ಅಹವಾಲು ವಿಲೇವಾರಿಗೆ ಆದ್ಯತೆ
ಚಿಕ್ಕಬಳ್ಳಾಪುರ: ಜನರಿಂದ ಸ್ವೀಕಾರವಾಗುವ ಅಹವಾಲುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕೆಂದು ಶಾಸಕ ಕೆ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಿನ ನಂದಿಯ ಮುದ್ದೇನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ತರವಾದುದು. ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಅಧಿಕಾರಿಗಳು ಕೆಲಸ ಮಾಡಬೇಕು. ಜನರಲ್ಲಿ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅವರ ಸಮಸ್ಯೆಗಳನ್ನು ಆಲಿಸಬೇಕು. ಅನವಶ್ಯಕವಾಗಿ ಅಲೆದಾಡಿಸಿ ತೊಂದರೆ ಅನುಭವಿಸುವಂತೆ ಮಾಡದೆ ಪ್ರಾಮಾಣಿಕವಾಗಿ ಸ್ಪಂದಿಸಬೇಕೆಂದು ಸೂಚನೆ ನೀಡಿದರು.
ನೀರಿನ ಸಮಸ್ಯೆಗೆ ಆದ್ಯತೆ: ಪ್ರಸ್ತುತ ಕುಡಿಯುವ ನೀರು ಮತ್ತು ರಸ್ತೆ ಸರಿಪಡಿಸುವುದಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಹೆಚ್ಚಿಗೆ ಕೇಳಿ ಬರುತ್ತಿವೆ. ಕುಡಿಯುವ ನೀರಿನ ಪರಿಹಾರಕ್ಕಾಗಿ ಕೊಳವೆ ಬಾವಿಗಳನ್ನು ಆದಷ್ಟು ಕಡೆ ಕೊರೆಸಲಾಗುತ್ತಿದೆ. ಒಂದು ವೇಳೆ ಕೊಳವೆ ಬಾವಿಗಳು ವಿಫಲವಾದಾಗ ಟ್ಯಾಂಕರ್ಗಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ. ಹಣದ ಸಮಸ್ಯೆಯಂತೂ ಇಲ್ಲ. ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ದುರುಪಯೋಗವಾಗದಂತೆ ನೋಡಿಕೊಂಡು ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆಯಷ್ಟೆ ಎಂದ ಅವರು, ಮುದ್ದೇನಹಳ್ಳಿ ಸಮೀಪದ ಮೈಲಪ್ಪಹಳ್ಳಿ, ಬಟ್ಲಹಳ್ಳಿ, ಇಟಗಾನಹಳ್ಳಿ, ದಿನ್ನೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಹೆಚ್ಚಿಗೆ ಜಾರಿಗೆಗೆ ತರುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಲು ಸ್ವಯಂ ಪ್ರೇರಣೆಯಿಂದ ಜನರು ಮುಂದೆ ಬರಬೇಕು. ಇದಕ್ಕೆ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕೆಂದರು.
ಹದಗೆಟ್ಟ ರಸ್ತೆ, ಸಾರಿಗೆ, ನೀರಿನ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ಅಹವಾಲುಗಳನ್ನು ಸಲ್ಲಿಸಿದರು. ಸಂಧ್ಯಾ ಸುರಕ್ಷಾ, ಅಂಗವಿಕಲ ಕಲ್ಯಾಣಾನಿಧಿ, ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.
ತಾಲೂಕು ಪಂಚಾಯ್ತಿ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮುನಿತಾಯಮ್ಮ, ಉಪಾಧ್ಯಕ್ಷೆ ನಾರಾಯಣಮ್ಮ, ತಹಸೀಲ್ದಾರ್ ಸೇರಿದಂತೆ ಜಗದೀಶ್ ಮುಂತಾದವರು ಇದ್ದರು.