ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸರ್ಕಾರಿ ಸೌಲಭ್ಯಗಳ ಅರಿವು ಮೂಡಿಸಿ

Srinivasa Murthy VN
Updated On : 20 May 2014, 12:20 pm

ಚಿಕ್ಕಬಳ್ಳಾಪುರ: ಸರ್ಕಾರದ ಜಾರಿಗೆ ತರುವ ಯೋಜನೆಗಳಿಂದ ಸಿಗುವ ಸವಲತ್ತುಗಳನ್ನು ಫಲಾನುಭವಿಗಳು ಸಮರ್ಪಕ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಈ ಕುರಿತು ಅಧಿಕಾರಿಗಳು ಹೆಚ್ಚಿಗೆ ಅರಿವು ಮೂಡಿಸುವ ಕೆಲಸವನ್ನು ಕೈಗೊಳ್ಳಬೇಕು. ಆಗ ಮಾತ್ರ ಯೋಜನೆ ಜಾರಿಗೆಗೆ ಸಾರ್ಥಕತೆ ಬರುತ್ತದೆ ಎಂದು ಶಾಸಕ ಕೆ.ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದ ಸಮೀಪಲ್ಲಿರುವ ಕೃಷಿ ಇಲಾಖೆ ಕಚೇರಿಯಲ್ಲಿ ಆಯೋಜಿಸಿದ್ದ ಕೃಷಿ ಪ್ರಚಾರ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಾಸ್ತವವಾಗಿ ಬಹಳಷ್ಟು ಮಂದಿಗೆ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಸಮರ್ಪಕವಾಗಿ ತಿಳಿದಿರುವುದಿಲ್ಲ. ಇಲಾಖೆಯಿಂದ ನಿರಂತರ ಸಂಪರ್ಕವನ್ನು ಸಾಧಿಸಿಕೊಂಡು ಅಧಿಕಾರಿಗಳೊಂದಿಗೆ ಸಂಬಂಧವನ್ನಿಟ್ಟುಕೊಂಡಿರುವವರು ಮಾತ್ರ ಪದೇ ಪದೇ ಸವಲತ್ತುಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗುತ್ತಾರೆ. ಯೋಜನೆಯ ಬಗ್ಗೆ ತಿಳಿಯದೇ ಕೆಲವರು ಹಿಂದುಳಿಯುತ್ತಾರೆ. ಇದರಿಂದ ಕಾರ್ಯಕ್ರಮ ಪರಿಪೂರ್ಣವಾಗಿ ಯಶಸ್ವಿಯಾಗಲು ತೊಡಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ವ್ಯಾಪಕವಾಗಿ ಜನರಿಗೆ ತಿಳಿಸಬೇಕು. ಇದಕ್ಕಾಗಿ ನಾನಾ ರೀತಿಯಲ್ಲಿ ಪ್ರಚಾರವನ್ನು ಕೈಗೊಳ್ಳಬೇಕೆಂದರು.
ಕೃಷಿ ಇಲಾಖೆಯ ಜಂಟಿ  ಕೃಷಿ ನಿರ್ದೇಶಕ ಎ.ರಾಮದಾಸ್ ಮಾತನಾಡಿ, ಮೇ 19 ರಿಂದ 28ರವರೆಗೆ ಅಂದರೆ ಹತ್ತು ದಿನಗಳವರೆಗೆ ಕೃಷಿ ರಥ  ಸಂಚರಿಸಲಿದ್ದು, ಜಿಲ್ಲೆಯ 26 ಹೋಬಳಿ 151 ಗ್ರಾಮ ಪಂಚಾಯಿತಿ 1419 ಗ್ರಾಮಗಳಲ್ಲಿ ಸಂಚರಿಸಲಿದೆ. ಪ್ರತಿ ಗ್ರಾಮದಲ್ಲಿ ರೈತರೊಂದಿಗೆ ಚರ್ಚಿಸಿ,ಅವರಿಗೆ ಅಗತ್ಯವಿರುವ ಮಾಹಿತಿಯನ್ನು ನೀಡಲಿದ್ದು ಧ್ವನಿ ವರ್ಧಕ ಹಾಗೂ ಕರ ಪತ್ರಗಳ ಮೂಲಕ ಸಹ ರೈತರಲ್ಲಿ ಜಾಗೃತಿ ಮೂಢಿಸಲಾಗುತ್ತದೆ ಎಂದರು.  ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ಆಂಜಿನಪ್ಪ ಸೇರಿ ಅನೇಕರಿದ್ದರು.

ಕೃಷಿ ಮಾಹಿತಿ ಆಂದೋಲನ
ಗೌರಿಬಿದನೂರು: ತಾಂತ್ರಿಕ ಮಾಹಿತಿ ಮತ್ತು ಯೋಜನೆಗಳ ಬಗ್ಗೆ ಅರಿವಿಮೂಡಿಸಲು ರೈತರನ್ನು ಸಜ್ಜುಗೊಳಿಸುವುದು ಕೃಷಿ ಮಾಹಿತಿ ಆಂದೋಲನದ ಮುಖ್ಯ ಉದ್ದೇಶವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಅನುರೂಪ ತಿಳಿಸಿದರು. 20014-15ನೇ ಸಾಲಿನ ಕೃಷಿ ಮಾಹಿತಿ ಆಂದೋಲನದಲ್ಲಿ ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್ ಮಾತನಾಡಿ, ದೇಶದ ಆಹಾರ ಭದ್ರತೆ ಹೆಚ್ಚಿಸಿ ರೈತರ ಜೀವನ ಮಟ್ಟ ಸುಧಾರಿಸುವುದು ಕೃಷಿ ಇಲಾಖೆ ಉದ್ದೇಶವಾಗಿದೆ. ಮುಂಗಾರು ಮಳೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇದು ಸೂಕ್ತ ಕಾಲ ಎಂದರು. ಜಿಪಂ ಸದಸ್ಯ ಕೇಶವರೆಡ್ಡಿ, ತಾಪಂ ಅಧ್ಯಕ್ಷ ಲಕ್ಷ್ಮೀದೇವಮ್ಮ, ಪಾರ್ವತಮ್ಮ, ಪ್ರಬಾ ನಾರಾಯನಗೌಡ, ಬೊಮ್ಮಣ್ಣ ಇದ್ದರು.

ಕೃಷಿ ಆಯೋಗ ರಚನೆಗೆ ರೈತ ಸಂಘ ಆಗ್ರಹ
ಕೋಲಾರ: ಕೇಂದ್ರ ಕೃಷಿ ಬೆಲೆ ಅಯೋಗದ ಮಾದರಿಯಲ್ಲಿ ರಾಜ್ಯದಲ್ಲಿಯೂ ಕೃಷಿ ಆಯೋಗ ರಚಿಸುವುದಾಗಿ ಕಾಂಗ್ರೆಸ್ ಸರ್ಕಾರ ನೀಡಿದ ರೈತ ಕುಲದ ದೊಡ್ಡ ಭರವಸೆಯನ್ನು ಈಡೇರಿಸಲು ಸರ್ಕಾರ ಮರೆತಿದ್ದು ಕೃಷಿ ಬೆಲೆ ಆಯೋಗ ರಚನೆ ಮಾಡಲು ಕೂಡಲೇ ಮುಂದಾಗಬೇಕೆಂದು ಒತ್ತಾಯಿಸಿ ರೈತ ಸಂಘ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಸಂಚಾಲಕ ಶ್ರೀನಿವಾಸಗೌಡ ಮಾತನಾಡಿ, ಕೃಷಿ ಕ್ಷೇತ್ರದ ಸುಧಾರಣೆಗೆ ಮತ್ತು ಮಾರುಕಟ್ಟೆ ಮೂಲ ಸೌಕರ್ಯ ಅಭಿವೃದ್ಧಿಗೆ ಉಗ್ರಾಣಗಳು ಮತ್ತು ಶೀಥಲ ಗೃಹಗಳ ನಿರ್ಮಾಣವನ್ನು ಕೆಳ ಹಂತದ ಕೃಷಿ ಕ್ಷೇತ್ರದಲ್ಲಿಯೂ ಲಭ್ಯವಾಗುವಂತೆ ಮಾಡಲು ಸರ್ಕಾರದ ಹಿರಿಯ ಅಧಿಕಾರಿ ಕೃಷ್ಣರಾವ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ ಸರ್ಕಾರ ಕೃಷಿ ಸಂಕಷ್ಟಗಳಿಗೆ ಸಂಜೀವಿನ ಎಂದು ಭಾವಿಸಿದ್ದ ಈ ಕೃಷಿ ಬೆಲೆ ಆಯೋಗವನ್ನು ಸರ್ಕಾರ ಮರೆತಿದ್ದು ಕೂಡಲೇ ಆಯೋಗ ರಚನೆ ಮಾಡಬೇಕೆಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ನಾರಾಯಣಗೌಡ ಮಾತನಾಡಿ, ರೈತ ಸಮುದಾಯದಲ್ಲಿ ಹೊಸ ಆಶಾಭಾವ ಹುಟ್ಟಿಸಿದ್ದ ಈ ಆಯೋಗವನ್ನು ಸರ್ಕಾರ ಪುನರಜ್ಜೀವಗೊಳಿಸಬೇಕು ಎಂದರು. ರೈತ ಸಂಘದ ಹುಲ್ಕೂರು ಹರಿಕುಮಾರ್, ಮೂರಾಂಡಹಳ್ಳಿ ಶಿವಾರೆಡ್ಡಿ, ಮುಳಬಾಗಿಲು ರಂಜಿತ್ ಕುಮಾರ್, ತೇರ್ನಹಳ್ಳಿ ಆಂಜಿನಪ್ಪ, ಕ್ಯಾಸಂಬಳ್ಳಿ ಪ್ರತಾಪ್ ಸೇರಿ ಅನೇಕರಿದ್ದರು.

ರೈತರಿಗೆ ಮಾಹಿತಿ ನೀಡಿ: ಜಿಪಂ ಸದಸ್ಯ ಕೃಷ್ಣಪ್ಪ
ಗುಡಿಬಂಡೆ: ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕೊರತೆಯಿಂದ ರೈತರು ಅವುಗಳನ್ನು ಪಡೆಯಲು ವಿಫಲರಾಗುತ್ತಿದ್ದಾರೆ. ಆದ್ದರಿಂದ, ಕಾಲ ಕಾಲಕ್ಕೆ ಕೃಷಿ ಇಲಾಖಾಧಿಕಾರಿಗಳು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿಬೇಕು ಎಂದು ಜಿಪಂ ಸದಸ್ಯ ಎಂ.ವಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆಯಲ್ಲಿ ನಡೆದ ಕೃಷಿ ಮಾಹಿತಿ ಆಂದೋಲನ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ, 'ಭಾರತದ ಆರ್ಥಿಕತೆಯ ಬೆನ್ನೆಲುಬು ಕೃಷಿ. ಇಲಾಖೆಯ ವತಿಯಿಂದ ನೀಡುವ ಸವಲತ್ತುಗಳೊಂದಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯಬಹುದು. ಕೃಷಿ ಪದ್ಧತಿಯಲ್ಲಾಗಿರುವ ಬದಲಾವಣೆಗಳಿಗೆ ಹೊಂದಿಕೊಂಡು ಅದನ್ನು ಅನುಸರಿಸಿದರೆ ರೈತರು ಹೆಚ್ಚಿನ ಲಾಭ ಮಾಡಿಕೊಳ್ಳಬಹುದು' ಎಂದು ಅವರು ತಿಳಿಸಿದರು.  ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಗರಾಜ್ ಮಾತನಾಡಿ, 'ಕೃಷಿಯನ್ನು ಅಭಿವೃದ್ಧಿಪಡಿಸುವಲ್ಲಿ ಇಲಾಖೆಯ ಅಧಿಕಾರಿಗಳು ಸೌಲಭ್ಯಗಳ ಜೊತೆಗೆ ಮಾಹಿತಿಯನ್ನು ನೀಡಬೇಕು' ಎಂದು ತಿಳಿಸಿದರು. ಮೇ 19ರಿಂದ ಪ್ರಾರಂಭವಾದ ಕೃಷಿ ಮಾಹಿತಿ ಸಭೆ ಹಾಗೂ ಪ್ರಚಾರ ಕಾರ್ಯಕ್ರಮ ಎಲ್ಲಾ ಗ್ರಾಪಂಗಳಲ್ಲಿ ನಡೆಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ತಿಳಿಸಿದರು. ಇದೇ ವೇಳೆ, ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡ ರಥಕ್ಕೆ ಗಣ್ಯರು ಚಾಲನೆ ನೀಡಿದರು.
ನಂತರ ಕೃಷಿ ಅಧಿಕಾರಿ ಶಂಕರಯ್ಯ ಹಾಗೂ ಭೂ ಚೇತನ ಅನುವುಗಾರರು ಪಟ್ಟಣದ ಮುಖ್ಯ ಬೀದಿಯಲ್ಲಿ ರೈತರಿಗೆ ಕೃಷಿ ಮಾಹಿತಿಯನ್ನೊಳಗೊಂಡ ಭಿತ್ತಿಪತ್ರಗಳನ್ನು ವಿತರಿಸಿದರು.  ತಹಸೀಲ್ದಾರ್ ಶೈಲಜಾ, ತಾಪಂ ಅಧ್ಯಕ್ಷೆ ಆನಂದಮ್ಮ, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ವೈ.ಒ.ರಾಮಕೃಷ್ಣಪ್ಪ, ಇ.ಒ. ತಿಮ್ಮಪ್ಪ, ಮ.ಗ.ಹೆಗಡೆ, ಎಚ್.ಆರ್.ಸುರೇಶ್, ರೈತ ಸಂಘಟನೆಯ ಪದಾಧಿಕಾರಿಗಳು, ಭೂಚೇತನ ಅನುವುಗಾರರು ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement