ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿಜೃಂಭಣೆಯ ಬ್ರಹ್ಮರಥೋತ್ಸವ

Srinivasa Murthy VN
Updated On : 30 May 2014, 1:44 am

ಶಿಡ್ಲಘಟ್ಟ: ಪಟ್ಟಣದ ಗಾಯಿತ್ರಿ ದೇವಾಲಯದಲ್ಲಿ 15ನೇ ವರ್ಷದ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಕೆಎಚ್‌ಬಿ ಕಾಲೋನಿಯ ಗಾಯಿತ್ರಿ ದೇವಾಲಯದಲ್ಲಿ ವಿಶ್ವ ಶಾಂತಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಚಂಡಿಕಾ ಮಹಾಯಾಗ ಮತ್ತ ಬ್ರಹ್ಮರಥೋತ್ಸವ ಹಮ್ಮಿಕೊಳ್ಳಲಾಗಿತ್ತು. 5 ದಿನಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಶ್ರೀ ಚಂಡಿಕಾ ಮಹಾಯಾಗ, ಶ್ರೀ ಜೇಷ್ಟಾದೇವಿ ನೀಳಾದೇವಿ ಸಮೇತ ಶ್ರೀ ಶನೈಶ್ಚರ ಸ್ವಾಮಿಗೆ ಕಲ್ಯಾಣೋತ್ಸವ, 108 ಲೀ ಕ್ಷೀರಾಬಿಷೇಕ, ಹಾಗೂ 108 ಲೀ ಮೊಸರು ಅಬಿಷೇಕ, ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗಾಯಿತ್ರಿ ಸೇವಾ ಮತ್ತು ಅಬಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಸಂತ್ ಕುಮಾರ್, ರಾಮಾಶಾಸ್ತ್ರೀ ಹಾಜರಿದ್ದರು.

ಮಾರಿಕುಪ್ಪಂ ಗ್ರಾಪಂಗೆ ಸಿಇಒ ದಿಢೀರ್ ಭೇಟಿ
ಕೋಲಾರ: ಕೆಜಿಎಫ್ ನಾಡ ಕಚೇರಿ ವ್ಯಾಪ್ತಿಗೆ ಸೇರಿದ ಮಾರಿಕುಪ್ಪಂ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಸಿಇಒ ವಿನೋತ್ ಪ್ರಿಯಾ ಗುರುವಾರ ಸಂಜೆ ದಿಢೀರ್ ಭೇಟಿ ನೀಡಿ 13 ಮತ್ತು 14ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಮಾಹಿತಿ ಪರಿಶೀಲಿಸಿದ್ದಾರೆ.
ಮಾರಿಕುಪ್ಪಂ ಪಿಡಿಒ ವೆಂಕಟಸ್ವಾಮಿ ಅವರಿಗೆ ಹಲವು ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆದ ಸಿಇಒ ಕೆಲ ಪ್ರಮುಖ ಕಡತಗಳನ್ನು ತಮ್ಮೊಂದಿಗೆ ಕೋಲಾರಕ್ಕೆ ತಂದಿದ್ದು, ಒಂದು ವೇಳೆ ಏನಾದರೂ ಲೋಪಗಳು ಕಂಡು ಬಂದಲ್ಲಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ. ಈ ಸಂಬಂಧ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ತಾವು ಮಾರಿಕುಪ್ಪಂಗೆ ಯಾವುದೇ ವಿಶೇಷ ತನಿಖೆಗಾಗಿ ಹೋಗಿರಲಿಲ್ಲ. ಇದೊಂದು ಸಾಮಾನ್ಯ ಭೇಟಿ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ. ಮಾರಿಕುಪ್ಪಂ ಪಿಡಿಒ ಅವರನ್ನು ತಮ್ಮ ಸೂಚನೆಯ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಹರಡಿರುವ ವದಂತಿಯನ್ನು ವಿನೋತ್ ಪ್ರಿಯಾ ನಿರಾಕರಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನಾಳೆ
