'ಶುಕ್ರ'ವಾರ ಸಂತೆಗೆ ಶನಿ ಕಾಟ!
-ಕೆ.ರಮೇಶ್
ಬಂಗಾರಪೇಟೆ: ಇತಿಹಾಸ ಪ್ರಸಿದ್ಧ ಬಂಗಾರಪೇಟೆ ಶುಕ್ರವಾರ ಸಂತೆಗೆ ಸ್ಥಳಾವಕಾಶ ಮತ್ತು ಸೌಲಭ್ಯಗಳ ಕೊರತೆಯಿಂದ ದಿನೇ ದಿನೇ ಸಂತೆ ವಿನಾಶದ ಅಂಚಿಗೆ ತಲುಪಿದೆ.
ಶುಕ್ರವಾರದ ಸಂತೆಗೆ ಶತಮಾನಗಳ ಇತಿಹಾಸವಿದೆ. ಹೀಗಿದ್ದಾಗ್ಯೂ ಅಂದಿನಿಂದ ಇಂದಿನವರೆಗೂ ಯಾವುದೇ ಮೂಲಭೂತ ಸೌಲಭ್ಯಗಳು ಇರಲಿಲ್ಲ ಎಂಬುದು ಮಾತ್ರ ವಿಪರ್ಯಾಸ.
ಕನಿಷ್ಠ ಪಕ್ಷ ಸಂತೆ ವಹಿವಾಟ ನಡೆಸಲು ಸೂಕ್ತ ಸ್ಥಳ ಇಲ್ಲ. ಪಾದಚಾರಿಗಳಿಗೆ ಮೀಸಲಿಟ್ಟಿರುವ ಫುಟ್‌ಪಾಥ್‌ನಲ್ಲೇ ನಡೆಯುತ್ತಿದೆ ಸಂತೆ. ಪಟ್ಟಣದಲ್ಲಿ ಜಸಂಖ್ಯೆ ಕಡಿಮೆಯಿದ್ದಾಗ ಪಾದಾಚಾರಿಗಳ ಮಾರ್ಗದಲ್ಲೇ ಸಂತೆ ನಡೆಯುತ್ತಿದ್ದರೂ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಈಗ ಜನಸಂಖ್ಯೆ ಹೆಚ್ಚಾಗಿದೆ. ಹಾಗಾಗಿ, ಸಂತೆ ಕೂಡಾ ಬೃಹತ್ ಆಗಿರುವುದರಿಂದ ಸ್ಥಳಾವಕಾಶ ಕೊರತೆ ಎದುರಾಗಿದೆ.
ವ್ಯಾಪಾರಸ್ಥರಿಗಾಗಿ ಸರ್ಕಾರದ ವತಿಯಿಂದ ಯಾವುದೇ ರೀತಿಯ ಮಳಿಗೆಗಳನ್ನು ನಿರ್ಮಿಸಿಲ್ಲ. ಆದರೆ, ಕರ ಮಾತ್ರ ವಸೂಲಿ ಮಾಡುತ್ತಾರೆ!. ಮಳೆಗಾಲ ಬಂತೆಂದರೆ ಕೆಸರುಗದ್ದೆಯಾಗುವ ಈ ಸಂತೆ ಅಂಗಳದಲ್ಲಿ ಓಡಾಡುವ ಗಿರಾಕಿಗಳ ಬಟ್ಟೆಗಳಿಗೆ ಕೆಸರು ಮೆತ್ತುವುದು ಗ್ಯಾರಂಟಿ. ಬೇಸಿಗೆಯಲ್ಲಿ ನೆರಳಿಲ್ಲದೆ ತಾವು ಗುಡಾರ ಹಾಕಿಕೊಳ್ಳುವ ವ್ಯಾಪಾರಿಗಳಿಗೆ ಮಾತ್ರ ನೆರಳು ಇಲ್ಲದಿದ್ದರೆ ಬಿಸಿಲೆ ಗತಿ. ಮೊದಲಿಗೆ ಗ್ರಾಮಸ್ಥರು ವಾರಕ್ಕೆ ಬೇಕಾದ ದಿನಸಿ ಪದಾರ್ಥಗಳು ಸೇರಿದಂತೆ ಎಲ್ಲವನ್ನೂ ಸಂತೆಯಲ್ಲಿ ಖರೀದಿಸುತ್ತಿದ್ದರು. ಇಂದು ಪ್ರತಿ ಗ್ರಾಮದಲ್ಲೂ ಗಲ್ಲಿಗಲ್ಲಿಗೂ ಚಿಲ್ಲರೆ ಅಂಗಡಿಗಳು ತಲೆ ಎತ್ತಿರುವುದರಿಂದ ಸಂತೆ ಮಹತ್ವ ಪ್ರತಿದಿನ ಕುಗ್ಗುತ್ತಿದೆ.
ಈ ಸಂತೆಗೆ ಸೂಕ್ತ ಜಾಗ ಕಲ್ಪಿಸಲು ಪುರಸಭೆ ಮುಂದಾಗಿದೆ. ತಾಪಂ ಕಚೇರಿ ಹಿಂಭಾಗದಲ್ಲಿರುವ ಜಾಗದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ಸಿಕ್ಕೂ ಒಂದುವರೆ ವರ್ಷವಾದರೂ ಪೂರ್ತಿಯಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಐತಿಹಾಸಿ ಸಂತೆಗೆ ಒಂದು ನೆಲೆ ಕಲ್ಪಿಸಿಕೊಡುವವರೇ ಕಾದು ನೋಡಬೇಕು.