ಸಾರ್ವಜನಿಕವಾಗಿ ಧೂಮಪಾನ ಮಾಡಬೇಡಿ: ಡಿವೈಎಸ್‌ಪಿ ಸಲಹೆ
ಕೋಲಾರ: ಸಾರ್ವಜನಿಕ ಬಳಕೆಯ ಎಲ್ಲಾ ರೀತಿಯ ಸ್ಥಳಗಳಲ್ಲಿ ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಸೇವನೆ ಕೋಟ್ಪಾ ಕಾಯ್ದೆ ಪ್ರಕಾರ ನಿಷೇಧಿಸಲಾಗಿದೆ ಎಂದು ಡಿವೈಎಸ್‌ಪಿ ಅಶೋಕ್‌ಕುಮಾರ್ ತಿಳಿಸಿದರು.
ನಗರದ ಕನಕ ಮಂದಿರ ಸಭಾಂಗಣದಲ್ಲಿ ಕರೆಯಲಾಗಿದ್ದ ಬೀಡಿ, ಸಿಗರೇಟು, ಪಾನ್‌ಬೀಡಾ, ಟೀ-ಕಾಫಿ ಮಾರಾಟ ಸೇರಿದಂತೆ ಇತರೆ ಚಿಲ್ಲರೆ ಅಂಗಡಿ ವ್ಯಾಪಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಭಾಂಗಣ, ಆಸ್ಪತ್ರೆ ಕಟ್ಟಡಗಳು, ಆರೋಗ್ಯ ಕೇಂದ್ರಗಳು, ಹೊಟೇಲ್, ರೆಸ್ಟೋರೆಂಟ್, ಸಾರ್ವಜನಿಕ ಕಚೇರಿಗಳು, ನ್ಯಾಯಾಲಯ ಕಟ್ಟಡಗಳ ಸುತ್ತಮುತ್ತ, ಶೈಕ್ಷಣಿಕ ಸಂಸ್ಥೆಗಳು, ಗ್ರಂಥಾಲಯ, ಸಾರ್ವಜನಿಕ ಸಮುದಾಯ ಕೇಂದ್ರಗಳು, ಸಭಾಂಗಣಗಳು, ರೇಲ್ವೆ ನಿಲ್ದಾಣಗಳು, ಬಸ್ ನಿಲ್ದಾಣ, ಶಾಪಿಂಗ್‌ಮಾಲ್‌ಗಳು, ಚಿತ್ರಮಂದಿರಗಳು, ಡಿಸ್ಕೋಥೆಕ್‌ಗಳು, ಕಾಫಿಹೌಸ್‌ಗಳು, ಪಬ್, ಬಾರ್‌ಗಳು, ವಿಮಾನ ನಿಲ್ದಾಣದ ಅಂಗಳ ಹಾಗೂ ಮನರಂಜನಾ ಕೇಂದ್ರಗಳಲ್ಲಿ ಸಿಗರೇಟ್ ಸೇವನೆ, ಮಾರಾಟ ಮತ್ತು ಇತರೆ ತಂಬಾಕು ಉತ್ಪನ್ನಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
ನಿಷೇಧಿತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ 200 ವರಗೆ ದಂಡ ವಿಧಿಸಲಾಗುವುದು. ತಂಬಾಕು ಉತ್ಪನ್ನಗಳ ಬಳಕೆ ಜಾಹಿರಾತುಗಳ ಅತಿ ರಂಜಿತ ಪ್ರದರ್ಶನ ನಿಷೇಧಿಸಲಾಗಿದೆ. ಈ ಬಗ್ಗೆ ಮೊದಲ ಬಾರಿಗೆ ತಪ್ಪಿದರೆ 1 ಸಾವಿರ ದಂಡ ಅಥವಾ 2 ವರ್ಷ ಜೈಲು, ಪದೇ ಪದೇ ಮುಂದುವರೆದಲ್ಲಿ 5 ಸಾವಿರ ದಂಡ ಹಾಗೂ 5 ವರ್ಷ ಜೈಲು ಶಿಕ್ಷೆ ಇದೆ ಎಂದರು.
ಹಾಗೆಯೇ ತಂಬಾಕು ಉತ್ಪನ್ನಗಳನ್ನು ಮಾರಲು ಪ್ರೋತ್ಸಾಹಿಸುವುದು ಹಾಗೂ 18 ವರ್ಷದೊಳಗಿನ ಒಳಗಿನ ವಯಸ್ಸಿನವರಿಗೆ ಮತ್ತು ಶಾಲಾ ಕಾಲೇಜುಗಳ 100ಮೀಟರ್ ಸುತ್ತಾಮುತ್ತ ಮಾರಾಟ ಮಾಡಿದರೆ ದಂಡ ವಿದಿಸಲಾಗುವುದೆಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸಿಪಿಐ ಎ.ಬಿ. ಸುಧಾಕರ್, ಪಿಎಸ್‌ಐ ಯಶ್ವಂತ್, ನಾರಾಯಣಸ್ವಾಮಿ, ಜಗದೀಶ್, ಸಂದೀಪ್, ಶಿವಣ್ಣ ಹಾಗೂ ಕೋಟ್ಪಾ ಕಾಯ್ದೆ ಜನಜಾಗೃತಿ ಆಂದೋಲನದ ಸಂಯೋಜಕ ಅಚ್ಚುತ್ ಇದ್ದರು.