ರುದ್ರಭೂಮಿ ಮಂಜೂರಿಗೆ ಆಗ್ರಹ
ಚಿಂತಾಮಣಿ: ಆಶ್ರಯ ಬಡಾವಣೆಯ ನಿವಾಸಿಗಳಿಗೆ ರುದ್ರಭೂಮಿ ಮಂಜೂರು ಮಾಡಲು ಆಗ್ರಹಿಸಿ ನೂರಾರು ಜನರು ತಾಲೂಕು ದಂಡಾಧಿಕಾರಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಿದರು.
ನಗರದ ಆಶ್ರಯ ಬಡಾವಣೆಯ ಸ್ಥಳೀಯ ನೂರಾರು ನಿವಾಸಿಗಳು ರುದ್ರಭೂಮಿ (ಸ್ಮಶಾನ) ಭೂಮಿ ಮಂಜೂರು ಮಾಡಬೇಕೆಂದು ಆಗ್ರಹಿಸಿ ತಾಲೂಕು ದಂಡಾಧಿಕಾರಿಗಳಾದ ಜಿ.ವಿ.ಹನುಮಂತರೆಡ್ಡಿಗೆ ಮುತ್ತಿಗೆ ಹಾಕಿ ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿದರು.
ಈ ವೇಳೆ ರಾಜ್ಯ ಮಾದಿಗ ದಂಡೋರ ಜಂಟಿ ಕಾರ್ಯದರ್ಶಿ ಜಂಗಮ ಶೀಗೇನಹಳ್ಳಿ ದೇವರಾಜ್ ಮಾತನಾಡಿ, ಆಶ್ರಯ ಬಡಾವಣೆ ಸ್ಥಾಪನೆಗೊಂಡು 15 ವರ್ಷಗಳು ಕಳೆಯುತ್ತಿದ್ದರೂ, ಸ್ಥಳೀಯ ನಿವಾಸಿಗಳು ಸುಮಾರು 4 ರಿಂದ 5 ಸಾವಿರ ಜನ ವಾಸವಾಗಿದ್ದಾರೆ. ಇಲ್ಲಿ ಹೆಚ್ಚು ಬಡವ, ಕೂಲಿ ಕಾರ್ಮಿಕ, ಮಧ್ಯಮ ನೌಕರರು ಹಾಗೂ ದಿನಗೂಲಿ ನೌಕರರ ವರ್ಗದ ಕುಟುಂಬಗಳು ವಾಸವಾಗುತ್ತಿವೆಯೆಂದು ತಿಳಿಸಿದರು.
ಮೂಲಭೂತ ಸಮಸ್ಯೆಗಳಿಂದ ತಾಂಡವಾಡುತ್ತಿದ್ದು ಇಲ್ಲಿನ ಜನಪ್ರತಿನಿಧಿಗಳು ರುದ್ರಭೂಮಿ (ಸ್ಮಶಾನ) ಸ್ಥಳದ ಬಗ್ಗೆ ಹಲವು ಭಾರಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಹೀಗಾಗಿ ಈ ಭೂಮಿ ಇನ್ನೂ ಸಿಗದಿರುವುದರಿಂದ ಶವ ತೆಗೆದುಕೊಂಡು ಹೋದಾಗ, ರುದ್ರಭೂಮಿಯವರು ಶವ ತಾರದಂತೆ ವಿರೋಧ ವ್ಯಕ್ತಪಡಿಸಿರುತ್ತಾರೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಭೂಮಿ ಮಂಜೂರು ಮಾಡಿ: ಆದ್ದರಿಂದ ಆಶ್ರಯ ಬಡಾವಣೆ ಹತ್ತಿರ 2 ಎಕರೆ ಸರ್ಕಾರಿ ಭೂಮಿ ಇದ್ದು, ಆಶ್ರಯ ಬಡಾವಣೆಯ ನಿವಾಸಿಗಳಿಗೆ ಕರ್ಮಕಾಂಡಗಳಿಗೆ ಭೂಮಿಯನ್ನು ಕೊಡುವುದರಿಂದ ಇಲ್ಲಿನ ನೂರಾರು ನಿವಾಸಿಗಳಿಗೆ ಅನುಕೂಲವಾಗುತ್ತದೆಯೆಂದು ತಿಳಿಸಿದರು.
ನಂತರ ತಾಲೂಕು ದಂಡಾಧಿಕಾರಿ ಜಿ.ವಿ.ಹನುಮಂತರೆಡ್ಡಿಗೆ ಮನವಿ ಪತ್ರ ಸಲ್ಲಿಸಿ ಶೀಘ್ರವೇ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರದ ಗಮನಕ್ಕೆ ತಂದು ತಮ್ಮ ಸಮಸ್ಯೆಗೆ ಸ್ಪಂದಿಸಬೇಕೆಂದು ನಿವಾಸಿಗಳಾದ ಮುನಿಯಪ್ಪ, ಕೃಷ್ಣಪ್ಪ, ರಾಜೇಶ್, ಭರತ್, ನಾರಾಯಣಸ್ವಾಮಿ, ನರಸಿಂಹಪ್ಪ, ನವೀನ್‌ಕುಮಾರ್, ತಿಪ್ಪನ್ನ, ವೆಂಕಟರವಣಪ್ಪ, ಗಂಗುಲಪ್ಪ, ಮಂಜುನಾಥ ಸೇರಿದಂತೆ 50ಕ್ಕೂ ಹೆಚ್ಚು ಜನ ಸಹಿಗಳು ಮಾಡಿರುವ ಮನವಿ ಪತ್ರವನ್ನು ನೀಡಿದರು.