ಜಿಲ್ಲೆಯ ರೈಲು ಯೋಜನೆಗಳಿಗೆ ಸದಾನಂದ ಯಾವಾಗ?
-ಪಾ.ಶ್ರೀ.ಅನಂತರಾಮ್
ಕೋಲಾರ: ರಾಜ್ಯದವರೇ ಆದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಕೇಂದ್ರದಲ್ಲಿ ಹೊಸದಾಗಿ ರಚನೆಗೊಂಡಿರುವ ಸರ್ಕಾರದಲ್ಲಿ ರೇಲ್ವೆ ಸಚಿವರಾಗಿರುವುದು ಕೋಲಾರ ಜಿಲ್ಲೆ ಜನತೆಯಲ್ಲಿ ಸಂತಸವನ್ನುಂಟು ಮಾಡಿದೆ.
ಮುಖ್ಯಮಂತ್ರಿಯಾಗಿದ್ದಾಗ ಕೋಲಾರ ಜಿಲ್ಲೆಯ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಕೈಲಾದಷ್ಟು ಸಹಾಯ ಮಾಡಿರುವ ಸದಾನಂದಗೌಡರು, ಈಗ ಮೋದಿ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ. ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಮಂಜೂರು ಆಗಿರುವ ರೇಲ್ವೆ ಯೋಜನೆಗಳು ತ್ವರಿತಗತಿಯಲ್ಲಿ ಜಾರಿಯಾಗಬಹುದು.
ಕೋಲಾರ ಕ್ಷೇತ್ರದಿಂದ ಏಳು ಬಾರಿ ಸತತವಾಗಿ ಸಂಸತ್ತಿಗೆ ಆಯ್ಕೆಯಾಗಿರುವ ಮುನಿಯಪ್ಪ ಅವರು, ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದಾಗ ರೇಲ್ವೆ ಕೋಚ್ ಘಟಕಕ್ಕೆ ಮಂಜೂರು ಮಾಡಿಸಿದ್ದರು. ಫೆ.28ರಂದು ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯುವಂತೆ ಮಾಡಿದ್ದರು. ಕೋಚ್ ಘಟಕಕ್ಕೆ ಮಾರ್ಚ್ 5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದು, ತಮ್ಮ ಪಕ್ಷದ ಸರ್ಕಾರದಿಂದಲೇ ಯೋಜನೆ ಅನುಷ್ಠಾನಕ್ಕೆ ಬರುತ್ತದೆ ಎಂದು ವಿಶ್ವಾಸ ಹೊಂದಿದ್ದ ಮುನಿಯಪ್ಪನವರ ಕನಸು ಈಡೇರಿಲ್ಲ.
ಘಟಕ ನಿರ್ಮಾಣಕ್ಕೆ ಬೇಕಾದ 1118 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಉಚಿತವಾಗಿ ನೀಡುತ್ತಿದೆ. ಇದಕ್ಕೆ ತಗಲುವ 1460 ಕೋಟಿ ಹಣವನ್ನು ಕೇಂದ್ರ ಸರ್ಕಾರ ಭರಿಸಲಿದೆ.
ನಿರುದ್ಯೋಗ ನಿವಾರಣೆ
ಘಟಕ ನಿರ್ಮಾಣಗೊಂಡರೆ ಸುಮಾರು 5 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ. ಪರೋಕ್ಷವಾಗಿಯು ಅನೇಕರಿಗೆ ನೆರವಾಗಲಿದೆ. ಜತೆಗೆ ಜಿಲ್ಲೆ ಆರ್ಥಿಕವಾಗಿ ಸದೃಢವಾಗಲು ಇದರಿಂದ ಸಹಾಯವಾಗುತ್ತದೆ. ಘಟಕ ಆರಂಭವಾದರೆ ವಾರ್ಷಿಕ 500 ರೈಲು ಬೋಗಿಗಳನ್ನು ಉತ್ಪಾದಿಸಬಹುದು. 2014-15ರ ಆರಂಭದಿಂದ ನಾಲ್ಕು ವರ್ಷಗಳಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಜಿಲ್ಲಾ ಆಡಳಿತವು ಶ್ರೀನಿವಾಸಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 234ಕ್ಕೆ ಸೇರಿದ ಮುಳಬಾಗಲು-ಗೌರಿಬಿದನೂರು ರಸ್ತೆಯಲ್ಲಿ ರೇಲ್ವೆ ಕೋಚ್ ಘಟಕ ಸ್ಥಾಪನೆಗೆ ಸರ್ಕಾರಿ ಭೂಮಿಯನ್ನು ಒದಗಿಸಲು ಈಗಾಗಲೇ ಒಪ್ಪಿದೆ. ಇದೀಗ ರಾಜ್ಯದವರೇ ಆದ ಸದಾನಂದಗೌಡರು ರೇಲ್ವೆ ಸಚಿವರಾಗಿರುವುದರಿಂದ ಯೋಜನೆ ಅದಷ್ಟು ಬೇಗನೆ ಜಾರಿಗೆ ಬರಬಹುದು ಎಂಬ ನಿರೀಕ್ಷೆ ಇದೆ.
ಹೊಸ ರೈಲು ಮಾರ್ಗ
ಘಟಕ ನಿರ್ಮಾಣ ಜತೆಗೆ ಕಡಪದಿಂದ ವಯಾ ಮುಳಬಾಗಲು ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಹೊಸ ರೈಲು ಮಾರ್ಗಕ್ಕೆ ಚಾಲನೆ ಸಿಕ್ಕಿದ್ದು, ಮುಳಬಾಗಲು-ಕೋಲಾರ ಮಾರ್ಗಕ್ಕೆ ಬೇಕಾದ ಭೂಮಿಯನ್ನು ಆದಷ್ಟು ಬೇಗನೆ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಇದಕ್ಕೆ ಬೇಕಾದ ಹಣವನ್ನು ಮಂಜೂರು ಮಾಡಿಸಲು ಮುನಿಯಪ್ಪ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಸಂಘಟಿತ ಪ್ರಯತ್ನ ಮಾಡಬೇಕಾಗಿದೆ.
ಶ್ರೀನಿವಾಸಪುರ-ಮದನಪಲ್ಲಿ ಹೊಸ ರೈಲು ಮಾರ್ಗಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, ಈ ಯೋಜನೆ ಜಾರಿಗೆ ಬಂದರೆ ರೈತರು ಬೆಳೆಯುವ ತರಕಾರಿ, ಹೂವು, ಹಣ್ಣುಗಳನ್ನು ಆಂಧ್ರ ಸೇರಿದಂತೆ ಇನ್ನಿತರ ಕಡೆಗಳಿಗೆ ಸಾಗಣೆ ಮಾಡಲು ಅನುಕೂಲವಾಗುತ್ತದೆ. ಈಗ ಚಾಲ್ತಿಯಲ್ಲಿರುವ ಕೋಲಾರ-ಚಿಕ್ಕಬಳ್ಳಾಪುರ ರೈಲು ಸಂಚಾರದ ವೇಳೆಯನ್ನು ಬದಲಾಯಿಸುವುದು. ಕೋಲಾರದಿಂದಲೇ ರೈಲು ಹೊರಡುವಂತಾಗಲು, ಕೋಲಾರ-ವೈಟ್ಫೀಲ್ಡ್ ರೈಲು ಮಾರ್ಗಕ್ಕೆ ಭೂಮಿ ಸ್ವಾಧೀನ ಪ್ರಕ್ರಿಯೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪುನರಾರಂಭಿಸುವ ಕೆಲಸಕ್ಕೆ ರೇಲ್ವೆ ಸಚಿವ ಸದಾನಂದಗೌಡರ ಸಹಾಯ ಪಡೆಯಲು ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗೂಡಿ ಕೆಲಸ ಮಾಡಿದಲ್ಲಿ ಕೈಗಾರಿಕೆ, ಕೃಷಿ, ಹೈನುಗಾರಿಕೆ ಅಭಿವೃದ್ಧಿಗೆ ಬಲ ಸಿಗುತ್ತದೆ.