ಮೀತಿ ಮೀರಿದ ಪ್ಲಾಸ್ಟಿಕ್ ಹಾವಳಿ; ಕೇಳೋರಿಲ್ಲ ಇಲ್ಲಿ
ಕೋಲಾರ: ನಗರದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ.
ನಗರಸಭೆಯ ಅಧಿಕಾರಿಗಳು ಅಮಾವಾಸ್ಯೆ-ಪೂರ್ಣಿಮೆಗೆ ಒಮ್ಮೆ ಎಂಬಂತೆ ಪ್ಲಾಸ್ಟಿಕ್ ಅಂಗಡಿಗಳ ಮೇಲೆ ನಾಮಕಾವಸ್ತೆ ದಾಳಿ ಮಾಡಿ ಪ್ರಚಾರ ಪಡೆಯುತ್ತಿರುವುದು ಪರಿಣಾಮಕಾರಿ ಕ್ರಮಕ್ಕೆ ಹಿನ್ನಡೆ ಆಗಿದೆ ಎಂಬುದು ಸಾರ್ವಜನಿಕರ ದೂರು.
ನಗರಸಭೆ ಸಿಬ್ಬಂದಿ ಘನತ್ಯಾಜ್ಯ ವಿಲೇವಾರಿಗೆ ಈವರೆಗೆ ಜಾಗ ಹುಡುಕಿಲ್ಲ. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದರೂ ಬುದ್ಧಿ ಕಲಿತಿಲ್ಲ. ನಗರದ ಖಾಸಗಿ ನಿವೇಶನ, ತೆರೆದ ಬಾವಿಗಳು, ಕುಂಟೆ-ಕಲ್ಯಾಣಿ, ರಾಜಾಕಾಲುವೆಗಳಲ್ಲಿ ಪ್ಲಾಸ್ಟಿಕ್ ತುಂಬುತ್ತಿರುವುದರಿಂದ ಅಂತರ್ಜಲದ ಮೇಲೆ ಪರಿಣಾಮ ಬೀರುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಸರ ಇಲಾಖೆಯ ಅಧಿಕಾರಿಗಳು ಸಹ ನಗರದ ಬಗ್ಗೆ ಕಾಳಜಿ ಕೋರುತ್ತಿಲ್ಲ. ಪ್ಲಾಸ್ಟಿಕ್ ನಿಷೇಧಕ್ಕೆ ನಗರಸಭೆ ಜತೆ ಕೈಜೋಡಿಸುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರ ನಗರದ ಎಂ.ಜಿ.ರಸ್ತೆ, ಪ್ರತಿಷ್ಠಿತ ವಾಣಿಜ್ಯ ಕೇಂದ್ರವಾಗಿದ್ದು ರಸ್ತೆಯಲ್ಲಿ ಕೆಜಿಗಟ್ಟಲೆ ಪ್ಲಾಸ್ಟಿಕ್ ಹರಡಿ ಪರಿಸರಕ್ಕೆ ಹಾನಿಯಾಗುತ್ತಿದ್ದರೆ. ರಸ್ತೆ ಬದಿಯ ಖಾಸಗಿ ನಿವೇಶನದಲ್ಲಿ ಸುರಿದಿರುವ ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯಗಳನ್ನು ವಿಲೇವಾರಿ ಮಾಡಿಸಿಲ್ಲವೆಂದು ಆರೋಪಿಸಿದ್ದಾರೆ.
ಎಂ.ಜಿ.ರಸ್ತೆ ಮಾತ್ರವಲ್ಲದೆ ನಗರದ ಬಹುತೇಕ ಕಡೆ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ. ಇದರಿಂದ ಭೂಮಿಯಲ್ಲಿ ನೀರು ಇಂಗದಂತಾಗಿದೆ. ಅಂತರ್ಜಲ ಸಮಸ್ಯೆಯಿಂದ ಜನತೆ ನೀರಿಗಾಗಿ ಹಾಹಾಕಾರ ಎದುರಿಸುತ್ತಿದ್ದು, ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದಲಾದರೂ ನಗರಸಭೆ, ಪರಿಸರ ಇಲಾಖೆಯವರು ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ಎಂಬುದು ಜನತೆಯ ಒತ್ತಾಸೆ.