ರವೀಂದ್ರನಾಥ್ ಪರ ದಲಿತರ ಪ್ರತಿಭಟನೆ
ಬಂಗಾರಪೇಟೆ: ಬೆಂಗಳೂರಿನ ಎಡಿಜಿಪಿ ಡಾ. ರವೀಂದ್ರನಾಥ್ ಅವರ ವಿರುದ್ಧ ಹೊರಿಸಲಾಗಿರುವ ಸುಳ್ಳು ಆರೋಪವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಪಟ್ಟಣದಲ್ಲಿ ಶುಕ್ರವಾರ ದಲಿತ ಸಮಾಜ ಸೇನೆ ಮುಖಂಡರು ಪ್ರತಿಭಟನೆ ನಡೆಸಿದರು. ಎಡಿಜಿಪಿ ರವೀಂದ್ರನಾಥ್ ಅವರು ನಿಷ್ಠಾವಂತ ಹಾಗೂ ದಕ್ಷ ಪೊಲೀಸ್ ಅಧಿಕಾರಿ. ಅವರ ಬೆಳವಣಿಗೆಯನ್ನು ಸಹಿಸಲಾಗದ ಕೆಲವರು ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಕ್ಕಿಸಲು ಮುಂದಾಗಿದ್ದಾರೆ. ಪೊಲೀಸ್ ಅಧಿಕಾರಿಯನ್ನು ಸಾಮಾನ್ಯ ವ್ಯಕ್ತಿಯಂತೆ ಬಂಧಿಸಿರುವುದು ಇಡೀ ಪೊಲೀಸ್ ವ್ಯವಸ್ಥೆ ತಲೆತಗ್ಗಿಸುವಂತಾಗಿದೆ. ಇದರಿಂದ ನೊಂದು ಅವರು ರಾಜಿನಾಮೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಅವರ ರಾಜಿನಾಮೆ ಅಂಗೀಕರಿಸಬಾರದು ಎಂದು ಪ್ರತಿಭಟನಾಕಾರರು ಹೇಳಿದರು. ಮೂರು ದಿನಗಳಿಂದ ಈ ಪ್ರಕರಣ ಸದ್ದು ಮಾಡುತ್ತಿದ್ದರೂ ಸರ್ಕಾರ ಮಧ್ಯ ಪ್ರವೇಶಿಸದೇ ಇರುವುದನ್ನು ಖಂಡಿಸಿ ಕೋಲಾರ ಮುಖ್ಯ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು 2 ಗಂಟೆಗಳ ಕಾಲ ಪ್ರತಿಭಟನೆ ಮಾಡಲಾಯಿತು. ಸೂಲಿಕುಂಟೆ ಆನಂದ್, ದೇವಗಾನಹಳ್ಳಿ ಯತೀಶ್, ಕಾರ್ಯಾಧ್ಯಕ್ಷ ಹುಣಸನಹಳ್ಳಿ ರಮೇಶ್, ಜಾನ್, ರಾಧಾ, ಗಜಲಕ್ಷ್ಮಿ, ರಾಜೇಶ್, ಗೋವಿಂದ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.