ಉತ್ತಮ ಮಳೆ: ಕೃಷಿ ಚಟುವಟಿಕೆ ಚುರುಕು
ಗುಡಿಬಂಡೆ: ತಾಲೂಕಿನಾದ್ಯಂತ ಸುರಿದ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕಳದೆರಡು ತಿಂಗಳಿಂದ ಬಿಸಿಲಿನಿಂದ ಬಳಲಿದ್ದ ಪಟ್ಟಣದ ಜನತೆ ತಂಪಿನಿಂದ ಉಲ್ಲಸಿತರಾಗಿದ್ದಾರೆ. ಕೃಷಿ ಇಲಾಖೆ ಪ್ರಕಾರ ಬುಧುವಾರ ರಾತ್ರಿ ತಾಲೂಕಿನಲ್ಲಿ 37 ಮಿ.ಮೀ. ಮಳೆಯಾಗಿದ್ದು, ಸೋಮೇನಹಳ್ಳಿ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗಿದೆ. ಕೃಷಿಕರು ಜಮೀನಿನಲ್ಲಿ ಉಳುಮೆ ಪ್ರಾರಂಭಸಿದ್ದು, ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಬರಿದಾಗಿದ್ದ ರೈತರ ಕೊಳವೆ ಬಾವಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದರಿಂದ ತೋಟದ ಬೆಳೆಗಳಿಗೆ ಅನುಕೂಲವಾಗಿದೆ. ಕೃಷಿ ಇಲಾಖೆ ರೈತರಿಗೆ ನೀಡುವ ರಸಗೊಬ್ಬರ, ಬಿತ್ತನೆಬೀಜ, ಕೀಟನಾಶಕ ಮುಂತಾದುವನ್ನು ವಿತರಿಸಲು ಸಿದ್ಧತೆ ಮಾಡಿಕೊಂಡಿರುವುದಾಗಿ ಸಹಾಯಕ ಕೃಷಿ ನಿರ್ದೇಶಕ ಮಂಜು ನಾಥ್ ತಿಳಿಸಿದ್ದಾರೆ.
ಶಾಲಾ ಮೈದಾನ ಸ್ವಚ್ಛಗೊಳಿಸಿದ ಮಕ್ಕಳು
ಕೋಲಾರ: ಸರ್ಕಾರಿ ಆದೇಶದಂತೆ ಕೋಲಾರ ನಗರದಲ್ಲಿ ಶುಕ್ರವಾರ ಸರ್ಕಾರಿ ಶಾಲೆಗಳ ಪ್ರಾರಂಭೋತ್ಸವಕ್ಕೆ ತಯಾರಿ ನಡೆಯಿತು. ಅನೇಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕ-ಶಿಕ್ಷಕಿ, ಬೋಧನಾ ಸಿಬ್ಬಂದಿ ಹಾಗೂ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದರು. ಕೊಠಡಿಗಳು, ಕಚೇರಿ, ಆವರಣ, ಮೈದಾನದ ಸ್ವಚ್ಛತೆಗೆ ಪ್ರತಿ ಶಾಲೆಯಲ್ಲಿ ಅನುದಾನ ಲಭ್ಯತೆಯಿದ್ದರೂ ಕೂಲಿಕಾರರ ಕೈಯಲ್ಲಿ ಇಲ್ಲವೇ ಡಿ. ಗ್ರೂಪ್ ನೌಕರರಿಂದ ಸ್ವಚ್ಛತೆ ಮಾಡಿಸುವುದು ಬಿಟ್ಟು ಮಕ್ಕಳ ಕೈಗೆ ಪೊರಕೆ, ಕಸ ತೆಗೆಯುವ ಮರ ಕೊಟ್ಟು ದುಡಿಸಿಕೊಳ್ಳಲಾಯಿತು. ನಗರದ ಬಿಇಒ ಕಚೇರಿ ಎದುರಿನಲ್ಲೇ ಇರುವ ಸರ್ಕಾರಿ ಕನ್ನಡ ಹಳೆ ಮಾಧ್ಯಮ ಶಾಲೆ ಮಕ್ಕಳು ಊರಿಬಿಸಿಲಿನಲ್ಲಿ ಮೈದಾನ ಸ್ವಚ್ಛತಾ ಕಾರ್ಯ ನಡೆಸಿದರೆ, ಶಾಲಾ ಮುಖ್ಯಸ್ಥರು ಮತ್ತು ಸಿಬ್ಬಂದಿ ನೆರಳಿನಲ್ಲಿ ನಿಂತು ಮಕ್ಕಳಿಗೆ ಆ ಕಡೆ ಗುಡಿಸು, ಈ ಕಡೆ ಗುಡಿಸು ಎಂದು ಆದೇಶ ನೀಡುತ್ತಿದ್ದರು. ಮಕ್ಕಳು ತಾನು ಶೋಷಣೆಗೆ ಒಳಪಟ್ಟಿದ್ದೇನೆಂಬ ಅರಿವು ಇಲ್ಲದೆ ಶಿಕ್ಷಕರು ನೀಡಿದ ಶಿಕ್ಷೆಯನ್ನು ವಿರೋಧಿಸದೆ ಅನುಭವಿಸಿದರು. ಇದೇ ರೀತಿ ಅನೇಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಂದಲೇ ಶಾಲಾ ಕೊಠಡಿಗಳ ಸ್ವಚ್ಛತೆ, ಕಡತಗಳ ಮೇಲಿನ ಧೂಳು ವಿಲೇವಾರಿ ಮಾಡಿಸಲಾಗಿದೆ. ಮಕ್ಕಳಿಂದಲೇ ತೋರಣ ಕಟ್ಟಿಸಿ, ಹೆಣ್ಣು ಮಕ್ಕಳಿಂದ ರಂಗೋಲಿ ಬಿಡಿಸಿ, ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಗಿದೆ.