ಮಾಲೂರಿಗೆ ಹೊಸ ಬಸ್ ನಿಲ್ದಾಣ ಶೀಘ್ರ: ಶಾಸಕ
ಮಾಲೂರು: ಪಟ್ಟಣದಲ್ಲಿ ಹಾಲಿ ಇರುವ ಬಸ್ ನಿಲ್ದಾಣ ಕಿರಿದಾಗಿದ್ದು, ನೂತನ ಬಸ್ ನಿಲ್ದಾಣವನ್ನು ರೇಲ್ವೆ ಸೇತುವೆ ಬಳಿಯ ಸರ್ಕಾರಿ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ಕೆಎಸ್ಆರ್ಟಿಸಿ ಅಧಿಕಾರಿಯೂಡನೆ ನೂತನ ಬಸ್ ನಿಲ್ದಾಣಕ್ಕಾಗಿ ಪಟ್ಟಣದ ವಾಲ್ಮೀಕಿ ವೃತ್ತದ ಬಳಿಯ ರೇಲ್ವೆ ಸೇತುವೆ ಬಳಿಯ ಲೋಕೋಪಯೋಗಿ ಇಲಾಖೆಯ 4.5 ಎಕರೆ ಜಾಗವನ್ನು ಪರಿಶೀಲಿಸಿದ ನಂತರ ಪತ್ರಕರ್ತರಿಗೆ ಈ ಮಾಹಿತಿ ನೀಡಿದರು. ಮುಂದಿನ 25 ವರ್ಷವನ್ನು ಗಮನದಲ್ಲಿಟ್ಟುಕೊಂಡು ಸುಸಜ್ಜಿತ ನಿಲ್ದಾಣ ನಿರ್ಮಾಣ ಮಾಡಲಾಗುವುದು. ಇದಕ್ಕೆ ಪೂರಕವಾಗಿ ಬೇಕಾಗಿರುವ ಅಂಡರ್ ಪಾಸ್ ಹಾಗೂ ರಸ್ತೆ ಅಗಲೀಕರಣವನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು. ಈಗಿರುವ ಬಸ್ ನಿಲ್ದಾಣ ಜಾಗದಲ್ಲಿ ಪುರಸಭೆ ವತಿಯಿಂದ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ತಹಸೀಲ್ದಾರ್ ಶಿವುಕುಮಾರ್ ಮಾತನಾಡಿ, ಈ ಜಾಗದ ಸುತ್ತಮುತ್ತಲೂ ಇರುವ ಒತ್ತುವರಿಯನ್ನು ಶೀಘ್ರ ತೆರವುಗೊಳಿಸುವ ಭರವಸೆ ನೀಡಿದರು. ಕ.ರಾ.ರ.ಸಾ.ಸಂಸ್ಥೆಯ ಚೀಫ್ ಇಂಜಿನಿಯರ್ ಜಗದೀಶ್ ಮಾತನಾಡಿದರು. ಸಂಸ್ಥೆಯ ಅಭಿಯಂತರ ನಾಗರಾಜ್, ಕೋಲಾರ ಕ.ರಾ.ರ.ಸಾ.ಸಂಸ್ಥೆಯ ಜಿಲ್ಲಾಧಿಕಾರಿ ಲಿಂಗರಾಜ್, ಲೋಕೋಪಯೋಗಿ ಎಇಇ ಬಸವರಾಜ್, ಪುರಸಭೆ ಅಭಿಯಂತರ ಮಂಜುನಾಥ್, ಮುಖಂಡರಾದ ರಾಮಚಂದ್ರ, ಪ್ರದೀಪ್ ರೆಡ್ಡಿ, ಹೊಸಕೋಟೆ ರಮೇಶ್ ಇದ್ದರು.
ಸಿ.ಎಂ.ಮುನಿಯಪ್ಪ ಚೇತರಿಕೆ
ಕೋಲಾರ: ಹಿರಿಯ ದಲಿತ ಮುಖಂಡ ಹಾಗೂ ಸಂಚಿಕೆ ಪತ್ರಿಕೆ ಸಂಪಾದಕ ಸಿ.ಎಂ.ಮುನಿಯಪ್ಪ ಅವರು ಮೇ 15ರಂದು ಲಘು ಹೃದಯಾಘಾತಕ್ಕೊಳಗಾಗಿ ನಗರ ಹೊರವಲಯದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗ ಚೇತರಿಸಿಕೊಂಡಿದ್ದಾರೆ. ಇನ್ನು ಎರಡುಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆಂದು ಅವರ ಮೂಲಗಳು ತಿಳಿಸಿವೆ.