ಚಿಂತಾಮಣಿ: ಬೆಂಗಳೂರಿನ ಬ್ರಿಂಗಿಗ್ ಸ್ಮೈಲ್ ಶೈಕ್ಷಣಿಕ ಹಾಗೂ ಸಾಮಾಜಿಕ ಸಂಸ್ಥೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದಿರುವ ಚಿಂತಾಮಣಿ ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭವನ್ನು  ಮೇ 31ರಂದು ನಗರದ ರಾಯಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಂಸ್ಥೆಯ ಕಾರ್ಯದರ್ಶಿ ಸೈಯದ್ ನೂರುದ್ದೀನ್ ಅವರು, ಚಿಕ್ಕಬಳ್ಳಾಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕ ಎ.ಅಜಿತ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಡಿಡಿಪಿಐಸಿ.ವಿ.ಹನುಮಂತಪ್ಪ, ರಾಯಲ್ ಶಾಲೆಯ ಪ್ರಾಂಶುಪಾಲ ಪ್ರೇಮಲತಾ ರಾಮಕೃಷ್ಣಾರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಜನಾರ್ದನರೆಡ್ಡಿ, ಶಿಕ್ಷಣ ಸಂಯೋಜಕ ಪಿ.ಕೃಷ್ಣಮೂರ್ತಿ, ಸಮಾಜ ಸೇವಕ ವಿ.ವೆಂಕಟಾಚಲಪತಿ ಹಾಗೂ ಜಗದೀಶರೆಡ್ಡಿ, ಆರ್.ವೆಂಕಟರಮಣಾರೆಡ್ಡಿ, ಬಿ.ಎಚ್.ಮಂಜುನಾಥ್, ಎಸ್.ಎನ್.ಶ್ರೀರಾಮರೆಡ್ಡಿ, ಎಂ.ಸುಬ್ಬಾರೆಡ್ಡಿ, ನೂರುಲ್ಲಾ ಆಗಮಿಸಲಿದ್ದಾರೆಂದು ತಿಳಿಸಿದ್ದಾರೆ.

ಅಬಕಾರಿ ಉಪ ಆಯುಕ್ತ ಮನೆ ಮೇಲೆ ಲೋಕಾಯುಕ್ತ ದಾಳಿ
ಚಿಕ್ಕಬಳ್ಳಾಪುರ: ಇಲ್ಲಿನ ಅಬಕಾರಿ ಇಲಾಖೆಯ ಉಪ ಆಯುಕ್ತರ ಮನೆಯ ಮೇಲೆ ಗುರುವಾರ ಲೋಕಾಯುಕ್ತಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದಾರೆ. ನಗರದ ವಾಪಸಂದ್ರದಲ್ಲಿರುವ ಜಿಲ್ಲಾ ಅಬಕಾರಿ ಇಲಾಖೆಯ ಉಪ ಆಯುಕ್ತ ಶ್ರೀನಿವಾಸ್  ಅವರ ಮನೆಯ ಮೇಲೆ ಬೆಳ್ಳಂಬೆಳಿಗ್ಗೆಯೇ ಸ್ಥಳೀಯ ಅಧಿಕಾರಿಗಳ ಜೊತೆಗೆ ಬೆಂಗಳೂರಿನಿಂದ ಬಂದಿದ್ದ ಹಿರಿಯ ಅಧಿಕಾರಿಗಳು ದಾಳಿ ನಡೆಸಿದರು. ಐದಾರು ಗಂಟೆಗೂ ಹೆಚ್ಚು ಕಾಲ ಶೋಧ ಕಾರ್ಯದಲ್ಲಿ ನಿರತರಾಗಿದ್ದವರು ಯಾವುದೇ ಮಾಹಿತಿ ಹಂಚಿಕೊಳ್ಳಲು ಇಷ್ಟಪಡಲಿಲ್ಲ. ಬೆಂಗಳೂರಿನಲ್ಲಿರುವ ಶ್ರೀನಿವಾಸ್  ಅವರ ಮನೆಯಲ್ಲೂ ಶೋಧ ನಡೆಸಿದ ಜೊತೆಯಲ್ಲಿ ಇಲ್ಲಿಯೂ ಸಹ ಪರಿಶೀಲನೆ ನಡೆಸಲಾಗಿದೆ. ಈ ವೇಳೆ 10 ಸಾವಿರ ನಗದು ಮತ್ತು ಒಂದು ಬಂಗಾರದ ಚೈನು ಹೊರತುಪಡಿಸಿ ಬೇರೆ ಯಾವುದೂ ಲೋಕಾಯುಕ್ತರಿಗೆ ದೊರೆತಿಲ್ಲ ಎಂದು ಗೊತ್ತಾಗಿದೆ. ಅಬಕಾರಿ ಇಲಾಖೆಯಲ್ಲಿ ಉಪ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀನಿವಾಸ್ ನಗರದ ವಾಪಸಂದ್ರ ಬಡಾವಣೆಯಲ್ಲಿ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದರು.

ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ
ಬಂಗಾರಪೇಟೆ: ಪಟ್ಟಣದಿಂದ ಕಾಮಸಮುದ್ರ ಹೋಬಳಿಯ ಬಹುತೇಕ ಗ್ರಾಮಗಳಿಗೆ ಕೆಂಪು ಬಸ್‌ಗಳ ಕೊರತೆಯಿಂದಾಗಿ ಪ್ರತಿದಿನ ಶಾಲಾ ಕಾಲೇಜು ಮಕ್ಕಳಿಗೆ ಸಮಯಕ್ಕೆ ಶಾಲೆಗಳಿಗೆ ಹೋಗಲಾಗದೆ ಪರದಾಡುವಂತಾಗಿದೆ. ಕೂಡಲೇ ಶಾಸಕರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಗಮನ ಹರಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಕಾಮಸಮುದ್ರ ಹೋಬಳಿ ಗಡಿ ಭಾಗದಲ್ಲಿದ್ದು ಈ ಹೊಬಳಿಯ ಸುತ್ತಮುತ್ತಲಿನ ಪಂಚಾಯ್ತಿಗಳಾದ ತೊಪ್ಪನಹಳ್ಳಿ, ದೋಣಿಮಗಡು, ಕೇತಗಾನಹಳ್ಳಿ ವ್ಯಾಪ್ತಿಯ ಹಳ್ಳಿಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿ ನಿತ್ಯ ಬಂಗಾರಪೇಟೆ, ಕೆಜಿಎಫ್, ಕೋಲಾರಕ್ಕೆ ಹೋಗುತ್ತಾರೆ. ಆದರೆ, ಸೂಕ್ತ ಸಮಯದಲ್ಲಿ ಬಸ್‌ಗಳು ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ. ಈ ಮೊದಲು ಈ ಮಾರ್ಗದಲ್ಲಿ ಸಾಕಷ್ಟು ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ನಷ್ಟದ ನೆಪವೊಡ್ಡಿ ಮೇಲಾಧಿಕಾರಿಗಳು ಬಸ್‌ಗಳನ್ನು ಕಡಿತಗೊಳಿಸಿದ್ದರಿಂದ ಸಮಸ್ಯೆ ಮತ್ತೆ ತೀವ್ರಗೊಂಡಿದೆ. ಈಗ ಖಾಸಗಿ ಬಸ್‌ಗಳ ದರ್ಬಾರ್ ಜೋರಾಗಿದೆ. ವಿದ್ಯಾರ್ಥಿಗಳ ಪ್ರತಿನಿತ್ಯ ಖಾಸಗಿ  ಬಸ್‌ನಲ್ಲಿ ಸಂಚರಿಸಲು ಸಾಧ್ಯವಿಲ್ಲ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು, ಶಾಸಕರು ಬಸ್ ಸೌಲಭ್ಯ ಕಲ್ಪಿಸಬೇಕೆಂದು ಪೋಷಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಡಿಪೋ ಮುಂದೆ ಪ್ರತಿಭಟನೆ ಮಾಡುವುದಾಗಿ ಪ್ರಯಾಣಿಕರ ಸಂಘದ ಮುಖಂಡರಾದ ಎಂ.ರತ್ನಪ್ಪ,ವೆಂಕಟೇಶ್ ಮತ್ತು ಅನಿಲ್ ಕುಮಾರ್ ಎಚ್ಚರಿಸಿದ್ದಾರೆ.

ತಂತ್ರಾಂಶ ಮಾಹಿತಿ ಕಾರ್ಯಾಗಾರ
ಕೋಲಾರ: ವಾಣಿಜ್ಯ ತೆರಿಗೆ ಇಲಾಖೆಯ ನೊಂದಾಯಿತರು 50 ಲಕ್ಷ ವಾರ್ಷಿಕ ವಹಿವಾಟು ಮೇಲ್ಪಟ್ಟ ಕರದಾತರು ಮೇ 2014ರಿಂದ ಖರೀದಿ ಮತ್ತು ಮಾರಾಟದ ಬಿಲ್ಲುಗಳ ವಿವರಗಳನ್ನು ವ್ಯಾಟ್ಸ್‌ಆಪ್ ತಂತ್ರಾಂಶದಲ್ಲಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಹೆಚ್ಚಿನ ವಿವರ ನೀಡಲು ಕೋಲಾರದ ವಾಣಿಜ್ಯ ತೆರಿಗೆ ಇಲಾಖೆಯಿಂದ ಜೂ.3ರಂದು ನಗರದ ಚೊಕ್ಕ ಕನ್ವೆಷನ್ ಹಾಲ್‌ನಲ್ಲಿ ಕರದಾತರಿಗೆ ಮತ್ತು ತೆರಿಗೆ ಸಲಹಾಗಾರರಿಗೆ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಇಲಾಖಾ ಸಂಪನ್ಮೂಲ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದರೊಂದಿಗೆ ಕರೆದಾತರ ಸಂದೇಹಗಳಿಗೆ ಉತ್ತರ ನೀಡಲಿದ್ದಾರೆ. ಇದರ ಸದುಪಯೋಗ ಪಡೆಯುವಂತೆ ಕರದಾತರು ಮತ್ತು ತೆರಿಗೆ ಸಲಹಾಗಾರರನ್ನು ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ  ಆರ್. ಮೊಹಮ್ಮದ್ ಕೋರಿದ್ದಾರೆ.

ಜೂ.6ಕ್ಕೆ ಮಾಸ್ತಿ 123ನೇ ಜನ್ಮ ದಿನಾಚರಣೆ
ಕೋಲಾರ: ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಜ್ಞಾನಪೀಠ ಪುರಸ್ಕೃತ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 123ನೇ ಜನ್ಮ ದಿನಾಚರಣೆ ನಡೆಯಲಿದೆ. ಇದೇ ವೇಳೆ, ಡಾ. ಮಾಸ್ತಿ ನಮನ ಕವಿಗೋಷ್ಠಿ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಜೂ.6ರ ಶುಕ್ರವಾರ  ಮಾಲೂರು ತಾಲೂಕಿನ ಡಾ.ಮಾಸ್ತಿ ಸಾಹಿತ್ಯ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಶಾಸಕ ಕೆ.ಎಸ್. ಮಂಜುನಾಥಗೌಡ, ಡಾ.ಮಾಸ್ತಿ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವವರು. ಕಾರ್ಯಕ್ರಮನ್ನು ಸಂಸದ ಕೆ.ಎಚ್. ಮುನಿಯಪ್ಪ ಉದ್ಘಾಟಿಸಲಿದ್ದಾರೆ. ಜಿಪಂ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಮಾಸ್ತಿ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ವಹಿಸುವರು. ಸಾಹಿತಿ ಡಾ.ಕೆ.ಸತ್ಯನಾರಾಯಣ ಡಾ.ಮಾಸ್ತಿ ಬಗ್ಗೆ ವಿಶೇಷ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ಯಶೋದಮ್ಮ ಕೃಷ್ಣಮೂರ್ತಿ, ಮಾಲೂರು ತಾಪಂ ಅಧ್ಯಕ್ಷೆ ಎಂ.ಆಶಾ ರಾಜಪ್ಪ, ಮಾಸ್ತಿ ಗ್ರಾಪಂ ಅಧ್ಯಕ್ಷ ಎಚ್.ವಿ.ಶ್ರೀನಿವಾಸ್, ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಸಿ.ಎಂ. ನಾಗರಾಜ,  ಚಂದ್ರಪ್ಪ ಭಾಗವಹಿಸುವರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಲಕ್ಷ್ಮೀಪತಿ ಕೋಲಾರ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ. ನಾಗರಾಜ್ ವಹಿಸುವವರು.

ವಿದ್ಯುತ್ ತಗುಲಿ ರೈತ ಸಾವು
ಶಿಡ್ಲಘಟ್ಟ: ಗೊರಮಡುಗು ಗ್ರಾಮದಲ್ಲಿ ರೇಷ್ಮೆ ಸೊಪ್ಪು ಕತ್ತಿರಿಸುವಾಗ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಅನಂದಪ್ಪ(52) ಮೃತ ಪಟ್ಟ ವ್ಯಕ್ತಿ. ತೋಟದಲ್ಲಿ ರೇಷ್ಮೆ ಸೊಪ್ಪು ಬೆಳೆಯಲು ಕರೆಸಿದ್ದ ಕೊಳವೆ ಬಾವಿಗೆ ಸಂರ್ಕ ಪಡೆಯಲು ವೈರ್‌ಗಳನ್ನು ನೆಲದ ಮೇಲೆ ಎಳೆದಿದ್ದು, ರೇಷ್ಮೆ ಸೊಪ್ಪಿನ ಜೊತೆಗೆ ವಿದ್ಯುತ್ ತಂತಿ ಕತ್ತರಿಸಿದ ಪರಿಣಾಮ ಘಟನೆ ಸಂಭವಿಸಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೊಟ್ಟಿಲು ಸ್ವೀಕಾರ ಕೇಂದ್ರ ಆರಂಭ ಇಂದು
ಚಿಕ್ಕಬಳ್ಳಾಪುರ: ನವಜಾತ ಶಿಶುಗಳನ್ನು ಅನಾಥವಾಗಿ ಬಿಟ್ಟು ಹೋಗುವ ಪರಿಪಾಠ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಕಂದಮ್ಮಗಳ ರಕ್ಷಣೆಗಾಗಿ ತೊಟ್ಟಿಲು ಕಂದನ ಸ್ವೀಕಾರ ಕೇಂದ್ರಗಳನ್ನು ಸ್ಥಾಪಿಸಿದೆ.
ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಕೇಂದ್ರ ತೆರೆಯಲಾಗುತ್ತಿದೆ. ಅನಾಥವಾಗಿ ಕಂಡು ಬರುವ ನವಜಾತ ಶಿಶುಗಳಿಗೆ ತೊಟ್ಟಿಲು ಕಂದನ ಸ್ವೀಕಾರ ಕೇಂದ್ರ ಆಸರೆಯಾಗಿದೆ. ಎಲ್ಲಾದರೂ ಮಗು ಪತ್ತೆಯಾಗಿರುವುದನ್ನು ತಿಳಿದುಕೊಂಡು ಈ ಕೇಂದ್ರದಲ್ಲಿ ಆರೈಕೆ ನೀಡಲಾಗುತ್ತದೆ. ಇದಕ್ಕಾಗಿ ವೈದ್ಯರು ಮತ್ತು ಶುಶ್ರೂಷಕಿಯರನ್ನು ನಿಯೋಜಿಸಲಾಗುತ್ತದೆ. ಆ ನಂತರ ಕಾನೂನಿನ ನಿಯಮದ ಪ್ರಕಾರ ಆ ಅನಾಥ ಮಕ್ಕಳನ್ನು ದತ್ತು ನೀಡುವುದು ಇಲ್ಲವೇ ರಕ್ಷಣೆ ಜವಾಬ್ದಾರಿಯನ್ನು ನೋಡಿಕೊಳ್ಳುತ್ತದೆ. ಮೇ 30 ರಂದು ಬೆಳಿಗ್ಗೆ 9.30 ಕ್ಕೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ತೊಟ್ಟಿಲು ಕಂದನ ಸ್ವೀಕಾರ ಕೇಂದ್ರವನ್ನು ಜಿಲ್ಲಾಧಿಕಾರಿ ವಿಶಾಲ್  ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ನೀಲಾ ಮಂಜುನಾಥ್ ಹಾಗೂ ಎಸ್‌ಪಿ ದಿವ್ಯಾ ಗೋಪಿನಾಥ್ ಮುಂತಾದವರು ಭಾಗವಹಿಸಲಿದ್ದಾರೆ.

ಮಾರ್ಗದರ್ಶನ ತರಬೇತಿ ಶಿಬಿರ ನಾಳೆ
ಕೋಲಾರ: ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಹಲವು ವೃತ್ತಿಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಮಾರ್ಗದರ್ಶ ಶಿಬಿರವನ್ನು ಮೇ 31ರಂದು ಶನಿವಾರ ಕೆಜಿಎಫ್‌ನ ಉರಿಗಾಂನಲ್ಲಿರುವ ಟಿ.ತಿಮ್ಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ ದಿ ಹಿಂದೂ ಪತ್ರಿಕೆ ಹಮ್ಮಿಕೊಂಡಿದೆ. ಸಿಇಟಿ ಫಲಿತಾಂಶಗಳು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಕೋರ್ಸ್‌ಗಳ ಆಯ್ಕೆಗೆ ಮಾರ್ಗರ್ಶನ ನೀಡಲಿರುವ ಈ ಶಿಬಿರದಲ್ಲಿ ಸಿಇಟಿ ತೇರ್ಗಡೆಯಾಗಿರುವವರು ಮಾತ್ರವಲ್ಲದೆ, ಎಸ್ಸೆಸ್ಸೆಲ್ಸಿ, ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಭಾಗವಹಿಸಬಹುದು.  ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ, ಸಿ.ಬೈರೇಗೌಡ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ.ಎಸ್.ಗೋವಿಂದೇಗೌಡ, ಚಿಂತಾಮಣಿಯ ಕುರುಬೂರಿನಲ್ಲಿರುವ ರೇಷ್ಮೆ ಕೃಷಿ ಕಾಲೇಜಿನ ಬೆಳೆ ಉತ್ಪಾದನೆ ಹಾಗೂ ರೇಷ್ಮೆ ವಿಭಾಗದ ಮುಖ್ಯಸ್ಥ ಡಾ.ಎಂ.ವಿಜಯೇಂದ್ರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬಾಲವೆಂಕಟೇಶ 8867449395 ಇವರನ್ನು ಸಂಪರ್ಕಿಸಬಹುದು.

ಮೋದಿಗೆ ಅಭಿನಂದನೆ
ಕೋಲಾರ: ದೇಶದ 15ನೇ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಯವರು ಪ್ರಮಾಣವಚನ ಸ್ವೀಕರಿಸಿದ ಸಲುವಾಗಿ ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಕೆ.ವಿ. ಮುನಿವೆಂಕಟಪ್ಪ ಈ ಹಿಂದೆ ಅಧಿಕಾರ ನಡೆಸಿ ಯುಪಿಎ ಮತ್ತು ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದರು. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ತಿಳಿಸಿದರು. ಜೆ.ಕೆ.ನಾರಾಯಣಶೆಟ್ಟಿ, ಎಸ್.ವೆಂಕಟೇಶಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement