ಕೊಳವೆ ಬಾವಿ ಕೊರೆಯಲು ಒತ್ತಾಯ: ಪ್ರತಿಭಟನೆ
ಗುಬ್ಬಿ : ತಾಲೂಕಿನ ಕಡಬಾ ಹೋಬಳಿ ಹಳ್ಳೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕೊರೆದ ಕೊಳವೆ ಬಾವಿಯಲ್ಲಿ ನೀರು ಬಾರದಿದ್ದರಿಂದ ಮತ್ತೊಂದು ಕೊಳವೆ ಬಾವಿ ಕೊರೆಯುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಖಾಲಿ ಕೊಡ ಹಿಡಿದು ಬೋರ್‌ವೆಲ್ ಲಾರಿಯನ್ನು ಗ್ರಾಮದಿಂದ ಹೊರಹೋಗದಂತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಕಳೆದೊಂದು ವರ್ಷದಿಂದಲೂ ಕುಡಿಯುವ ನೀರಿಗಾಗಿ ಗ್ರಾಮದ ಜನತೆ ತೀವ್ರತರ ಸಮಸ್ಯೆ ಎದುರಿಸುತ್ತಿದ್ದು ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಕೆಲಕಾಲ ಪೂರೈಕೆ ಮಾಡುತ್ತಿದ್ದರು. ಆದರೆ ಈಗ ಟ್ಯಾಂಕರ್ ಮೂಲಕವೂ ನೀರು ಪೂರೈಕೆ ಮಾಡುತ್ತಿಲ್ಲ. ಅಲ್ಲದೆ ಗ್ರಾಮದಲ್ಲಿ 150 ಕ್ಕೂ ಹೆಚ್ಚು ಕುಟುಂಬಗಳು ಕುಡಿಯುವ ನೀರಿಗಾಗಿ ತೀವ್ರತರ ಸಮಸ್ಯೆ ಎದುರಿಸುವಂತಾಗಿದೆ. ಇದೀಗ ಕುಡಿಯುವ ನೀರಿಗಾಗಿ ಕೊಳವೆ ಬಾವಿಕೊರೆದಿದ್ದು ಸುಮಾರು 1000 ಅಡಿಯವರೆಗೆ ಕೊರೆದರೂ ನೀರು ಬಾರದ ಕಾರಣ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಕೊಳವೆ ಬಾವಿ ಕೊರೆಯುವಂತೆ ಒತ್ತಾಯಿಸಿ ಬೋರ್‌ವೆಲ್ ಲಾರಿಯನ್ನು ಗ್ರಾಮದಿಂದ ಹೊರಹೋಗದಂತೆ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಶಾಲೆಯಲ್ಲಿ ಬಿಸಿಯೂಟ ತಯಾರಿಕೆ ಹಾಗೂ ಅಂಗನವಾಡಿ ಮಕ್ಕಳಿಗೆ ಊಟ, ತಿಂಡಿ ತಯಾರಿಸಲು ಕಷ್ಟವಾಗಿದೆ. ಆದ್ದರಿಂದ ತ್ವರಿತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯೆ ಶಿವಮ್ಮ, ಮುಖಂಡರುಗಳಾದ ಲೋಕೇಶ್, ನಂದೀಶಯ್ಯ, ಕುಮಾರಯ್ಯ, ಅಂಬಿಕಮ್ಮ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.