ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೆಹರೂ ಪಾರ್ಕ್‌ನಲ್ಲಿ ಆಟ: ಆಕ್ಷೇಪ

Srinivasa Murthy VN
Updated On : 21 May 2014, 2:06 am

ಮುಳಬಾಗಲು: ಪಟ್ಟಣದ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದ ಒಡೆತನದ ನೆಹರೂ ಪಾರ್ಕ್‌ನಲ್ಲಿರುವ ಕುಸ್ತಿ ಪಂದ್ಯಾವಳಿಯ ಸ್ಧಳದಲ್ಲಿ ಕೆಲವರು ದಿನವಿಡೀ ಕ್ರಿಕೆಟ್ ಆಡುವುದರಿಂದ ಪಾರ್ಕ್‌ಗೆ ಬಂದು ಹೋಗುವವರಿಗೆ ತೊಂದರೆಯಾಗಿದೆ ಎಂದು ನಾಗರಿಕರು ತಹಸೀಲ್ದಾರ್‌ಗೆ ದೂರು ಸಲ್ಲಿಸಿದ್ದಾರೆ. ಪಾರ್ಕ್ ಬಳಿ ಇರುವ ಮಿನಿವಿಧಾನಸೌಧ, ತಾಪಂ ಕಚೇರಿ, ಖಜಾನೆ ಮುಂತಾದ ಸರ್ಕಾರಿ ಕಚೇರಿಗಳಿಗೆ  ಬರುವ ನೂರಾರು ಜನರು ದಣಿವಾರಿಸಿಕೊಳ್ಳಲು ಪಾರ್ಕಿನಲ್ಲಿರುವ ಮರದ ಕೆಳಗೆ ಕುಳಿತುಕೊಳ್ಳುತ್ತಾರೆ. ಆದರೆ, ಈ ವೇಳೆಯಲ್ಲಿ ಕೆಲವರು ಕ್ರಿಕೆಟ್ ಆಡುವುದರಿಂದ ಧಣಿವಾರಿಸಿಕೊಳ್ಳಲು ಬಂದವರಿಗೆ ಏಟುಗಳಾಗಿದೆ. ಇದನ್ನು ತಪ್ಪಿಸಲು ಕೋರಿದ್ದಾರೆ.

ಸೋಲು, ಗೆಲುವಾಯ್ತು ಮುಂದಿನ ಲೆಕ್ಕಾಚಾರ!
ಮಾಲೂರು: ಲೋಕಸಭೆ ಚುನಾವಣೆಯಲ್ಲಿ ತಾಲೂಕಿನಲ್ಲಿ ಬಿದ್ದ ಮತಗಳ ಸಂಖ್ಯೆ ಮಾತ್ರ ಜೆಡಿಎಸ್ ಹಾಗೂ ಕಾಂಗ್ರೆಸ್‌ನ ತಲೆ ಕೆಡಿಸಿಕೊಳ್ಳುವಂತೆ ಮಾಡಿದ್ದರೆ, ಬಿಜೆಪಿ ತನ್ನ ಸಾಧನೆಯ ಮತಗಳಿಕೆಯಿಂದ ಉತ್ತೇಜನಗೊಂಡಿದೆ. ಈ ಬಾರಿಯ ಕೋಲಾರ ಚುನಾವಣೆಯಲ್ಲಿ ಮಾಲೂರು ತಾಲೂಕಿನ ಎಲ್ಲಾ 5 ಹೋಬಳಿಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೆ, ಪಟ್ಟಣದಲ್ಲಿ ಬಿಜೆಪಿ ಮುಂದಿದೆ. ತಾಲೂಕಿನ ಕಸಬಾ, ಟೇಕಲ್, ಮಾಸ್ತಿ, ಕುಡಿಯನೂರು ಹಾಗೂ ಲಕ್ಕೂರು ಹೋಬಳಿಗಳಲ್ಲಿ 1,17,609 ಮತ ಚಲಾವಣೆಗಳಾಗಿದ್ದು, ಕಾಂಗ್ರೆಸ್‌ಗೆ 42,736, ಬಿಜೆಪಿಗೆ 35225, ಜೆಡಿಎಸ್‌ಗೆ39 648 ಮತ ಗಳಿಸಿವೆ.
ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ಜನಪ್ರಿಯತೆ ಕಾಂಗ್ರೆಸ್‌ಗೆ ಇನ್ನೂ ಹೆಚ್ಚು ಮತಗಳು ಬರಬೇಕಾಗಿದ್ದರೂ, ಕಳೆದ 3 ಚುನಾವಣೆಗಳಿಗಿಂತ ಕಾಂಗ್ರೆಸ್ ಈ ಬಾರಿ ಉತ್ತಮ ಸಾಧನೆ ಮಾಡಲು ಶೆಟ್ಟಿ ಫ್ಯಾಕ್ಟರ್ ಕೆಲಸ ಮಾಡಿದೆ. ಆದರೆ ಕೃಷ್ಣಯ್ಯಶೆಟ್ಟಿ ಅವರ ಜಾದೂ, ಹಾಲಿ ಶಾಸಕ ಮಂಜುನಾಥ್‌ಗೌಡರ ಜನಪ್ರಿಯತೆಗೆ ಪಟ್ಟಣದಲ್ಲಿ ಸೋಲುಂಟಾಗಿದೆ.  ಇವೆರಡು ಪಕ್ಷಗಳಿಕ್ಕಿಂತ ಮೋದಿ ಅಲೆ ಅಧಿಕ ಮತ ಗಳಿಸಿದೆ. ಪಟ್ಟಣದಲ್ಲಿ ಚಲಾವಣೆಯಾಗಿರುವ 17545 ಮತಗಳಲ್ಲಿ ಬಿಜೆಪಿ 9123, ಕಾಂಗ್ರೆಸ್ 6030, ಜೆಡಿಎಸ್ 1929 ಮತಗಳು ಗಳಿಸಿದ್ದು, 463 ಮಂದಿ ನೋಟಾ ಬಳಸಿದ್ದಾರೆ. ಹಾಲಿ ಶಾಸಕರಿದ್ದು, ಪುರಸಭೆಯಲ್ಲಿ 8 ಸದಸ್ಯರನ್ನು ಹೂಂದಿದ್ದರೂ ಕೇವಲ 1929 ಮತಗಳನ್ನು ಗಳಿಸಿರುವ ಜೆಡಿಎಸ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹುಟ್ಟು ಹಾಕಿದೆ. ಮೋದಿ ಹವಾ ಲೋಕಸಭಾ ಚುನಾವಣೆಯಲ್ಲಿ ಮಾತ್ರ  ಇರಬಹುದು.

ಕುಟುಂಬ ಕಲಹ; ಸಾರಿಗೆ ಚಾಲಕ ಆತ್ಮಹತ್ಯೆ
ಮಾಲೂರು:  ಕುಟುಂಬದ ಕಲಹದಿಂದ ಬೇಸತ್ತ ಕೆಎಸ್‌ಆರ್‌ಟಿಸಿ ಚಾಲಕನೊಬ್ಬ ರೈಲಿಗೆ ಸಿಕ್ಕಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಇಲ್ಲಿನ ರೇಲ್ವೇ ನಿಲ್ದಾಣದ ಬಳಿ ನಡೆದಿದೆ. ಅತ್ಮಹತ್ಯೆ ಮಾಡಿಕೊಂಡವನನ್ನು ಇಲ್ಲಿನ ವೆಂಕಟೇಶ್(52)ಎಂದು ಗುರುತಿಸಲಾಗಿದೆ. ಪಟ್ಟಣದ ಮಾರುತಿ ಬಡಾವಣೆಯಲ್ಲಿ ಜೀವನ ಸಾಗಿಸುತ್ತಿದ್ದ ವೆಂಕಟೇಶ್ ಡಿಪೋವಿನಲ್ಲೂ ಒಳ್ಳೆಯ ಹೆಸರು ಗಳಿಸಿದ್ದರು. ತನ್ನ ಸಹೋದ್ಯೋಗಿಯೂಡೆನೆ ತಮ್ಮ ಮನೆಯಲ್ಲಿ ನಿತ್ಯ ನಡೆಯುತ್ತಿರುವ ಜಗಳದ ಬಗ್ಗೆ ಪ್ರಸ್ತಾಪಿಸುತ್ತಿದ್ದ ವೆಂಕಟೇಶ್ ಹಲವು ಬಾರಿ ಅತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು ಎಂದು ಅತನೂಡನೆ ಕಾರ್ಯ ನಿರ್ವಹಿಸಿದ್ದ ನಿರ್ವಾಹಕ ವೆಂಕಟೇಶ್ ತಿಳಿಸಿದ್ದಾರೆ. ರೇಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕಂದಾಯ ಅದಾಲತ್ ಇಂದಿನಿಂದ
ಮುಳಬಾಗಲು: ತಾಲೂಕಿನ ಕಂದಾಯ ಇಲಾಖೆ ವತಿಯಿಂದ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ  ಮೇ21ರಿಂದ 29ರವರೆಗೂ ತಾಯಲೂರು ಹೋಬಳಿಯ ಏಳು ಕಂದಾಯ ವೃತ್ತಗಳ ಪರಧಿಯಲ್ಲಿ ಕಂದಾಯ ಅದಾಲತ್ ಏರ್ಪಡಿಸಲಾಗಿದೆ ಎಂದು ತಹಸೀಲ್ದಾರ್ ಏಕೇಶ್‌ಬಾಬು ತಿಳಿಸಿದ್ದಾರೆ. ಮೇ 21ರಂದು ಕೆ. ಬೈಯಪಲ್ಲಿ, 22ರಂದು ದೊಮ್ಮಸಂದ್ರ, 23ರಂದು ಮಲ್ಲನಾಯಕನಹಳ್ಳಿ, 24ರಂದು ತಿಮ್ಮರಾವುತನಹಳ್ಳಿ, 27ರಂದು ದೂಲಪಲ್ಲಿ, 28 ಮೋತಕಪಲ್ಲಿ, 29ರಂದು ತಾಯಲೂರು ಕಂದಾಯ ವೃತ್ತದ ಗ್ರಾಮಗಳಲ್ಲಿ ಅದಾಲತ್ ನಡೆಯಲಿದೆ. ರೈತರು ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಿ ಪರಿಹರಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಕೋಲಾರದಲ್ಲಿ ಧಾರಾಕಾರ ಮಳೆ: ಜನ ಸಂತಸ
ಕೋಲಾರ: ಬೇಸಿಗೆಯ ತಾಪದಿಂದ ನಲುಗಿದ್ದ ಕೋಲಾರ ಜನತೆ ಮಂಗಳವಾರ ವರುಣನ ಕೃಪೆಯಿಂದ ಕೊಂಚ ಮಟ್ಟಿಗೆ ಸಂತೃಪ್ತರಾದರು.
ಸಂಜೆ 4.14ಕ್ಕೆ ಪ್ರಾರಂಭವಾದ ಗುಡುಗು-ಸಿಡಿಲು ಸಮೇತ ಜೋರು ಮಳೆಯಿಂದಾಗಿ ನಗರದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತು. ರಾಜಾ ಕಾಲುವೆಗಳಲ್ಲಿ ಹರಡಿದ್ದ ಪ್ಲಾಸ್ಟಿಕ್ ಹಾಗೂ ಕಸಕಡ್ಡಿಗಳು ನೀರಿನಲ್ಲಿ ಕೊಚ್ಚಿ ಹೋಯಿತು. ಬಹುತೇಕ ಕಡೆ ಚರಂಡಿಗಳು ಹೂಳಿನಿಂದ ಮುಚ್ಚಿಕೊಂಡಿರುವುದರಿಂದ ಮಳೆ ನೀರು ಹೊರಚೆಲ್ಲಿ, ರಸ್ತೆಗಳೆಲ್ಲ ಕೆಸರು ಗದ್ದೆಯಾಗಿ ಪರಿವರ್ತನೆಗೊಂಡವು. ಕೋಲಾರ ಡಿಸಿ ಕಚೇರಿ ಮತ್ತು ಪಾಲಸಂದ್ರ ಬಡಾವಣೆಗೆ ಹೊಂದಿಕೊಂಡಿರುವ ರಾಜಾ ಕಾಲುವೆಯಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ಬಂದಿದ್ದ ಟ್ರ್ಯಾಕ್ಟರ್ ಮಳೆ ನೀರಿನಲ್ಲಿ ಮುಳುಗಿದ್ದರಿಂದ ಚಾಲಕ ಕೆಲ ಹೊತ್ತು ಟ್ರ್ಯಾಕ್ಟರ್ ಮೇಲೆ ಆಶ್ರಯ ಪಡೆದು ನಂತರ ಜೆಸಿಬಿ ಸಹಾಯದಿಂದ ದಡ ಸೇರಿದ ಘಟನೆ ನಡೆಯಿತು. ಕೋಲಾರ ಎಸಿ ಕಚೇರಿಯ ಅವರಣದಲ್ಲೂ ಮಳೆ ನೀರು ತುಂಬಿ ಮಿನಿ ಕೆರೆಯಾಗಿತ್ತು. ವಾಹನಗಳು ನೀರಿನಲ್ಲಿ ಮುಳುಗಿದ್ದವು, ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಸಮಯ ಮಳೆಯಾದರೂ ರಾಜಾ ಕಾಲುವೆಗಳ ಒತ್ತುವರಿ ಹಾಗೂ ಹೂಳು ತುಂಬಿರುವ ಪರಿಣಾಮ ಕೆರೆಗಳಿಗೆ ನೀರು ತುಂಬಲಾಗಲಿಲ್ಲ. ಬರದಿಂದ ತತ್ತರಿಸಿರುವ ಜಾನುವಾರುಗಳಿಗೆ ಈ ಮಳೆಯಿಂದ ಕೊಂಚ ಮೇವು ಸಿಗುವಂತಾಗಿದೆ. ತರಕಾರಿಗಳನ್ನು ಬೆಳೆಯುವುದಕ್ಕೆ ಸ್ವಲ್ಪ ಸಹಾಯವಾಗಬಹುದೆಂದು ರೈತರು ಅಭಿಪ್ರಾಯಿಸಿದ್ದಾರೆ.

ತೆಂಪೆರೆದ ಮಳೆರಾಯ; ರೃತರಲ್ಲಿ ಮಂದಹಾಸ
ಬಂಗಾರಪೇಟೆ:  ತಾಲೂಕಿನಲ್ಲಿ ಕಳೆದ ಕೆಲ ವರ್ಷಗಳಿಂದ ಮಳೆರಾಯನ ದರ್ಶನವಿಲ್ಲದೆ ಸಂಕಷ್ಟಗಳಿಗೆ ಸಿಲುಕಿದ್ದವರಿಗೆ ಮಂಗಳವಾರ ಸಂಜೆ ಬಿದ್ದ ಮಳೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.
ಕಳೆದ 8 ವರ್ಷಗಳಿಂದ ಮಳೆರಾಯನ ಮುನಿಸಿನಿಂದ ತಾಲೂಕಲ್ಲಿ ಯಾವುದೇ ಬೇಸಾಯವಿಲ್ಲದೆ ರೈತರು ಮಂಕಾಗಿ ಕೃಷಿ ಚಟುವಟಿಕೆಯಿಂದಲೇ ದೂರವಾಗಿರುವಂತೆ ಮಾಡಿತ್ತು. ಎಲ್ಲೆಡೆ ಕುಡಿಯಲು ನೀರಿನ ಅಭಾವ ಮಿತಿ ಮೀತಿತ್ತು. ಇದರಿಂದ ಪಟ್ಟಣದಲ್ಲಿರುವ ಬಾಡಿಗೆ ಮನೆಯವರಂತೂ ನೀರಿನ ಸಮಸ್ಯೆಗೆ ಹೆದರಿ ಮನೆಗಳನ್ನು ಖಾಲಿ ಮಾಡಿಕೊಂಡು ಹೋಗುತ್ತಿದ್ದರು. ರೈತರು ತಮ್ಮ ಜಾನುವಾರುಗಳನ್ನು ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದರು.
ಮಂಗಳವಾರ ಸಂಜೆ ಸುರಿದ ಮಳೆಗೆ ಇಳೆ ತಂಪಾಗಿದೆ. ಅಲ್ಲದೆ ರೈತರು ಸೇರಿದಂತೆ ಎಲ್ಲಾ ವರ್ಗದ ಜನರಲ್ಲಿ ಆಸೆ ಭಾವನೆ  ಮೂಡುವಂತೆ ಮಾಡಿದೆ. ತಾಲೂಕಿನ ದೋಣಿಮಗಡು ಪಂಚಾಯ್ತಿಯಲ್ಲಿ ಅರ್ಧ ಗಂಟೆ ಜೋರು ಮಳೆ ಸುರಿದರೆ, ಪಟ್ಟಣಪ್ರದೇಶ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಬಿದ್ದಿದ್ದರೆ ಉಳಿದ ಕಡೆ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಪಟ್ಟಣದಲ್ಲಿರುವ ಚರಂಡಿಗಳಲ್ಲಿ ತಿಂಗಳಾನುಗಟ್ಟಲೆಯಿಂದ ವಿಲೇವಾರಿಯಾಗದೆ ನಿಂತಿದ್ದ ತ್ಯಾಜ್ಯಗಳು ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿ ಪುರಸಭೆ ಸಿಬ್ಬಂದಿ ಕೆಲಸ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement