ಕೋಚಿಮುಲ್ ಚುನಾವಣೆ: ಜೆಡಿಎಸ್ಗೆ ಬಂಡಾಯದ ಬಿಸಿ
ಕ.ಪ್ರ. ವಾರ್ತೆ ಕೋಲಾರ ಮೇ 20
ಕೋಚಿಮುಲ್ ಚುನಾವಣೆಗೆ ಇನ್ನು ಐದು ಐದು ದಿನ ಮಾತ್ರ ಬಾಕಿ ಉಳಿದಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಮಂಗಳವಾರ ಕಡೆ ದಿನವಾಗಿತ್ತು. ಕೋಲಾರ ತಾಲೂಕಿನಿಂದ ಜೆಡಿಎಸ್ ಪರವಾಗಿ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸಿರುವ ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಶಂಕರೇಗೌಡ, ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಸಹೋದರ ಶಿವಾನಂದ ಮುಖಂಡರ ಮಾತು ಮೀರಿ ಕಣದಲ್ಲಿ ಉಳಿದಿರುವುದು ಜೆಡಿಎಸ್ ನಲ್ಲಿ ಎಲ್ಲವೂ ಸರಿಯಲ್ಲವೆಂಬುದಕ್ಕೆ ಮತ್ತೊಂದು ನಿದರ್ಶನವಾಗಿದೆ.
ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ ಪಕ್ಷದೊಳಗಿನ ಮುಸುಕಿನ ಗುದ್ದಾಟ, ಒಣ ಪ್ರತಿಷ್ಠೆ, ಗುಂಪುಗಾರಿಕೆಯಿಂದಾಗಿ ಪಕ್ಷ ಹೀನಾಯ ಸೋಲು ಅನುಭವಿಸಿದೆ. ಕೋಚಿಮುಲ್ ಚುನಾವಣೆಯಲ್ಲೂ ಜೆಡಿಎಸ್ನಲ್ಲಿ ಒಮ್ಮತದ ಅಭ್ಯರ್ಥಿಗಳ ಆಯ್ಕೆ ಸಾಧ್ಯವಾಗದೆ ಬಂಡಾಯದ ಬಿಸಿ ತಟ್ಟಿದೆ. ಜೆಡಿಎಸ್ ಅಧಿಕೃತ ಅಭ್ಯರ್ಥಿ ತಾವೇ ಎಂದು ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ ಹೇಳಿಕೊಂಡಿದ್ದಾರೆ.
ಇದರಿಂದ ಇನ್ನಿಬ್ಬರು ಅಭ್ಯರ್ಥಿಗಳಾದ ಶಂಕರೇಗೌಡ, ಶಿವಾನಂದ ಮುಖಂಡರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಮಾಜಿ ಸಚಿವ ಶ್ರೀನಿವಾಸಗೌಡರ ಸಹೋದರ ಶಿವಾನಂದ ತಾವೇ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿಕೊಂಡಿದ್ದರು. ಶಂಕರೇಗೌಡ ಕಣದಲ್ಲಿ ಉಳಿಯುವುದಾಗಿ ಮುಖಂಡರಿಗೆ ಸವಾಲು ಹಾಕಿರುವುದರಿಂದ ಜೆಡಿಎಸ್, ಎದುರಾಳಿಗಳ ಪೈಪೋಟಿಗಿಂತ ಸ್ವಪಕ್ಷೀಯರಿಂದಲೇ ಬಂಡಾಯ ಎದುರಿಸುವಂತಾಗಿದೆ.
ಪಕ್ಷದಲ್ಲಿ ಉಂಟಾಗಿರುವ ಬಂಡಾಯವನ್ನು ಶಮಗೊಳಿಸಲಾಗದೆ ಮಾಜಿ ಸಚಿವ ಶ್ರೀನಿವಾಸಗೌಡ ಪೇಚಿಗೆ ಸಿಲುಕಿದ್ದಾರೆ. ಶಿವಾನಂದ ಮತ್ತು ಶಂಕರೇಗೌಡರನ್ನು ಸಮಾಧಾನಪಡಿಸಲಾಗದೆ ಇಕ್ಕಳದಲ್ಲಿ ಸಿಲುಕಿದ್ದಾರೆ. ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡರ ಪರವಾಗಿಯೂ ಬಹಿರಂಗ ಬೆಂಬಲ ವ್ಯಕ್ತಪಡಿಸಲಾಗದೆ ಧರ್ಮಸಂಕಟಕ್ಕೆ ಗುರಿಯಾಗಿದ್ದಾರೆ. ಮಂಗಳವಾರ ಸಂಜೆ ದಿಢೀರ್ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ರಾಮಕೃಷ್ಣೇಗೌಡ ಎಂದು ಘೋಷಣೆ ಮಾಡುವ ಮೂಲಕ ಬಂಡಾಯದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಒಂದು ವೇಳೆ ಬುಧವಾರ ಸಂಜೆಯ ಒಳಗಾಗಿ ಅವರಿಬ್ಬರು ನಿವೃತ್ತಿ ಹೊಂದಿ ಅಧಿಕೃತ ಅಭ್ಯರ್ಥಿ ಪರವಾಗಿ ಕೆಲಸ ಮಾಡದಿದ್ದರೆ, ಪಕ್ಷದಿಂದ ಉಚ್ಚಾಟನೆ ಮಾಡುವುದಾಗಿ ಪಕ್ಷದ ಮುಖಂಡ ದಯಾನಂದ ಎಚ್ಚರಿಕೆ ನೀಡಿದ್ದಾರೆ.
ಅಭ್ಯರ್ಥಿ ರಾಮಕೃಷ್ಣೇಗೌಡ ಮಾತನಾಡಿ, ಎಲ್ಲರ ತೀರ್ಮಾನದಂತೆ ನಾನು ಅಭ್ಯರ್ಥಿಯಾಗಿದ್ದೇನೆ. ಗೆದ್ದು ಒಕ್ಕೂಟದಲ್ಲಿ ಉತ್ತಮ ಸೇವೆ ಮಾಡುತ್ತೇನೆಂದು ಹೇಳಿಕೊಂಡಿದ್ದಾರೆ.
ಎಪಿಎಂಸಿ ಅಧ್ಯಕ್ಷ ಗೋಪಾಲಪ್ಪ, ಮಾಜಿ ಅಧ್ಯಕ್ಷ ಈರಪ್ಪ, ಬಾಲಗೋವಿಂದ ಇತರರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಪಕ್ಷದ ಪ್ರಮುಖ ಜಿಲ್ಲಾ ನಾಯಕರು ಗೈರು ಹಾಜರಾಗಿದ್ದು ಗಮನ ಸೆಳೆಯಿತು.