿದ್ದಪ್ಪ ಎಂಬುವವರಿಗೆ ಸೇರಿದ ಹಸುಗಳನ್ನು ತನ್ನ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ತೆಂಗಿನ ಮರದ ಹತ್ತಿರ ಕಟ್ಟಿ ಹಾಕಿದ್ದಾಗ ಏಕಾಏಕಿ ಸಿಡಿಲು ಬಡಿದು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಸುಮಾರು 50 ಸಾವಿರಕ್ಕೂ ಅಧಿಕ ಬೆಲೆ ಬಾಳುವ ಹಸುಗಳು ಏನ್ನಲಾಗಿದ್ದು ಇದರಿಂದ ರೈತ ಅಶ್ವತ್ಥನಾರಾಯಣ ಕುಟುಂಬ ಕಂಗಾಲಾಗಿದೆ.
ಗೌರಿಬಿದನೂರು: ರಸ್ತೆಗಳ ವಿಸ್ತೀರ್ಣಕ್ಕಾಗಿ ಪ್ರತಿಭಟನೆ
ಗೌರಿಬಿದನೂರು: ರಸ್ತೆ ಅಗಲೀಕರಣ ವಿಚಾರದಲ್ಲಿ ಶಾಸಕರು ವರ್ತಕರ ಕೈಗೊಂಬೆಯಾಗಿರುವುದು ಖಂಡನೀಯ ಎಂದು ತಾಲೂಕು ರೈತಸಂಘ (ಹಸಿರುಸೇನೆ)ಪ್ರಧಾನ ಕಾರ್ಯದರ್ಶಿ ಲೋಕೇಶ್ ಗೌಡ ಆರೋಪಿಸಿದರು. ಪ್ರಗತಿಪರ ಸಂಘ ಸಂಸ್ಥೆಗಳಿಂದ ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಪಟ್ಟಣದ ನಾಗಯ್ಯ ರೆಡ್ಡಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಒತ್ತುವರಿ ಕಟ್ಟಡಗಳನ್ನು ಸರ್ಕಾರದ ಆದೇಶದಂತೆ ತೆರವುಗೊಳಿಸಬೇಕೆಂಬ ನಿಯಮವಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತಗಳ ಒಲೈಕೆಗಾಗಿ ರಸ್ತೆ ಅಗಲೀಕರಣ ಬಿಟ್ಟು ಪಟ್ಟಣದ ಹೊರವಲಯದಲ್ಲಿ ರೈತರ ಜಮೀನು ಕಬಳಿಸಿ ಬೈಪಾಸ್ ರಸ್ತೆ ಮಾಡುವುದು ಸರಿಯಲ್ಲ ಎಂದರು. ಕರವೇ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಮಾತನಾಡಿ, ದೇಶದ ಉದ್ದಗಲಕ್ಕೂ ರಸ್ತೆ ಅಗಲೀಕರಣವಾಗಿದ್ದು ತಾಲೂಕಿನಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ರಸ್ತೆ ಅಗಲೀಕರಣ ನೆನೆಗುದಿಗೆ ಬಿದ್ದಿದೆ ಎಂದು ಲೇವಡಿಮಾಡಿದರು. ಪ್ರತಿಭಟನೆಯಲ್ಲಿ ತಾಯ್ನಾಡು ಕನ್ನಡಿಗರ ರಕ್ಷಣಾವೇದಿಕೆ, ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆ, ಕರ್ನಾಟಕ ಭೋವಿ ಮಹಾಸಭಾ, ಗಡಿನಾಡು ಕನ್ನಡಿಗರ ಸಮರ ಸೇನೆ ಹಾಗೂ ಇತರೆ ಸಂಘ ಸಂಸ್ಥೆಗಳು ಭಾಗವಹಿಸಿದ್ದವು.
ಬಿಜೆಪಿ ಸೋಲು: ರಾಜಿನಾಮೆಗೆ ಹೆಚ್ಚಿದ ಒತ್ತಾಯ
ಕೋಲಾರ: ಅಸ್ಪೃಶ್ಯರನ್ನು ರಾಜಕೀಯ ಅಧಿಕಾರದಿಂದ ಹತ್ತಿಕ್ಕುವುದಕ್ಕೆ ಹಿನ್ನಡೆಯಾಗಿದ್ದು, ಜಾತಿವಾದಿಗಳಿಗೆ ಮುಖಭಂಗವಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಮುಖಂಡ ಬಸಾಪುರದ ಕೆ.ಎಚ್. ಮಧುಸೂದನ್ ತಿಳಿಸಿದ್ದಾರೆ. ಹೇಳಿಕೆ ನೀಡಿರುವ ಅವರು 4,18,927 ರಷ್ಟು ಮತದಾರರು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ್ದು, ಕಳೆದ ಚುನಾವಣೆಯಲ್ಲಿ ಕೇವಲ 21 ಸಾವಿರ ಮತಗಳ ಅಂತರ ಕಾಯ್ದುಕೊಂಡು ದ್ವಿತೀಯ ಸ್ಥಾನದಲ್ಲಿದ್ದ ಬಿಜೆಪಿ ಈ ಬಾರಿ ಮೋದಿ ಅಲೆ ಇದ್ದರೂ 1.51 ಲಕ್ಷಕ್ಕೂ ಮೀರಿ ಮತಗಳ ಅಂತರಕ್ಕೆ ಕುಸಿದು ಮೂರನೇ ಸ್ಥಾನಕ್ಕೆ ಬಂದಿದ್ದು ಡಿ.ಎಸ್. ವೀರಯ್ಯನವರಿಗೆ ಟಿಕೆಟ್ ತಪ್ಪಿಸಿ ಕಡೆಗಣಿಸಿದ್ದೇ ಸೋಲಿಗೆ ಕಾರಣ ಎಂದಿದ್ದಾರೆ. ಜಿಲ್ಲಾಧ್ಯಕ್ಷ ಒಳಗೊಂಡಂತೆ ಮುಖಂಡರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಮತ್ತು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ನಟ ರಘುವೀರ್‌ಗೆ ಶ್ರದ್ಧಾಂಜಲಿ
ಟೇಕಲ್: ಇತ್ತೀಚೆಗೆ ನಿಧನರಾದ ನಟ ರಘುವೀರ್ ಅವರಿಗೆ ಮಾಕಾರಹಳ್ಳಿ ರಘುವೀರ್ ಅಭಿಮಾನ ಬಳಕ ಶ್ರದ್ಧಾಂಜಲಿ ಸಲ್ಲಿಸಿತು. ಗ್ರಾಮದ ಅಂಬೇಡ್ಕರ್ ಯುವ ವೇದಿಕೆ ಗೌರವಾಧ್ಯಕ್ಷ ಮಂಜುನಾಥ್ ಮಾತನಾಡಿ, 'ರಘುವೀರ್ ಉತ್ತಮ ನಟ. ಹಾಗಾಗಿ ಅವರ ಚಿತ್ರಗಳು ಯಶಸ್ವಿಯಾಗಿದ್ದವು' ಎಂದು ತಿಳಿಸಿದರು. ಸಭೆಯಲ್ಲಿ ಚಲಪತಿ ಮಾತನಾಡಿದರು. ಶ್ರದ್ಧಾಂಜಲಿ ಸಭೆಯಲ್ಲಿ ಕಾಕಪ್ಪ, ನಾಗರಾಜ್, ರಘುವೀರ್ ಅಭಿಮಾನ ಬಳಗದ ಅಬ್ಬಯ್ಯ, ನಾರಾಯಣಸ್ವಾಮಿ, ವಕೀಲ ಹರೀಶ್, ಆನಂದ್, ಹರೀಶ್, ರಾಮಮೂತಿ, ಮುನಿರಾಜು, ನಾಗೇಶ್ ಮುಂತಾದವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ರಘವೀರ್ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ನಡೆಸಿಕೊಡಲಾಯಿತು.
ಗಾಯತ್ರಿ ದೇಗುಲದ ವಾರ್ಷಿಕೋತ್ಸವ
ಮುಳಬಾಗಲು: ಪಟ್ಟಣದ ಅಗ್ರಹಾರ ವಿಠಲಕುಂಟೆ ವೇದಮಾತ ಗಾಯತ್ರಿ ದೇವಾಲಯದಲ್ಲಿ ಸೋಮವಾರ ದೇಗುಲದ ಮೂರನೇ ವಾರ್ಷಿಕೋತ್ಸವ ನಡೆಯಿತು. ಬೆಳಿಗ್ಗೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಲೋಕಕಲ್ಯಾಣಾರ್ಥಕ್ಕಾಗಿ ಗಣಹೋಮ, ಇನ್ನಿತರ ಪೂಜೆಗಳು ನಡೆದವು. ಶ್ರೀರಂಗ ವಿಠಲ ಪ್ರಿಯಾ ಭಜನ ಮಂಡಳಿಯವರಿಂದ ಭಜನೆ ಹಾಗೂ ಪಟ್ಟಣದ ಪ್ರಮುಖ ಬೀದಿಗಲ್ಲಿ ವೇದಮಾತ ಗಾಯತ್ರಿ ದೇವಿ ವೈಭವ ಉತ್ಸವ ನಡೆಯಿತು. ಕೋಲಾರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಮು.ಕೃ.ಪದ್ಮನಾಭರಾವ್, ಕೃಷ್ಣಮೂರ್ತಿ ಮುಂತಾದವರು ಭಾಗವಹಿಸಿದ್ದರು.
ಮನೆ ಬಾಗಿಲು ಮುರಿದು ದರೋಡೆ
ಕೆಜಿಎಫ್: ಮನೆಯ ಬಾಗಿಲು ಮುರಿದು ನಗದು ಸೇರಿದಂತೆ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ವರ್ಣನಗರ ಬಡಾವಣೆಯ 8ನೇ ಅಡ್ಡ ರಸ್ತೆ ನಿವಾಸಿ ಕೇಶವರೆಡ್ಡಿ ಭಾನುವಾರ ಮಧ್ಯಾಹ್ನ ತಮ್ಮ ಕುಟಂಬ ಸಮೇತ ಶಿಡ್ಲಘಟ್ಟಕ್ಕೆ ಹೋಗಿದ್ದರು. ಸೋಮವಾರ ಸಂಜೆ ಮನೆಗೆ ಬಂದು ನೋಡಿದಾಗ ಮನೆಯ ಮುಖ್ಯ ಬಾಗಿಲನ್ನು ಮುರಿದು, ಕಳ್ಳರು ಬೀರುವಿನಲ್ಲಿಟ್ಟಿದ್ದ 60 ಗ್ರಾಂ ಚಿನ್ನದ ಒಡವೆಗಳು, 1 ಕೆಜಿ ಬೆಳ್ಳಿ, 2 ಸಾವಿರ ನಗದು ಸೇರಿ 2 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.