ಮುಸ್ಲಿಂ-ಹಿಂದೂ ಭಾವೈಕ್ಯತೆಯ ಉರುಸ್
ಬಾಗೇಪಲ್ಲಿ: ಹಿಂದೂ-ಮುಸ್ಲಿಂ ಭಾವೈಕ್ಯತೆ ಪ್ರತೀಕವಾಗಿರುವ ಸಂತ ಹಜರತ್ ಷೇಕ್ ಹುಸೇನ್ ಷಾ ವಲಿ ತಾತಯ್ಯ ಅವರ 50ನೇ ಉರುಸ್ -ಎ-ಷರೀಫ್ ಅಂಗವಾಗಿ ತಾತಯ್ಯ ಅವರ ದರ್ಗಾದಲ್ಲಿ ಸಂದಲ್ (ಗಂಧದ ಪೂಜೆ) ಬಹಳ ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಗಂಗಮ್ಮಗುಡಿ ರಸ್ತೆಯಿಂದ ಕೊಡಿಕೊಂಡಗೆ ಹಾದುಹೋಗುವ ಮಾರ್ಗದ ರಸ್ತೆಯಲ್ಲಿ ಇರುವ ಷೇಕ್ ಹುಸೇನ್ ಷಾ ವಲಿ ತಾತಯ್ಯ ಅವರ ದರ್ಗಾದ ಬಳಿ ಹಜರತ್ ಷೇಕ್ ಹುಸೇನ್ ಷಾ ವಲಿ ಉರುಸ್ ಆಚರಣಾ ಸಮಿತಿ ನೇತೃತ್ವದಲ್ಲಿ ವಿಶೇಷ ದೀಪಾಲಂಕಾರ ಕೈಗೊಳ್ಳಲಾಗಿತ್ತು. ತಾತಯ್ಯರವರ ಸಮಾಧಿಗೆ ವಿವಿಧ ಬಗೆ ಹೂ ಹಾಕಿ ಸಿಂಗರಿಸಲಾಗಿತ್ತು.
ಪಟ್ಟಣದ ಕೆ.ವಿ.ಅಬ್ದುಲ್ ಸಮದ್ ಸಾಬ್ ಅವರಿಂದ ಮೊದಲ ಗಂಧದ ಪೂಜೆ ಮತ್ತು ಕೆ.ಎಂ.ಮಹಮದ್ ಉಸ್ಮಾನ್ ಹಾಗೂ ಬಾಷಾಸಾಬ್ ಮಗ ಇಬ್ರಾಹಿಂ ಅವರಿಂದ ಎರಡನೇ ಗಂಧದ ಪೂಜೆ ನಡೆಯಿತು. ನಂತರ ಗಂಧವನ್ನು ಹೊತ್ತ ಕುಟುಂಬದ ಸದಸ್ಯರು ಬಿಳಿ ಸಮವಸ್ತ್ರ ಹಾಗೂ ಹಸಿರು ಶಾಲಿನಿಂದ ತಲೆಗೆ ಪೇಟಾ ಧರಿಸಿದ್ದರು. ಗಂಧದ ಹಿಂಭಾಗದಲ್ಲಿ ಹೂವುಗಳಿಂದ ಸಿಂಗರಿಸಿದ್ದ ಹೂವಿನ ಮಾಲೆಗಳನ್ನು ಪಟ್ಟಣದ ಮುಖ್ಯರಸ್ತೆ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಫಕೀರರು ತಮಟೆ ಬಾರಿಸುತ್ತ ಅಲ್ಲಾಹನ ನಾಮಸ್ಮರಣೆಯೊಂದಿಗೆ ಮೆರವಣಿಗೆ ನಡೆಸಿದರು.
ಗಂಧವನ್ನು ಹಿರಿಯ ಫಕೀರರ ನೇತೃತ್ವದಲ್ಲಿ ಷೇಕ್ ಹುಸೇನ್ ಷಾ ವಲಿ ತಾತಯ್ಯ ಅವರ ಸಮಾಧಿಗೆ ಗಂಧದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಗಂಧದ ಅಭಿಷೇಕ ಮಾಡಲಾಯಿತು. ನಂತರ ಗಂಧವನ್ನು ನೆರೆದಿದ್ದ ಭಕ್ತ ಸಮೂಹಕ್ಕೆ ಹಂಚಲಾಯಿತು.
ತಾಲೂಕು ಸೇರಿದಂತೆ ನೂರಾರು ಭಕ್ತಾಧಿಗಳು ಆಗಮಿಸಿ ಗಂಧದ ಪೂಜೆಯಲ್ಲಿ ಭಾಗವಹಿಸಿದ್ದರು. ತಮ್ಮ ಇಷ್ಟಾರ್ಥಗಳು ನೆರವೇರಿಸುವಂತೆ ತಾತಯ್ಯ ಅವರ ಬಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆ ಸದಸ್ಯರಿಂದ ಆಗಮಿಸಿದ್ದ ಭಕ್ತರಿಗೆ ಸಿಹಿ ಪ್ರಸಾದ ನೀಡಿದರು. ದರ್ಗಾಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೇಟಿ ನೀಡಿ ತಾತಯ್ಯರವರಿಗೆ ವಿಶೇಷ ಪೂಜೆ ಸಲ್ಲಿಸಿದರು.