ತೊಟ್ಟಿಲು ಕಂದನ ಸ್ವೀಕಾರ ಕೇಂದ್ರ ಕಾರ್ಯಾರಂಭ
ಚಿಕ್ಕಬಳ್ಳಾಪುರ: ಅನಾಥ ನವಜಾತ ಶಿಶುಗಳಿಗೆ ಆಸರೆಯಾಗಲಿರುವ ತೊಟ್ಟಿಲು ಕಂದನ ಸ್ವೀಕಾರ ಕೇಂದ್ರವನ್ನು ಜಿಲ್ಲಾಧಿಕಾರಿ ಡಾ. ಆರ್ .ವಿಶಾಲ್ ಉದ್ಘಾಟಿಸಿದರು.
ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕಿನ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ತೊಟ್ಟಿಲು ಕಂದನ ಸ್ವೀಕಾರ ಕೇಂದ್ರ ಶುಕ್ರವಾರ ಆರಂಭವಾಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವಿಶಾಲ್, ತೊಟ್ಟಿಲು ಕಂದನ ಸ್ವೀಕಾರ ಕೇಂದ್ರವನ್ನು ಪ್ರಾರಂಭಿಸುತ್ತಿರುವುದು ಶ್ಲಾಘನೀಯ. ಏನೂ ಅರಿಯದ ಮಕ್ಕಳು ಬೇರೆ ಬೇರೆ ಕಾರಣಗಳಿಂದ ಅನಾಥವಾಗಿ ಬೀದಿಪಾಲಾಗಿ ತೊಂದರೆಯನ್ನು ಅನುಭವಿಸುವುದನ್ನು ನಾವು ಕಾಣುತ್ತೇವೆ. ಮಕ್ಕಳ ಮಾರಾಟ ಮತ್ತು ಸಾಗಣಿಕೆ ಸಹ ಸಮಸ್ಯೆಯಾಗಿದೆ. ಈ ಕೇಂದ್ರಗಳು ಮೊದಲು ಮಗುವಿಗೆ ಅಗತ್ಯ ವೈದ್ಯಕೀಯ ಸೇವೆಯನ್ನು ಒದಗಿಸುತ್ತವೆ. ಮಗುವಿಗೆ ಸೂಕ್ತ ರಕ್ಷಣೆ ಒದಗಿಸಿದ ನಂತರ ಆ ಮಗುವನ್ನು ಕಾನೂನು ನಿಯಮಾನುಸಾರ ಮಕ್ಕಳನ್ನು ಬಯಸುವವರಿಗೆ ನೀಡುತ್ತವೆ ಎಂದರು. ಒಂದು ವೇಳೆ ತಾಲ್ಲೂಕು ಕೇಂದ್ರಗಳಲ್ಲಿ ಸೂಕ್ತ ಸೌಲಭ್ಯಗಳು ದೊರೆಯದಿದ್ದ ಪಕ್ಷದಲ್ಲಿ ಅಲ್ಲಿ ಸ್ವೀಕೃತವಾಗಿರುವ ಮಕ್ಕಳನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ. ಈ ಕೇಂದ್ರಗಳಲ್ಲಿ ಮಕ್ಕಳ ಸಮಗ್ರ ಸಂರಕ್ಷಣೆಗಾಗಿ ಸಾಂತ್ವನ ಕೇಂದ್ರ, ಸ್ವಾಧಾರ ಕೇಂದ್ರ ಹಾಗೂ ಉಜ್ವಲ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ನೀಲಾ ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸುರೇಖಾ, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಮಂಜುಳ ಉಪಸ್ಥಿತರಿದ್ದರು.
ಬಾಗೇಪಲ್ಲಿಯಲ್ಲೂ ತೊಟ್ಟಿಲು ಕೇಂದ್ರ
ಬಾಗೇಪಲ್ಲಿ: ಬೇಡವಾದ ನವಜಾತ ಶಿಶುಗಳನ್ನು ಬೇಲಿ ಪೊದೆ, ಬಾವಿ, ಚರಂಡಿ ಮುಂತಾದ ಕಡೆಗಳಲ್ಲಿ ಬಿಸಾಕುವುದರ ಬದಲಿಗೆ ದೇವರ ತೊಟ್ಟಿಲಿನಲ್ಲಿ ಮಲಗಿಸಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಬಾಬುರೆಡ್ಡಿ ತಿಳಿಸಿದರು.
ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ತೊಟ್ಟಿಲು ಕಂದನ ಸ್ವೀಕಾರ ಕೇಂದ್ರ ದೇವರ ತೊಟ್ಟಿಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಲಕ್ಷ್ಮಿದೇವಮ್ಮ ಮಾತನಾಡಿದರು. ತಹಸೀಲ್ದಾರ್ ಎಂ.ಎ.ಪದ್ಮ, ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಡಾ.ಮಂಜೇನಾಯಕ್, ಡಾ.ಸತ್ಯನಾರಾಯಣ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿಯರಾದ ಅನುಸೂಬಾಯಿ, ಈರಮ್ಮ, ಸಾಂತ್ವನ ಕೇಂದ್ರದ ಸುಶೀಲ, ವನಜಾಕ್ಷಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮರಕ್ಕೆ ಬಸ್ ಡಿಕ್ಕಿ: 10 ಜನರಿಗೆ ಗಾಯ
ಬಂಗಾರಪೇಟೆ: ಸಾರಿಗೆ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹತ್ತು ಪ್ರಯಾಣಿಕರು ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಪಟ್ಟಣದಿಂದ ಕೋಲಾರ ಕಡೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಬಾವರಹಳ್ಳಿ ಗೇಟ್ ಬಳಿ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಮತ್ತು ಮತ್ತೊಂದು ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿಯಾಗಿ ರಸ್ತೆಯಲ್ಲಿ ಬಿದ್ದಿದ್ದವು. ಆಗ ಸಂಭವನೀಯ ಅನಾಹುತ ತಪ್ಪಿಸಲು ಹೋದ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಬಸ್ ಗುದ್ದಿಸಿದ್ದಾನೆ. ಆಗ ಬಸ್ನಲ್ಲಿದ್ದ ಪ್ರಯಾಣಿಕರ ಪೈಕಿ 10 ಜನರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ದ್ವಿಚಕ್ರ ವಾಹನ ಕಳವು
ಕೆಜಿಎಫ್: ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ದುಷ್ಕರ್ಮಿಗಳು ಕಳವು ಮಾಡಿಕೊಂಡು ಹೋಗಿರುವ ಘಟನೆ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಂಬೇಡ್ಕರ್ನಗರ ನಿವಾಸಿ ಶಿವಶಂಕರ್ ಅವರು ಗೀತಾ ರಸ್ತೆಯಲ್ಲಿರುವ ಪ್ರಸಾದ್ ಫರ್ನಿಚರ್ಸ್ ಅಂಗಡಿಯ ಮುಂಭಾಗ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದರು. ಆದರೆ, ಅವರು ವಾಪಸ್ ಬಂದು ನೋಡಿದರೆ ವಾಹನ ಅಲ್ಲಿರಿಲಿಲ್ಲ. ಅನುಮಾನಗೊಂಡು ತಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಪರಿಚಯಸ್ಥರ ಬಳಿ ಹುಡಿಕಿದರೂ ಪತ್ತೆಯಾಗದ ಕಾರಣ ತಮ್ಮ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಪಘಾತ: ಒಬ್ಬನ ಸಾವು
ಚಿಕ್ಕಬಳ್ಳಾಪುರ: ಟ್ರ್ಯಾಕ್ಟರ್ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಒಬ್ಬ ಮೃತಪಟ್ಟು, ಮತ್ತೊರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮರಸನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಮೃತನು ಶೆಟ್ಟಿಗೆರೆ ಗ್ರಾಮದ ಗಂಗರಾಜು(28). ಗಾಯಾಳು ರವಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಂಡೆ ಕಲ್ಲುಗಳನ್ನು ತುಂಬಿದ್ದ ಟ್ರ್ಯಾಕ್ಟರ್ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ತಿರುವು ಪಡೆಯುತ್ತಿದ್ದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಕಡೆಯಿಂದ ವೇಗವಾಗಿ ದ್ವಿಚಕ್ರ ವಾಹನದಲ್ಲಿ ಬಂದ ಗಂಗರಾಜು, ರವಿ ಟ್ರ್ಯಾಕ್ಟರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಬಿದ್ದು ಗಂಗರಾಜು ಸ್ಥಳದಲ್ಲೇ ಮೃತಪಟ್ಟಿದ್ದು ರವಿ ತೀವ್ರವಾಗಿ ಗಾಯಗೊಂಡಿದ್ದಾನೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಬಾಲಾಜಿಸಿಂಗ್, ಸಂಚಾರಿ ಠಾಣೆಯ ಎಸ್ ಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಪಘಾತ: ಶಾಸಕರ ಸಂಬಂಧಿ ಸಾವು
ಚಿಕ್ಕಬಳ್ಳಾಪುರ: ಟಾಟಾ ಏಸಿ ವಾಹನ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಶಾಸಕರ ಚಿಕ್ಕಪ್ಪನ ಮಗ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ದುರ್ದೈವಿ ಅನುಷ್ (24) ಎಂದು ಗುರುತಿಸಲಾಗಿದೆ. ಮೃತನು ತಾಲೂಕಿನ ಅರೂರು ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಟಾಟಾ ಏಸಿ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಅನುಷ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತನು ಶಾಸಕ ಕೆ. ಸುಧಾಕರ್ ಅವರ ಚಿಕ್ಕಪ್ಪ ಲಕ್ಷ್ಮೀನಾರಾಯಣರೆಡ್ಡಿಯವರ ಪುತ್ರ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.