ಪಟ್ಟಣದಲ್ಲಿ ಪ್ಲಾಸ್ಟಿಕ್ ಪರಿತಾಪ!
ಬಂಗಾರಪೇಟೆ: ಸರ್ಕಾರ 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆದರೆ, ಪಟ್ಟಣದಲ್ಲಿ ಮಾತ್ರ ಈ ಆದೇಶ ಜಾರಿಯಾಗಿಲ್ಲ ಎಂಬುದು ವಿಪರ್ಯಾಸ.
ಹೊಟೇಲ್, ಟೀ ಸ್ಟಾಲ್, ಬಾರ್, ಬೇಕರಿ, ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ, ಹಣ್ಣಿನ ಅಂಗಡಿ ಸೇರಿದಂತೆ ಎಲ್ಲೆಡೆ ಕಳಪೆ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಈಗಾಗಲೇ ಕಸದಿಂದ ಕಂಗೆಟ್ಟಿರುವ ಪಟ್ಟಣದ ಜನತೆಗೆ ಪ್ಲಾಸ್ಟಿಕ್‌ನದ್ದು ಬಗೆಹರಿಯದ ಸಮಸ್ಯೆ. ಕಸವೇ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಇನ್ನೂ ಇದರ ಜತೆ ಸೇರುವ ಪ್ಲಾಸ್ಟಿಕ್‌ಕ್ಕೂ ಪಟ್ಟಣ ಪುರಸಭೆ ಸಿಬ್ಬಂದಿ ಬೆಂಕಿ ಹಾಕಿಸುತ್ತಿದೆ.
ಇದರಿಂದ ಪರಿಸರ ಹಾಳಾಗುವ ಜತೆ, ಜನರ ಆರೋಗ್ಯಕ್ಕೂ ಮಾರಕ. ಸುಡುವ ಪ್ಲಾಸ್ಟಿಕ್ ವಾಸನೆ ಇಡೀ ಪ್ರದೇಶಕ್ಕೆ ವಿಸ್ತರಿಸಿ, ಆ ಭಾಗದ ಜನರ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಆದೇಶ ಜಾರಿಯಾದ ಆರಂಭದಲ್ಲಿ ತುಸು ಹೆಚ್ಚು ಕ್ರಿಯಾಶೀಲವಾಗಿದ್ದ ಪುರಸಭೆ ಮುಖ್ಯಾಧಿಕಾರಿ ಹಾಗೂ ಪರಿಸರ ಎಂಜಿನಿಯರ್ ಮತ್ತು ಸಿಬ್ಬಂದಿ, ನಗರದಲ್ಲಿ 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿದ್ದರು. ಅಂಗಡಿ ಮಾಲೀಕರಿಗೆ ದಂಡವನ್ನು ವಿಧಿಸಿದ್ದರು. ಆದರೆ ದಿನ ಕಳೆದಂತೆ ಎಲ್ಲವೂ ಮಾಮೂಲಿಯಾಗಿದೆ.
ಮಳೆಗಾಲ ಆರಂಭದೊಂದಿಗೆ ಎಲ್ಲೆಂದರಲ್ಲಿ ಬಿಸಾಡಿರುವ ಈ ಪ್ಲಾಸ್ಟಿಕ್ ಲೋಟ, ತೊಟ್ಟಿಗಳಲ್ಲಿ ನೀರು ನಿಂತು ಮಾರಕ ಡೆಂಘೀ ಸೇರಿದಂತೆ ಇತರೆ ರೋಗಗಳಿಗೂ ಕಾರಣವಾಗುತ್ತಿದೆ. ಕಳೆದ ವಾರ ಮಳೆ ಬಿದ್ದ ಒಂದೆರಡು ದಿನಗಳಲ್ಲಿ ನಗರದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದರ ಹಿಂದೆಯೂ ಈ ಪ್ಲಾಸ್ಟಿಕ್ ಕಸ ಮತ್ತು ತ್ಯಾಜ್ಯ ಕಾರಣವಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ನಿಯಂತ್ರಣಕ್ಕೆ ಮುಂದಾಗುವವರೆ ಕಾದು ನೋಡಬೇಕು.