ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

20 ನಿಮಿಷ 20 ಸುದ್ದಿ

Srinivasa Murthy VN
Updated On : 1 Jun 2014, 12:02 pm

ಕೋಲಾರ: ಜಿಲ್ಲಾಧಿಕಾರಿ ಡಿ.ಕೆ. ರವಿ ಅವರನ್ನು ವರ್ಗಾವಣೆ ಮಾಡುವುದಕ್ಕೆ ತಾವು ಅವಕಾಶ ನೀಡುವುದಿಲ್ಲವೆಂದು ಸಂಸದ ಕೆ.ಎಚ್. ಮುನಿಯಪ್ಪ ತಿಳಿಸಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿ ಡಿ.ಕೆ. ರವಿ ಅವರ ವರ್ಗಾವಣೆಗೆ ಕೆಲವರು ಲಾಬಿ ಮಾಡುತ್ತಿದ್ದಾರೆಂಬ ವದಂತಿ ಹರಡಿದೆ ಎಂದು ಪತ್ರಕರ್ತರು ತಿಳಿಸಿದಾಗ, ಯಾವುದೇ ಕಾರಣಕ್ಕೂ ರವಿ ಅವರನ್ನು ಇಲ್ಲಿಂದ ಎತ್ತಗಂಡಿ ಮಾಡಿಸುವುದಿಲ್ಲ, ದಕ್ಷ ಯುವ ಅಧಿಕಾರಿ ಆಗಿರುವ ರವಿ ಅವರ ಮೂಲಕ ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡಿಸುವ ಇರಾದೆ ವ್ಯಕ್ತಪಡಿಸಿದರು.
ಜೂ.11ರನಂತರ ಕ್ಷೇತ್ರ ಪ್ರವಾಸ: ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೂ.11ರ ನಂತರ ಪ್ರವಾಸ ಕೈಗೊಂಡು ಮತದಾರರಿಗೆ ಹಾಗೂ ಚುನಾವಣೆಯಲ್ಲಿ ಕೆಲಸ ಮಾಡಿದ ಕಾಂಗ್ರೆಸ್ ಮುಖಂಡರಿಗೆ,ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಂಸದ ಕೆ.ಎಚ್. ಮುನಿಯಪ್ಪ ತಿಳಿಸಿದರು.

ಕಾಲೇಜು ವಿದ್ಯಾರ್ಥಿಗಳಿಗೂ ಇನ್ನು ಮುಂದೆ ಬಿಸಿಯೂಟ
ಬಂಗಾರಪೇಟೆ: ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕೆ.ಸಿ.ರೆಡ್ಡಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೂ ಇನ್ನು ಮುಂದೆ ಮಧ್ಯಾಹ್ನದ ಬಿಸಿಯೂಟ ಭಾಗ್ಯ ಕಲ್ಪಿಸಲು ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧರಿಸಿದೆ. ಶನಿವಾರ ಕಾಲೇಜಿನಲ್ಲಿ ಶಾಸಕ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ಕಾಲೇಜಿನಲ್ಲಿ ಗ್ರಾಮೀಣ ಭಾಗದವರೇ ಹೆಚ್ಚಾಗಿದ್ದು, ಅವರಿಗೆ ಮೂಲ ಸೌಲಭ್ಯಗಳ ಜೊತೆಗೆ, ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ಸಲಕ ಅನುಕೂಲ ಕಲ್ಪಿಸಲು  ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಈಗಾಗಲೇ ಕೆ.ಸಿ.ರೆಡ್ಡಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿಗೆ ಸರ್ಕಾರ ಒಂದು ಕೋಟಿ ಅನುದಾನ ಮಂಜೂರು ಮಾಡಿದೆ. ಈ ಹಣದಲ್ಲಿ ಕೊಠಡಿಗಳು ಸೇರಿದಂತೆ ಅಗತ್ಯ ಸೌಲಭ್ಯ ಪೂರೈಸಲಾಗುವುದು. ಕಾಲೇಜು ಮುಂಭಾಗದಲ್ಲಿ 50ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣ  ನಿರ್ಮಾಣ ಮಾಡಲಾಗುವುದು ಎಂದು ಶಾಸಕ ನಾರಾಯಣಸ್ವಾಮಿ ತಿಳಿಸಿದರು. ಬಿಸಿಯೂಟ ಯೋಜನೆಗೆ ಶಾಸಕರು 1ಲಕ್ಷ ದೇಣಿಗೆ ನೀಡುವುದಾಗಿ ಪ್ರಕಟಿಸಿದರು. ನಂತರ ಸಭೆಯಲ್ಲಿದ್ದವರೂ ತಮ್ಮ ದೇಣಿಗೆ ಘೋಷಿಸಿದರು.

'ಉತ್ತಮ ಕೆಲಸ ಮಾಡಿದವರ ನೆನಪು ಎಂದಿಗೂ ಶಾಶ್ವತ'
ಬಂಗಾರಪೇಟೆ: ಜೀವನದಲ್ಲಿ ನಾವು ಮಾಡುವ ಉತ್ತಮ ಸೇವೆ ಶಾಶ್ವತವಾಗಿ ನಿಲ್ಲತ್ತದೆ ಆದ್ದರಿಂದ ಪ್ರತಿಯೊಬ್ಬರು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಅವರ ಹೆಸರು ಶಾಶ್ವತವಾಗಿರುವಂತ ಸಾಧನೆ ಮಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಯರಾಜ್ ಹೇಳಿದರು. ಅವರು ಪಟ್ಟಣದ ದೇಶಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮತ್ತು ಇಂದು ನಿವೃತ್ತಿಯಾದ ದೈಹಿಕ ಶಿಕ್ಷಕ ವಿ.ಪ್ರಸಾದ್ ಅವರನ್ನು ಸನ್ಮಾನಿಸಿ ಮಾತನಾಡಿ, ನಿವೃತ್ತಿ ಜೀವನದಲ್ಲಿ ಶಾಂತಿ ನೆಮ್ಮದಿ ಸಿಗಲಿ ಎಂದು ಹಾರೈಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ವೆಂಟಮುನಿಯಪ್ಪ, ಕೆಜಿಎಫ್ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಅಪ್ಪಯ್ಯಗೌಡ, ಬಂಗಾರಪೇಟೆ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣೇಗೌಡ, ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್.ಶ್ರೀನಿವಾಸನ್, ಮುಖ್ಯ ಶಿಕ್ಷಕಿ ರಾಣಿಯಮ್ಮ ಮತ್ತಿತರರು ಮಾತನಾಡಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.  ಶಿಕ್ಷಣ ಸಂಯೋಜಕ ಶ್ರೀರಾಮಯ್ಯ, ಐಇಆರ್‌ಟಿ ಬಂಗವಾದಿ ನಾರಾಯಣಪ್ಪ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ದೈಹಿಕ ಶಿಕ್ಷಣಾಧಿಕಾರಿ ಮದಿ ಅಳಗನ್, ರವಿ ಮತ್ತಿತರರು ಉಪಸ್ಥಿತರಿದ್ದರು.

ಬಹುಮಾನ ವಿತರಣೆ
ಚಿಂತಾಮಣಿ ತಾಲೂಕಿನ ಮಾಡಿಕೆರೆ ಶಾಲೆಯಲ್ಲಿ ನಡೆದ ಬೇಸಿಗೆ ಶಿಬಿರ ಸಮಾರೋಪದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಸತ್ಯಭಾಮಾ ಕೃಷ್ಣಭಾಗ್ಯ ಜಲ ನಿಗಮಕ್ಕೆ ವರ್ಗ
ಚಿಕ್ಕಬಳ್ಳಾಪುರ: ಇಲ್ಲಿನ ಅಪರ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಬೆಂಗಳೂರಿನ ನೀರಾವರಿ ಇಲಾಖೆಯ ಕೃಷ್ಣಭಾಗ್ಯ ಜಲ ನಿಗಮಕ್ಕೆ ವರ್ಗಾವಣೆಯಾಗಿದ್ದಾರೆ. 2012ರ ನವೆಂಬರ್ ತಿಂಗಳಲ್ಲಿ ಸತ್ಯಭಾಮಾ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.ಇದೀಗ ನೀರಾವರಿ ಇಲಾಖೆಯ ಕೃಷ್ಣಭಾಗ್ಯ ಜಲ ನಿಗಮದ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ. ಸ್ಥಳೀಯ ಸಂಸ್ಥೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಮೆಚ್ಚುಗೆ ಪಾತ್ರರಾಗಿದ್ದ ಅವರನ್ನು ಜಿಲ್ಲಾಡಳಿತದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಗಳಿಸಿದಂತೆ ಮುಂದೆಯೂ ಉತ್ತಮವಾಗಿ ಕಾರ್ಯ ನಿರ್ವಹಿಸಲಿ, ತ್ವರಿತವಾಗಿ ಅವರಿಗೆ ಮುಂಬಡ್ತಿ ಸಿಗಲಿ ಎಂದು ಜಿಲ್ಲೆಯ ಅಧಿಕಾರಿಗಳು ಆಶಿಸಿದರು. ಇದೇ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ತಮಗೆ ಸಹಕಾರ ನೀಡಿದ ಅಧಿಕಾರಿಗಳ ಬಗ್ಗೆ ಸತ್ಯಭಾಮಾ ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಲ ಕಾರ್ಮಿಕ ವಿರೋಧಿ ದಿನಾಚರಣೆ 12 ರಂದು
ಚಿಕ್ಕಬಳ್ಳಾಪುರ: ನಗರದ ಅಂಬೇಡ್ಕರ್ ಭವನದಲ್ಲಿ ಜೂ.12ರಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ನ್ಯಾಯಾಲಯ, ಪೊಲೀಸ್ ಇಲಾಖೆ ಆಯೋಜಿಸಿರುವ ಕಾರ್ಯಕ್ರಮದ ಪ್ರಯುಕ್ತ ಜೂ.12 ರಂದು ಬೆಳಿಗ್ಗೆ 9 ಗಂಟೆಗೆ ನಗರದಲ್ಲಿನ ನಂದಿ ರಂಗಮಂದಿರದಿಂದ ಅಂಬೇಡ್ಕರ್ ಭವನದವರೆಗೂ ಜಾಥಾ ನಡೆಯಲಿದೆ. ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳ ಮುಖಂಡರು ಸೇರಿದಂತೆ ಹಲವರು ಜಾಥಾದಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಲಿದ್ದಾರೆ. ನಂತರ ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಎಸ್. ಬೆಳ್ಳುಂಕೆ, ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಜಿಲ್ಲಾ ರಕ್ಷಣಾಧಿಕಾರಿ ದಿವ್ಯಾ ಗೋಪಿನಾಥ್ ಭಾಗವಹಿಸಲಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಕ್ಷೀರ ದಿನಾಚರಣೆ
ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜೂ.2 ರಂದು ಬೆಳಿಗ್ಗೆ 8 ಗಂಟೆಗೆ ರೋಗಿಗಳಿಗೆ ಮತ್ತು ಇತರರಿಗೆ ಹಾಲಿನ ಪೌಷ್ಟಿಕತೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಾಗೂ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ನಂದಿನಿ ಗುಡ್‌ಲೈಫ್ ಹಾಲು ವಿತರಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ವಿಶ್ವ ಕ್ಷೀರ ದಿನಾಚರಣೆ ಅಂಗವಾಗಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಮಂಜುಳಾ, ಕೋ-ಚಿಮುಲ್ ನಿರ್ದೇಶಕ ಕೆ.ವಿ. ನಾಗರಾಜು ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ.
ಅರ್ಜಿ ಆಹ್ವಾನ: ಚಿಕ್ಕಬಳ್ಳಾಪುರ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯ ವತಿಯಿಂದ 2014-15ನೇ ಸಾಲಿಗೆ ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ತಾಪಂ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೂಲಕ ಜೂ.30ರೊಳಗೆ ಅರ್ಜಿ ಪಡೆದುಕೊಂಡು ಭರ್ತಿ ಮಾಡಿ ಸಲ್ಲಿಸಬೇಕಾಗಿದೆ.

ತಟ್ಟೆ,ಲೋಟ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ಅಡಿಕೆ ತಟ್ಟೆ ಹಾಗೂ ಕಾಗದದಲ್ಲಿ ತಟ್ಟೆ ಹಾಗೂ ಲೋಟಗಳನ್ನು ತಯಾರಿಸುವ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರು ರಾಜಾಜಿನಗರದ ಕೈಗಾರಿಕಾ ಪ್ರದೇಶದಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಜೂ.23 ರಿಂದ ಜೂ.27 ರವರೆಗೆ ನಡೆಯಲಿರುವ ತರಬೇತಿ ಅವಧಿಯಲ್ಲಿ ಕಚ್ಛಾ ಸಾಮಗ್ರಿಗಳ ಲಭ್ಯತೆ ಅವುಗಳ ತಯಾರಿಕೆ ಮತ್ತು ಮಾರಾಟದ ಬಗ್ಗೆ ಸೂಕ್ತ ತಿಳಿವಳಿಕೆ ನೀಡಲಾಗುತ್ತದೆ.ತರಬೇತಿ ಪಡೆಯಲು ನಿರ್ದೇಶಕರು, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮ ಅಭಿವೃದ್ಧಿ ಸಂಸ್ಥೆ,ಭಾರತ ಸರ್ಕಾರ, ರಾಜಾಜಿನಗರ ಕೈಗಾರಿಕಾ ಪ್ರದೇಶ, ಬೆಂಗಳೂರು-560010 ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ದೂ.ಸಂ-080-23151581-3 ರಲ್ಲಿ ಅಥವಾ ಮೊ.ಸಂ-8971828533 ಅನ್ನು ಸಂಪರ್ಕಿಸಬಹುದೆಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಸಂಸ್ಥೆಯ ಸಹಾಯಕ ನಿರ್ದೇಶಕ ಕೆ.ಕಂದಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಕ್ಷಿಣೆ ಕಿರುಕುಳ: ಪತಿ ಮನೆ ವಿರುದ್ಧ ದೂರು
ಬಂಗಾರಪೇಟೆ: ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಗಂಡ, ಅತ್ತೆ ಮತ್ತು ಮಾವನ ವಿರುದ್ಧ ಗೃಹಿಣಿಯೊಬ್ಬರು ಪೊಲೀಸರಿಗೆ ದೂರು ನೀಡಿರುವ ಪ್ರಕರಣ ವರದಿಯಾಗಿದೆ. ಅನ್ನಸಾಗರ ಗ್ರಾಮದ ತೇಜಸ್ವಿನಿ ಎಂಬಾಕೆ ಒಂದುವರೆ ವರ್ಷದ ಹಿಂದೆ ಮುರಳಿ ಮೋಹನ್ ಎಂಬಾತನನ್ನು ವಿವಾಹವಾಗಿದ್ದರು. ಮದುವೆ ವೇಳೆ ಒಂದೂವರೆ ಲಕ್ಷ ರು. ಹಣ ಮತ್ತು ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ವರ್ಷದ ನಂತರ ಪತಿ ಸೇರಿದಂತೆ ಗಂಡನ ಮನೆಯವರು ಪ್ರತಿದಿನ ಮತ್ತೆ ರು. 10ಲಕ್ಷ ತುರುವಂತೆ ಪೀಡುಸುತ್ತಿದ್ದರು ಎನ್ನಲಾಗಿದೆ. ಕಳೆದ 7 ದಿನಗಳ ಹಿಂದೆ ಮತ್ತೆ ವರದಕ್ಷಿಣೆ ಹಣಕ್ಕಾಗಿ ಮನೆಯಲ್ಲಿ ಜಗಳವಾಗಿ ಪತ್ನಿ ತೇಜಸ್ವಿನಿಯನ್ನು ಮನೆಯಿಂದ ಹೊರಗಟ್ಟಿದ್ದರು. ನಂತರ ತೇಜಸ್ವಿನಿ ತವರು ಮನೆಯಲ್ಲಿ ವಾಸವಾಗಿದ್ದು, ಶುಕ್ರವಾರ ಗಂಡ ಮತ್ತು ಆತನ ಪೋಷಕರು ಹಣ ಸಮೇತ ಮನೆಗೆ ವಾಪಸ್ ಬರಬೇಕು. ಇಲ್ಲದಿದ್ದರೆ,  ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಂಬಾಕು ಸೇವನೆ ನಿಷೇಧ ಅರಿವು  ಕಾರ್ಯಾಗಾರ
ಮಾಲೂರಿನ ಮಾಸ್ತಿ ವಂಕಟೇಶ್ ಅಯ್ಯಂಗಾರ್ ರಂಗಮಂದಿರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ತಂಬಾಕು ಸೇವನೆ ನಿಷೇಧ ಅರಿವು  ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಇನ್ಸ್‌ಪೆಕ್ಟರ್ ಶಿವಕುಮಾರ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ ಮತ್ತಿತರರಿದ್ದರು.

ತುಂಬಾಕು ಸೇವನೆ; ತರುವುದು ಮನೋವೇದನೆ: ಶಿವಕುಮಾರ್
ಮಾಲೂರು: ತಂಬಾಕು ಸೇವನೆಯಲ್ಲಿ ಯಾವುದೇ ಉತ್ತಮ ಅಂಶ ಇಲ್ಲದಿರುವುದರಿಂದ ಅವುಗಳಿಂದ ದೂರವಿರುವುದೇ ಕ್ಷೇಮ ಎಂದು ಇನ್ಸ್‌ಪೆಕ್ಟರ್ ಶಿವಕುಮಾರ್ ಕಿವಿಮಾತು ಹೇಳಿದರು. ಇಲ್ಲಿನ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ 'ತಂಬಾಕು ಸೇವನೆ ನಿಷೇಧ ಅರಿವು' ಕಾರ್ಯಕ್ರಮದಲ್ಲಿ ಮಾತನಾಡಿದರು.  ರಾಜ್ಯ ಸರ್ಕಾರವು ಜನತೆ ಆರೋಗ್ಯ ದೃಷ್ಟಿಯಿಂದ  ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧಿಸಿದೆ. ಆದರೂ ಜನರಲ್ಲಿ ತುಂಬಾಕು ಬಗ್ಗೆ ಅರಿವು ಬಾರದಿರುವುದು ಖೇದಕರ ಎಂದರು. ಪುರಸಭೆ ಸದಸ್ಯ ವೇಮನ ಮಾತನಾಡಿ, ಹದಿನೆಂಟು ವರ್ಷದೊಳಗಿನ ಮಕ್ಕಳು ತಂಬಾಕು ಸೇವನೆ ಮಾಡುವುದು ಕಾನೂನು ನಿಷೇಧಿಸಿದೆ. ಆದರೆ ಇತ್ತೀಚಿನ ಮಕ್ಕಳ ತಂಬಾಕು ಉತ್ಪಾನಗಳ ಸೇವನೆ ಹೆಚ್ಚಾಗುತ್ತಿದೆ. ಈ ಬಗ್ಗೆ ಪೋಷಕರು ಎಚ್ಚರವಹಿಸಬೇಕಾಗಿದೆ ಎಂದರು. ಯೋಜನೆಯ ಸಂಯೋಜನಾಧಿಕಾರಿ ಅಚ್ಯುತ, ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಎಸ್‌ಐ ದಯಾನಂದ್ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಶ್ರೀವಲ್ಲಿ, ಬಿಜೆಪಿ ಮುಖಂಡ ವೆಂಕಟೇಶ್, ನಂಜುಂಡಪ್ಪ ಇದ್ದರು.

ಸಾಕ್ಷರ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ
ಮಾಲೂರು: ತಾಲೂಕಿನ ಚಿಕ್ಕಕುಂತೂರು ಗ್ರಾಮ ಪಂಚಾಯ್ತಿಯಲ್ಲಿ ಲೋಕಶಿಕ್ಷಣ ಸಾಕ್ಷರ ಭಾರತ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಂದೀಪ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಗುರಿ ಮುಟ್ಟಬೇಕಾದರೆ ಛಲದ ಜತೆಯಲ್ಲಿ ತರಬೇತಿ ಪಡೆಯುವುದು ಮುಖ್ಯ. ಈ ನಿಟ್ಟಿನಲ್ಲಿ ಅನಕ್ಷರಸ್ಥರಿಗೆ ಅಕ್ಷರ ಅಭ್ಯಾಸ ಮಾಡುವ ಮೂಲಕ ನಮ ಸಮಾಜದ ನಿರ್ಮಾಣ ಮಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು. ರಾಜ್ಯ ಸಂಪನ್ಮೂಲ ವ್ಯಕ್ತಿ ಎಂ.ಗೋಪಾಲಪ್ಪ ಮಾತನಾಡಿ ಸ್ವಯಂ ಸೇವಕರು ತಮ್ಮ ಕರ್ತವ್ಯವನ್ನು ಸೇವಾ ಮನೋಭಾವದಿಂದ ಪೂರೈಸಿದಾಗ ಯೋಜನೆಯ ಉದ್ದೇಶ ಈಡೇರುತ್ತದೆ. ಈ ನಿಟ್ಟಿನಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡು ಸಂಪೂರ್ಣ ಸಾಕ್ಷರ ಗ್ರಾಮವನ್ನಾಗಿ ಮಾಡಬೇಕು ಎಂದರು. ನಿವೃತ್ತ ಮುಖ್ಯೋಪಾಧ್ಯಯ  ಎಚ್.ಆರ್.ಕೃಷೇಗೌಡ, ಶಿಕ್ಷಕಿಯರಾದ ಎಸ್.ಸುಜಾತ,ಪಾರ್ವತಮ್ಮ, ಮುಖ್ಯ ತರಬೇತಿ ಶಿಕ್ಷಕರಾದ ವೆಂಕಟರಮಣ, ಎಚ್.ಕೆ.ಮಂಜುನಾಥ್, ಪ್ರೇರಕರಾದ ನಾಗಮ್ಮ, ಶ್ರೀನಿವಾಸ್, ಎಂ.ಗೋಪಾಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೈವಾರದಲ್ಲಿ ತಾತಯ್ಯ ಆರಾಧನಾ ಮಹೋತ್ಸವ
ಚಿಂತಾಮಣಿ ತಾಲೂಕಿನ ಇತಿಹಾಸ ಪ್ರಸಿದ್ಧ ಕೈವಾರದಲ್ಲಿ ಸದ್ಗುರು ಕಾಲಜ್ಞಾನಿ ಯೋಗಿನಾರೇಯಣ ತಾತಯ್ಯನವರ 179ನೇ ಜೀವ ಸಮಾಧಿ ಪ್ರವೇಶದ ಆರಾಧನಾ ಮಹೋತ್ಸವ ಆಚರಿಸಲಾಯಿತು.

ಯೋಗಿನಾರೇಯಣ ತಾತಯ್ಯ ಆರಾಧನಾ ಮಹೋತ್ಸವ
ಚಿಂತಾಮಣಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕೈವಾರದಲ್ಲಿ ಸದ್ಗುರು ಕಾಲಜ್ಞಾನಿ ಯೋಗಿನಾರೇಯಣ ತಾತಯ್ಯನವರ 179ನೇ ಜೀವಸಮಾಧಿ ಪ್ರವೇಶದ ಆರಾಧನಾ ಮಹೋತ್ಸವ ಅಂಗವಾಗಿ ಭಕ್ತರು, ಸಹಸ್ರಾರು ಸಾಧು ಸಂತರು ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ನಂತರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಿರುಪತಿ ಧರ್ಮ ಪ್ರಚಾರ ಪರಿಷತ್ ವೃತ್ತಿ ಕಾರ್ಯದರ್ಶಿ ಡಾ.ಸಮುದ್ರಾಲು ಲಕ್ಷ್ಮಯ್ಯ ಮಾತನಾಡುತ್ತಾ ಸಮಾಜದ ಉದ್ಧಾರ ಮತ್ತು ಸುಧಾರಣೆಗೆ ಹುಟ್ಟಿದವರು ತಾತಯ್ಯನವರು ಅವರ ಬದುಕಿನಲ್ಲಿ ನಡೆಸಿದ ಸಾಮಾಜಿಕ ಸಂಘರ್ಷಗಳನ್ನು ಕೀರ್ತನೆಗಳ ರೂಪದಲ್ಲಿ ಕಟ್ಟಿಕೊಟ್ಟು ಹೋಗಿದ್ದಾರೆ. ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆ ಕೀರ್ತನೆಗಳನ್ನು ಶ್ರೇಷ್ಠ ರೂಪದಲ್ಲಿ ಗುರು ಕಾರ್ಯಗಳನ್ನು ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ದೊರೆಯುತ್ತದೆ ಎಂದರು. ಮಠದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಂ ಮಾತನಾಡಿದರು. ಸಾವಿರಾರು ಸಾಧು-ಸಂತರು ಕಾಷಾಯ ವಸ್ತ್ರಗಳನ್ನು ವಿತರಿಸಲಾಯಿತು. ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಬಿ.ಎನ್.ಕೃಷ್ಣಯ್ಯ ಶೆಟ್ಟಿ,  ಮಾಜಿ ಸಚಿವ ಚೌಡರೆಡ್ಡಿ, ಸಂಗೀತ ಅಕಾಡೆಮಿ ಸದಸ್ಯ ಬಾಲಕೃಷ್ಣ ಭಾಗವತರ್ ಮತ್ತಿತರರು ಉಪಸ್ಥಿತರಿದ್ದರು.

ನಗ ನಾಣ್ಯ ದೋಚಿ ಪರಾರಿ
ಚಿಂತಾಮಣಿ: ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಯೋಗಕ್ಷೇವು ಸಮಾಚಾರ ವಿಚಾರಿಸಲು ಬಂದ ಸಂಬಂಧಿಕನೊಬ್ಬ ಮನೆಯಲ್ಲಿ ನಗ ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಚೌಡರೆಡ್ಡಿಪಾಳ್ಯ 2ನೇ ಕ್ರಾಸಿನ ನಿವಾಸಿ ರುಬಿಯಾ ಸುಲ್ತಾನ ಬಿನ್‌ಬಾಬು ಜಪ್ರುಲ್ಲಾ ಎಂಬುವರ ಮನೆಯ ಯಜಮಾನನ ಆರೋಗ್ಯ ಯೋಗಕ್ಷೇವು ವಿಚಾರಿಸಲು ಬಂದಿದ್ದ ಮೂಲತಃ ತಮಿಳುನಾಡಿದ ಆಂಬೂರಿನ ನಿವಾಸಿ ಎಕ್ಬಾಲ್‌ಪಾಷ ಎಂಬಾತನು ಕಳೆದ 15 ದಿನಗಳಿಂದ ಮನೆಯಲ್ಲಿದ್ದು, ಇಂದು ಬೆಳಿಗ್ಗೆ ರುಬಿಯಾ ಸುಲ್ತಾನ ಕತ್ತಿನಲ್ಲಿದ್ದ 11 ಗ್ರಾಂನ ಕತ್ತಿನ ಚೈನು ಮತ್ತು 20 ಸಾವಿರ ರುಪಾಯಿ ನಗದು ಹಣವನ್ನು ಬೀರುವಿನಲ್ಲಿದ್ದ ನಗ ನಾಣ್ಯವನ್ನು ರಾತ್ರಿ ಮಾಲು ಸಮೇತ ಪರಾರಿಯಾಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಸ್ ಡಿಕ್ಕಿ; ವ್ಯಕ್ತಿ ಸಾವು: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೈವಾರ ಕ್ರಾಸ್ ಬಳಿ ವಿಜಯಲಕ್ಷ್ಮಿ ಖಾಸಗಿ ಬಸ್ ಡಿಕ್ಕಿಯಾಗಿ ಪಾದಾಚಾರಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರು-ಚಿಂತಾಮಣಿ ಮಾರ್ಗದ ಕಡೆಯಿಂದ ಅತಿವೇಗದಿಂದ ಬಂದ ಬಸ್ ಗುದ್ದಿ, ರಸ್ತೆ ಬದಿಯಲ್ಲಿ ನಿಂತಿದ್ದ ಶೆಟ್ಟಿನಾಯಕನಹಳ್ಳಿ ಗ್ರಾಮದ ರಾಮಚಂದ್ರಪ್ಪ(35) ಸಾವನ್ನಪ್ಪಿದ್ದಾನೆ. ಬಸ್ಸನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿಕೊಳ್ಳಲಾಗಿದೆ.

ರೇಷ್ಮೆಇಲಾಖೆ ಬಂದ್ ಪ್ರಸ್ತಾಪಕ್ಕೆ ವಿರೋಧ
ಕೋಲಾರ: ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆ ಜೊತೆಗೆ, ವಿಲೀನ ಮಾಡುವ ಪ್ರಸ್ತಾಪ ಕೈಬಿಡಬೇಕೆಂದು ಲೋಕಸಭಾ ಚುನಾವಣೆಯಲ್ಲಿ ಪರಾಜಿತ ಜೆಡಿಎಸ್ ಅಭ್ಯರ್ಥಿ ಕೆ.ಕೇಶವ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,  ರಾಜ್ಯ ಸರ್ಕಾರ ವಿದೇಶಿ ರೇಷ್ಮೆ ಆಮದುರಾರರ ಒತ್ತಡಕ್ಕೆ ಮಣಿದು ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ಮಿಲಿನಕ್ಕೆ ಮುಂದಾಗಿದೆ, ರೇಷ್ಮೆ ಬೆಳೆಗಾರರ ಹಿತಕ್ಕಾಗಿ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಸಾವಿರಾರು ರೈತರು ಮತ್ತು ರೀಲರ್‌ಗಳ ಕುಟುಂಬಗಳು ಅವಲಂಬಿಸಿರುವ ರೇಷ್ಮೆ ಉದ್ದಿಮೆಯನ್ನು ನಾಶ ಮಾಡುವ ಹುನ್ನಾರವು ರಾಜ್ಯ ಸರ್ಕಾರದ ಈ ನಿರ್ಧಾರದ ಹಿಂದಿದೆ. ರೇಷ್ಮೆ ಇಲಾಖೆಯನ್ನು ನಾನಾ ಕಾರಣಗಳಿಗಾಗಿ ಕೃಷಿ ಇಲಾಖೆ ಜೊತೆಗೆ ವಿಲೀನ ಮಾಡುವ ಉದ್ದೇಶಿತ ಪ್ರಸ್ತಾಪವನ್ನು ರಾಜ್ಯದ ಕಾಂಗ್ರೆಸ್ಸ್‌ರ್ಕಾರ ಇದೇ ಮೇ.17 ರಂದು ಹೊರಡಿಸಿದ್ದು ಇದು ರೈತರ ಪಾಲಿಗೆ ಮರಣ ಶಾಸನವಾಗಲಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ರೈತರ ಬೇಡಿಕೆ ಈಡೇರಿಕೆಗಾಗಿ ಜೂ. 8ರಂದು ಮಾರುಕಟ್ಟೆ ಬಂದ್
ಚಿಂತಾಮಣಿ: ಚಿಂತಾಮಣಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪ್ರತಿಭಟಿಸಿ ಜೂ. 8 ರಂದು ಎಪಿಎಂಸಿ ಮಾರುಕಟ್ಟೆಯನ್ನು ಬಂದ್‌ಗೆ ಕರೆ ನೀಡಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಜಿ.ರಘುನಾಥರೆಡ್ಡಿ ತಿಳಿಸಿದ್ದಾರೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಮೂಲಭೂತ ಸಮಸ್ಯೆಗಳ ಬಗ್ಗೆ 'ಕನ್ನಡಪ್ರಭ'ದಲ್ಲಿ ಮೇ 30 ರಂದು ಪ್ರಕಟಗೊಂಡ ಸುದ್ದಿಗೆ ಸ್ಪಂದಿಸಿದ ರೈತಸಂಘ ಹಾಗೂ ಹಸಿರುಸೇನೆಯ ನೂರಾರು ರೈತರು ಸೇರಿ ಜೂ.8 ರಂದು ಮಾರುಕಟ್ಟೆ ಸಂಪೂರ್ಣ ವಹಿವಾಟನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದ್ದಾರೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಗೊಬ್ಬುನಾತ ಬೀರುತ್ತಿದ್ದರೂ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೇರಿದಂತೆ 16 ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜೂ.8 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರಿಗೆ ಕೃಷಿ ಮಾರುಕಟ್ಟೆ ಬಂದ್‌ಗೆ ಕರೆ ನೀಡಿರುವುದಾಗಿ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಜಿ.ರಘುನಾಥರೆಡ್ಡಿ ಎಲ್ಲಾ ರೈತರು ಹಾಗೂ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.

