ಮುಳಬಾಗಲು ಪುರಸಭೆಗೆ ಎಸ್‌ಎಫ್‌ಸಿ ಮುಕ್ತ ನಿಧಿಯಿಂದ ಅನುದಾನ
ಮುಳಬಾಗಲು: ಎಸ್‌ಎಫ್‌ಸಿ ಮುಕ್ತ ನಿಧಿಯಿಂದ ಪುರಸಭೆಗೆ ರು. 33760000ಗಳ ಅನುದಾನ ನಿಗದಿಯಾಗಿದ್ದು, ಶೇ.50 ಮೊತ್ತಕ್ಕೆ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ನಡಾವಳಿಕೆ ಸಲ್ಲಿಸಲು ಅಧ್ಯಕ್ಷೆ ಆರ್. ಶಾಹೀನ್ ತಾಜ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಶ್ರೀನಿವಾಸಪುರ ವೃತ್ತದಿಂದ ಬಜಾರು ಬೀದಿ ಮಾರ್ಗವಾಗಿ ಮಲ್ಲನಾಯಕನಹಳ್ಳಿ ರಸ್ತೆಯ ಬೈಪಾಸ್‌ವರೆಗೆ ರಸ್ತೆ ಅಭಿವೃದ್ಧಿ ಮಾಡಲು ಸರ್ಕಾರ ರು. 15 ಕೋಟಿ ಬಿಡುಗಡೆ ಮಾಡಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ಒಳ ಚರಂಡಿ ರಸ್ತೆ ಮಧ್ಯೆ ಇರುವ ಎಲ್ಲಾ ಪೈಪ್‌ಲೈನ್‌ಗಳ ಕಾರ್ಯ ಶಿಘ್ರವೇ ಪೂರ್ಣಗೊಳಿಸಬೇಕು. ಎರಡು ಅಡಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಕಳಪೆ ಕಾಮಗಾರಿ ನಡೆಸಿದರೆ ಅವರನ್ನು ಕಪ್ಪುಪಟ್ಟೆಗೆ ಸೇರಿಸಲು ಸೂಚಿಸಿದರು. ಪಟ್ಟಣದಲ್ಲಿ ಅಳವಡಿಸಿರುವ ಬೋರ್‌ವೆಲ್‌ಗಳ ಪಂಪು ಮೋಟರ್‌ಗಳು ಕಳಪೆ ಎಂದು ಸದಸ್ಯ ಎಂ. ಆರ್. ಮುರಳಿ ಆರೋಪಿಸಿದರು. ಕುರುಡುಮಲೆ ಬಳಿ ನಿರ್ಮಿಸಿರುವ ಕಸವಿಲೇವಾರಿ ಕೇಂದ್ರದಲ್ಲಿ ನಡೆಸಿರುವ ರು. 20 ಲಕ್ಷಗಳ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಸದಸ್ಯ ಠಾಕೂರ್ ಸಿಂಗ್ ಆರೋಪಿಸಿದರು. ಅಧಿಕಾರಿಗಳು ಪುರಸಭೆ ಕಾರ್ಯಗಳಿಗೆ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆಂದು ಕ್ಯಾಸೆಟ್ ಬಾಬು ಆರೋಪಿಸಿದರು. ನಾಗರಾಜ್, ಸತೀಶ್ ಕುಮಾರ್, ಅನ್ವರ್ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಬಿ.ಎಸ್.ದಿವ್ಯಶ್ರೀ, ರಾಧಿಕಾ ರಾಜಶೇಖರ್, ಎಂ.ಎಸ್.ನಾರಾಯಣಸ್ವಾಮಿ, ತ್ರಿವೇಣೆ ಮಂಜುನಾಥ್ ಭಾಗವಹಿಸಿದ್ದರು.
ಕಳೆ ಕಳೆದುಕೊಂಡ ಕುಂಬಾರಿಕೆ ಕಸುಬು
ಗೌರಿಬಿದನೂರು: ಆಧುನಿಕ ಯುಗದಲ್ಲಿ ಕುಂಬಾರಿಕೆಗೆ ಧಕ್ಕೆಯುಂಟಾಗಿದೆ. ಕಂಬಾರ ಕಸಬು ಮಾಡುತ್ತಿದ್ದ ಕಾರ್ಮಿಕ ದಿಕ್ಕು ತೋಚದೆ ಕೈಚೆಲ್ಲಿ ಕುಳಿತಿದ್ದಾನೆ.
ಈ ಹಿಂದೆ ಮಡಿಕೆ, ಕುಡಿಕೆಗೆ ಬೇಡಿಕೆ ಇತ್ತು. ಮನೆಗಳಲ್ಲಿ ಮಡಿಕೆ ಬಳಸುತ್ತಿದ್ದರು. ಕ್ರಮೇಣ ಪ್ಲಾಸ್ಟಿಕ್, ಸ್ಟೀಲ್, ಅಲ್ಯೂಮಿನಿಯಮ್ ವಸ್ತುಗಳು ಲಭ್ಯವಿರುವುದು ಮತ್ತು ಆಧುನಿಕತೆಯ ಭರಾಟೆಯಲ್ಲಿ ಇಂದು ಮಡಿಕೆಗಳನ್ನು ಕೇವಲ ಬಡವರು ಬಳಸುತ್ತಿರುವುದರಿಂದ ಈ ವೃತ್ತಿಯನ್ನು ನಂಬಿದವರಿಗೆ ಕಾಯಕ ಕಷ್ಟಸಾಧ್ಯವಾಗಿದೆ. ಕಳೆದ ಎರಡು ದಶಕಗಳಿಂದ ನಿಗದಿತ ಮಳೆಯಾಗದೆ ಕೆರೆ ಕುಂಟೆಗಳಲ್ಲಿ ನೀರಿಲ್ಲದೆ ಜೇಡಿ ಮಣ್ಣಿಗೆ ಬರ ಬಂದಿದ್ದು ಕುಂಬಾರಿಕೆ ತಯಾರಿಕೆಗೆ ದಕ್ಕೆಯಾಗಿದೆ. ಮಡಿಕೆ ತಯಾರಿಕೆಯ ಖರ್ಚು ಹೆಚ್ಚಾಗಿರುವುದರಿಂದ ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಎಂಬ ಸ್ಥಿತಿಗೆ ಬಂದಿದೆ. ಬಡವರ ಫ್ರೀಡ್ಜ್ ಎಂದು ಖ್ಯಾತಿ ಪಡೆದಿದ್ದ ಮಡಿಕೆ ಇಂದು ತಯಾಕರಿಗೆ ತೀವ್ರ ತೊಂದರೆಯಾಗಿದೆ ಎಂದು ತಯಾರಕ ತನ್ನ ಅಳಲು ತೋಡಿಕೊಳ್ಳುತ್ತಾರೆ.