ಶೇ.12 ರೈತರಿಗೆ ಮಾತ್ರ ಸಾಲ!
ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಕೇವಲ ಶೇ.12 ಮಂದಿ ರೈತರಿಗೆ ಮಾತ್ರ ಸಹಕಾರಿ ಬ್ಯಾಂಕಿನ ಸಾಲ ಸೌಲಭ್ಯ ಸಿಗುತ್ತಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಬ್ಯಾಂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎರಡೂ ಜಿಲ್ಲೆಯ ವ್ಯಾಪ್ತಿಯಲ್ಲಿ 41,42,098 ಭೂಹಿಡುವಳಿದ್ದಾರೆ. 31,52,046 ಭೂಹಿಡುವಳಿದಾರರು ಮಾತ್ರ ಸಹಕಾರಿ ಸಂಘಗಳಲ್ಲಿ ತಮ್ಮ ಹೆಸರು ನೊಂದಾಯಿಸಿದ್ದಾರೆ, ಆದರೆ. ಇವರಲ್ಲಿ ಸಾಲ ಪಡೆಯುತ್ತಿರುವವರ ಸಂಖ್ಯೆ ಕೇವಲ 38,235 ಮಂದಿ ಮಾತ್ರ ಎಂದು ತಿಳಿಸಿದರು.
ರಾಜ್ಯಮಟ್ಟದ ಸಭೆ: ಸಹಕಾರಿ ಕ್ಷೇತ್ರದಿಂದ ಜಿಲ್ಲೆಯ ರೈತರು ಸಾಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಹಕಾರಿ ಸಂಸ್ಥೆಗಳಿಂದ ಜಿಲ್ಲೆಯ ರೈತರಿಗೆ ಹೆಚ್ಚಿನ ಅನುಕೂಲವಾಗುವಂತೆ ಮಾಡಲು ಜೂ.6 ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯನ್ನು ಸಹಕಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರೆಯಲು ನಿರ್ಧರಿಸಲಾಗಿದೆ. ಉಪಸಭಾಪತಿ ಶಿವಶಂಕರರೆಡ್ಡಿ ಹಾಗೂ ಶಾಸಕರಾದ ರಮೇಶ್ಕುಮಾರ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.
ಸರ್ಕಾರಿ ನೌಕರರಿಂದ ಡಿಸಿಸಿ ಬ್ಯಾಂಕಿಗೆ 4.20 ಕೋಟಿ ಬಾಕಿ
ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 31423 ಸರ್ಕಾರಿ ನೌಕರರು 1995ರಿಂದ 2004ರವರೆಗೂ ಡಿಸಿಸಿ ಬ್ಯಾಂಕಿನಿಂದ ವಿವಿಧ ಉದ್ದೇಶಗಳಿಗೆ ಪಡೆದಿರುವ 4.20 ಕೋಟಿ ಸಾಲ ಪಾವತಿಸಿಲ್ಲ. ಶೀಘ್ರವೇ ಸಾಲ ಪಾವತಿಸದಿದ್ದರೆ ಅವರ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಎಚ್ಚರಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,
ಎರಡೂ ಜಿಲ್ಲೆಯ ವಿವಿಧ ಇಲಾಖೆಗಳ ನೌಕರರು ಗೃಹ, ಗೃಹೋಪಯೋಗಿ, ವಾಹನ ಮತ್ತಿತರ ಉದ್ದೇಶಗಳಿಗೆ ತಮ್ಮ ವೇತನದ ಮೇಲೆ ಸಾಲ ಪಡೆದು ಮರು ಪಾವತಿಸಿಲ್ಲ.
ಕೂಡಲೇ ಸಾಲ ಮರುಪಾವತಿಸಬೇಕು. ಸಾಲಕ್ಕೆ ಜಾಮೀನುದಾರರಾಗಿ ಸಹಿ ಹಾಕಿರುವ ನೌಕರರ ವಿವರಗಳು ಸಹ ಬ್ಯಾಂಕಿನಲ್ಲಿ ಲಭ್ಯವಿರುವುದರಿಂದ ಸಾಲ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಾಲ ವಸೂಲಿಗಾಗಿ ಬ್ಯಾಂಕಿನ ಅಧಿಕಾರಿಗಳನ್ನು ಒಳಗೊಂಡ ಎರಡು ತಂಡಗಳನ್ನು ರಚಿಸಲಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಾಲ ವಸೂಲಿ ಪ್ರಕ್ರಿಯೆಯನ್ನು ಈ ತಂಡಗಳು ಪ್ರಾರಂಭಿಸಲಿವೆ ಎಂದು ತಿಳಿಸಿದರು.
ಜೂ.7ಕ್ಕೆ ಸಮಾವೇಶ: 1995ರಿಂದ 2004ರವರೆಗೂ ರೈತರಿಂದ 41 ಕೋಟಿ ಬಾಕಿ ಬರಬೇಕಿದೆ. ಸಾಲ ಮನ್ನಾ, ವೈದ್ಯನಾಥನ್ ವರದಿಯಂತೆ 34 ಕೋಟಿ ಸರ್ಕಾರದಿಂದಲೇ ಬರಬೇಕಿದೆ. ಉಳಿದ 7.09 ಕೋಟಿಗಳಲ್ಲಿ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ 2.28 ಕೋಟಿ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು. ರೈತರಿಂದ ಬಾಕಿ ಇರುವ ಸಾಲ ವಸೂಲಿಗೆ ಕ್ರಮ ಕೈಗೊಳ್ಳಲು ಅನುವಾಗುವಂತೆ ಎರಡೂ ಜಿಲ್ಲೆಗಳ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳ ಸಮಾವೇಶವನ್ನು ಜೂ.7 ರಂದು ನಗರದ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಸತ್ಯನಾರಾಯಣಮಹೇಶ್, ಕೃಷ್ಣೇಗೌಡ ಇದ್ದರು.
ಸರ್ಕಾರಿ ನೌಕರರಿಂದ 17.24 ಲಕ್ಷ ವಸೂಲಿ
ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ನೌಕರರು 1.80 ಕೋಟಿ ಅವ್ಯವಹಾರ ನಡೆಸಿದ್ದು, ಹೊಸ ಆಡಳಿತ ಮಂಡಳಿ ಬಂದ ನಂತರ 17.24 ಲಕ್ಷ ವಸೂಲಿ ಮಾಡಲಾಗಿದೆ. ಅಲ್ಲದೆ, ಬ್ಯಾಂಕಿಗೆ 1.65 ಕೋಟಿ ಷೇರು ಬಂಡವಾಳ ಸಂಗ್ರಹಿಸಲಾಗಿದೆ. ಪ್ರಸ್ತತ ಬ್ಯಾಂಕ್ 16 ಕೋಟಿ ನಷ್ಟದಲ್ಲಿದೆ. ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ 34 ಕೋಟಿ ಬಂದರೆ ಪರಿಸ್ಥಿತಿ ಸುಧಾರಿಸಲಿದೆ ಎಂದು ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ತಿಳಿಸಿದರು.