ಅಕ್ರಮ ಮರಳು: ಅಧಿಕಾರಿಗಳ ಅಮಾನತು ಮಾಡಿ
ಚಿಂತಾಮಣಿ: ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಕ್ರಮ ಮರಳು ಸಾಗಾಣಿಕೆಗೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ನಂತರ ಪ್ರತಿಭಟನಾಗಾರರನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ರಘುನಾಥರೆಡ್ಡಿ, ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಅಂತರ್ಜಲ ಮಟ್ಟ ಹೆಚ್ಚಿಸಲು ಮರಳು ಸಂರಕ್ಷಣೆ ಮಾಡುವುದಕ್ಕೆ ಅಕ್ರಮ ಮರಳು ಸಾಗಾಣಿಕೆ ನಡೆಸುವುದು ಕಾನೂನು ಬಾಹಿರವೆಂದು ಸುಪ್ರಿಂ ಕೋರ್ಟ್ ಆದೇಶ ನೀಡಿದ್ದರೂ ಕೆಲವು ಪ್ರಭಾವಿ ವ್ಯಕ್ತಿಗಳ ಕುಮ್ಮಕ್ಕಿನಿಂದ ಇದನ್ನು ಲೆಕ್ಕಿಸದೆ ಸಾಗಾಣಿಕೆ ನಡೆಯುತ್ತಿದ್ದರೂ ತಾಲೂಕಿನ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡಿದ್ದಾರೆ. ಹೀಗಾಗಿ ಕಂದಾಯ ಹಾಗೂ ಭೂ ವಿಜ್ಞಾನ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ಗೋಶಾಲೆ ತೆರೆದು ಜಾನುವಾರುಗಳಿಗೆ ಮೇವು ಮತ್ತು ನೀರು ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಶಾಸಕ ಜೆ.ಕೆ.ಕೃಷ್ಣಾರೆಡ್ಡಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪನೆ ಮಾಡಿದ್ದು, ಜಿಲ್ಲಾ ಆಡಳಿತ ಎತ್ತೆಚ್ಚುಕೊಂಡು ಸಂಬಂಧಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠ ಅಧಿಕಾರಿಗಳ ಜೊತೆಯಲ್ಲಿ ಒಂದುಗೂಡಿ ಕೆಲಸ ಮಾಡಿದರೆ ಈ ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಬಹುದೆಂದು ನುಡಿದರು.
ಕೆ.ಎಸ್.ಕೃಷ್ಣ, ನಾರಾಯಣಸ್ವಾಮಿ, ವೆಂಕಟೇಶಪ್ಪ, ಎಸ್.ವಿ.ಗಂಗಪ್ಪ, ಸೀತಾರಾಮರೆಡ್ಡಿ, ಬೈರೆಡ್ಡಿ, ಯಲ್ಲಪ್ಪ, ಕೃಷ್ಣಮೂರ್ತಿ, ನರಸಪ್ಪ, ನಾರಾಯಣಸ್ವಾಮಿ, ತಿಪ್ಪಣ್ಣ, ಶೇಖರ್, ಅಮರ್, ಬಿ.ನಾರಾಯಣಸ್ವಾಮಿ, ರಂಜಿತ್‌ಕುಮಾರ್, ಅಸ್ಲಂ, ಚಂದ್ರ, ದೇವರಾಜ್, ಶ್ರೀನಿವಾಸ್ ಸೇರಿದಂತೆ ಇನ್ನೂ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.