ಜೆಡಿಎಸ್ ಆರೋಪಕ್ಕೆ ಶಾಸಕ ಸುಧಾಕರ್ ತಿರುಗೇಟು
ಚಿಕ್ಕಬಳ್ಳಾಪುರ: ಸಹಕಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆಯನ್ನು ಹರಿಸಿದೆ ಎಂದು ಜೆಡಿಎಸ್ ಸುಳ್ಳು ಆರೋಪ ಮಾಡಿದೆ. ಸಹಕಾರ ಕ್ಷೇತ್ರದ ಚುನಾವಣೆಗಾಗಿ ಮತದಾರರನ್ನು ಯಾರು ಪುಣ್ಯಕ್ಷೇತ್ರಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಕರೆದುಕೊಂಡು ಹೋಗಿ ಆಮಿಷವನ್ನೊಡ್ಡಿದ್ದರು ಎನ್ನುವುದು ಜನರಿಗೆ ತಿಳಿದಿದೆ ಎಂದು ಶಾಸಕ ಕೆ.ಸುಧಾಕರ್ ತಿರುಗೇಟು ನೀಡಿದರು.
ನಗರದಲ್ಲಿನ ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ವರ್ಷಗಳಿಂದ ಜೆಡಿಎಸ್ ಬೆಂಬಲಿತ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಕೆ.ಎಲ್. ದ್ಯಾವಪ್ಪ ಈ ಬಾರಿ ಕಾಂಗ್ರೆಸ್ ಬೆಂಬಲದಿಂದ ಸ್ಪರ್ಧಿಸಿದ್ದರು. ತಾಲ್ಲೂಕಿನಲ್ಲಿರುವ ಕಾಂಗ್ರೆಸ್ ಬೆಂಬಲಿತ 40 ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಸೇರಿದಂತೆ ದ್ಯಾವಪ್ಪನವರಿಗೆ ಚುನಾವಣೆಯಲ್ಲಿ 68 ಮತಗಳು ಬಂದಿವೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಹೀಗಿರುವಾಗ ಜೆಡಿಎಸ್ ಜಿಲ್ಲಾಧ್ಯಕ್ಷರು ನಮ್ಮ ಅಭ್ಯರ್ಥಿಯನ್ನು ದ್ರಾಕ್ಷಿ ಕಸುಬುದಾರರಾಗಿ ಹಣದ ಹೊಳೆಯನ್ನು ಚುನಾವಣೆಗೆ ಹರಿಸಿದರು ಎಂದು ಟೀಕೆ ಮಾಡಿದ್ದಾರೆ. ಕಸುಬಿಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ಸಂಬಂಧವನ್ನು ಕಲ್ಪಿಸುವುದು ಸರಿಯೇ? ಎಂದು ಪ್ರಶ್ನಿಸಿದರು.
ಶಾಸಕನಾಗಿ ಆಯ್ಕೆಯಾದ 10 ತಿಂಗಳಲ್ಲಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಮೋಜಿಗಾಗಿ ಶಾಸಕ ಸ್ಥಾನದ ಕುರ್ಚಿಯಲ್ಲಿ ಕುಳಿತುಕೊಂಡು ಸಮಯವನ್ನು ವ್ಯರ್ಥ ಮಾಡುತ್ತಿಲ್ಲ. ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರು.
ಕ್ಷೇತ್ರದ ಶಾಸಕರು ಯಾವುದೇ ಕೆಲಸ ಮಾಡಿಲ್ಲ ಎನ್ನುವುದು ಜೆಡಿಎಸ್ನ ಹತಾಶೆ ಮನೋಭಾವನೆಯನ್ನು ತೋರಿಸುತ್ತದೆ ಎಂದು ದೂರಿದರು.
ಕುಡಿಯುವ ನೀರಿಗಾಗಿ ರಸ್ತೆ ತಡೆದು ಪ್ರತಿಭಟನೆ
ಚಿಂತಾಮಣಿ: ತಪತೇಶ್ವರ ಕಾಲೋನಿ ಮತ್ತು ವಿನಾಯಕ ನಗರದ ನೂರಾರು ನಿವಾಸಿಗಳು ಕುಡಿಯುವ ನೀರಿಗಾಗಿ ಆಗ್ರಹಿಸಿ, ರಸ್ತೆ ತಡೆ ಮಾಡಿದ ಘಟನೆ ಗುರುವಾರ ನಡೆದಿದೆ. ತಪತೇಶ್ವರ ಕಾಲೋನಿ ಮತ್ತು ವಿನಾಯಕ ನಗರದ ಸುತ್ತಮುತ್ತಲಿನ ಸ್ಥಳೀಯ ನಿವಾಸಿಗಳಿಗೆ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಳೆದ ಹಲವು ದಿನಗಳಿಂದ ಕುಡಿಯುವುದಕ್ಕೆ ನೀರು ಪೂರೈಸುತ್ತಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ನಗರಸಭಾ ಸದಸ್ಯರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಗುರುವಾರ ಬೆಳಿಗ್ಗೆ ಏಕಾಏಕಿ ರಸ್ತೆತಡೆ ಮಾಡಿ ನೂರಾರು ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದು ನಗರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿ ಬೀದಿಗಿಳಿದು ಹೋರಾಟ ನಡೆಸಿದರು. ಇದರಿಂದ ಕೆಲವು ಕಾಲ ಸಂಚಾರಕ್ಕೆ ವ್ಯತ್ಯಯವಾಯಿತು. ನಗರಸಭೆ ಅಧಿಕಾರಿಗಳ ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿಡದರು. ಏತನ್ಮಧ್ಯೆ, ಪೊಲೀಸರ ಜತೆ ವಾಗ್ವಾದ ಕೂಡಾ ಮಾಡಿದುರ. ಸಿಪಿಐ ನಂಜಪ್ಪ ಹಾಗೂ ಪಿಎಸ್ಐ ಅನಿಲ್ಕುಮಾರ್ ಅವರು ನಗರಸಭೆ ಅಧಿಕಾರಿಗಳಾದ ಪ್ರದೀಪ್ ಮತ್ತು ಸಿ.ಕೆ.ಬಾಬು ಅವರನ್ನು ಸ್ಥಳಕ್ಕೆ ಕರೆಯಿಸಿದರು. ನಗಸಭೆ ಸದಸ್ಯ ಪ್ರಕಾಶ್ ನೀರು ಪೂರೈಸುವ ಬಗ್ಗೆ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.