ಕಿಡ್ನಿ ವೈಫಲ್ಯ: ನೆರವಿಗೆ ಬಡರೋಗಿ ಮನವಿ
ಚಿಂತಾಮಣಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡ ರೋಗಿ ಸಹಾಯ ಹಸ್ತಕ್ಕೆ ನೆರವಾಗಲು ಬಡರೋಗಿ ಕೋರಿದ್ದಾರೆ. ನಗರದ ಟ್ಯಾಂಕ್‌ಬಾಂಡ್ ರಸ್ತೆ ನಿವಾಸಿ ಜಯಸುಧಾ(33) ಕೋಂ ಜಿ.ಶಂಕರ ಇವರಿಗೆ ಎಡಭಾಗದ ಮೂತ್ರಪಿಂಡವು ವೈಫಲ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಶಿವಾಜಿನಗರದ ಕ್ಯೂನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಸುಮಾರು ರು. 2 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಇದಕ್ಕಾಗಿ ಜೂನ್ 20 ರಂದು ಶಸ್ತ್ರ ಚಿಕಿತ್ಸೆ ಮಾಡಲು ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದು ಜಯಸುಧಾ ಪತಿ ಜಿ.ಶಂಕರ್ ಮಾಧ್ಯಮ ಮುಖಾಂತರ ನೆರವು ಕೋರಿದ್ದಾರೆ. ತೀರ ಬಡವರಾಗಿರುವುದರಿಂದ ರೋಗಿಯ ಚಿಕಿತ್ಸೆಗಾಗಿ ನೆರವು ನೀಡಲು ಚಿಂತಾಮಣಿಯ ಕರ್ಣಾಟಕ ಬ್ಯಾಂಕ್ ಶಾಖೆ ಸಂಖ್ಯೆ ನಂ- 1422500101272601 ಖಾತೆಗೆ ಸಹಾಯ ಹಸ್ತ ನೀಡಲು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಯಸುಧ ಕೋಂ ಜಿ.ಶಂಕರ ಮೊ.7259477597 ಸಂಪರ್ಕಿಸಲು ಮನವಿ ಮಾಡಿದ್ದಾರೆ.

ಬೇಸಿಗೆ ಶಿಬಿರ ಸಮಾರೋಪ
ಚಿಂತಾಮಣಿ: ಪ್ರತಿಯೊಂದು ಮಗುವಿನಲ್ಲಿ ಒಂದೊಂದು ಪ್ರತಿಭೆಯಿರುತ್ತದೆ ಆ ಪ್ರತಿಭೆಯನ್ನು ವ್ಯಕ್ತಪಡಿಸಲು ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಒಂದು ವೇದಿಕೆ ಅವಶ್ಯಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಂಗಯ್ಯ ತಿಳಿಸಿದರು. ಚಿಂತಾಮಣಿ ತಾಲೂಕಿನ ಮಾಡಿಕೆರೆ ಶಾಲೆಯಲ್ಲಿ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಮತ್ತು ಚಿಂತಾಮಣಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಅಶೋಕ್‌ಕುಮಾರ್ ಮಾತನಾಡಿ, ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುತ್ತಿದ್ದು, ಇದರಿಂದ ಕೈ ಕಸುಬುಗಳು ಕಣ್ಮರೆಯಾಗುವುದಲ್ಲದೆ, ಕೈ ಕಸುಬುಗಳನ್ನು ನಂಬಿ ಬದುಕುವವರ ಸ್ಥಿತಿ ಡೋಲಾಯಮಾನವಾಗಿದೆ ಎಂದರು. ಕಲಾವಿದ ಮುನಿರೆಡ್ಡಿ ಹಾಡುಗಳ ಮೂಲಕ ಎಲ್ಲರನ್ನೂ ರಂಜಿಸಿದರು. ಎಸಿಡಿಪಿಒ ನಾನಮ್ಮ ಶಿಬಿರದ ಮೇಲುಸ್ತುವಾರಿ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಜಯರಾಮರೆಡ್ಡಿ  ಅಧ್ಯಕ್ಷತೆ ವಹಿಸಿದ್ದರು.  ಶಿಬಿರದಲ್ಲಿ ಕಲಿತ ಯೋಗ, ಸಂಗೀತ, ಚಿತ್ರಕಲೆ, ಕರಕುಶಲ ವಸ್ತುಗಳ ಪ್ರದರ್ಶನ ಮಾಡಿದರು.  ಇದೇ ವೇಳೆ ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲ ಮಕ್ಕಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಶಿಬಿರದ ನಿರ್ವಹಣೆ ಮುಖ್ಯ ಶಿಕ್ಷಕಿ ಎಚ್.ಎನ್.ಜಯಲಕ್ಷ್ಮಮ್ಮ ಹಾಗೂ ಸಿಆರ್‌ಪಿ ನಾಗರಾಜ್ ಮತ್ತಿತರರು ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement