ಗುಂಪು ಘರ್ಷಣೆ: ಇಬ್ಬರಿಗೆ ಗಾಯ
ಕೆಜಿಎಫ್: ಬೋರ್‌ವೆಲ್‌ನಲ್ಲಿ ನೀರು ಹಿಡಿಯುವ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆ ದಾಖಲಾಗಿರುವ ಘಟನೆ ಆಂಡ್ರಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡ ಗಾಂಡ್ಲಹಳ್ಳಿ ಲಕ್ಷ್ಮಮ್ಮ ತಮ್ಮ ಜಮೀನಿನಲ್ಲಿರುವ ಬೋರ್‌ವೆಲ್‌ನಿಂದ ಸಾರ್ವಜನಿಕರಿಗೆ ನೀರು ಬಿಡುತ್ತಿದ್ದರು. ಆದರೆ ನಲ್ಲಗಟ್ಟೂರು ಗ್ರಾಮದ ಚಂದ್ರಪ್ಪ ಎಂಬುವರು ಸದರಿ ಜಮೀನು ತನಗೆ ಸೇರಿದ್ದು, ಎಂದು ಹೇಳಿಕೊಂಡು ಬೋರ್‌ವೆಲ್‌ಗೆ ಬೀಗ ಹಾಕಿದ್ದರು. ಈ ಹಿನ್ನಲೆಯಲ್ಲಿ ಲಕ್ಷ್ಮಮ್ಮ ಮತ್ತು ಚಂದ್ರಪ್ಪ ಗುಂಪಿನ ಮಧ್ಯೆ ಘರ್ಷಣೆ ಉಂಟಾಗಿದ್ದು ಲಕ್ಷ್ಮಮ್ಮ ಮತ್ತು ಸುರೇಶ್‌ಬಾಬು ಎಂಬುವರು ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ನೀರಿನ ವಿಷಯದಲ್ಲಿ ಜಗಳ ಮಾಡುವುದು ಸರಿಯಲ್ಲ ಎಂದು ಹೇಳಿ ಇಬ್ಬರ ನಡುವೆ ಮಾತುಕತೆ ನಡೆಸಿ ಸಮಾಧಾನ ಮಾಡಿದರು. ಆಂಡ್ರಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸ್ ಕ್ಯಾಂಟಿನ್ ಲೋಕಾರ್ಪಣೆ
ಕೆಜಿಎಫ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ನಿರ್ಮಿಸಿರುವ ಪೊಲೀಸ್ ಕ್ಯಾಂಟಿನ್ ಅನ್ನು ಕೇಂದ್ರ ವಲಯ ಐಜಿಪಿ ಸೈಯದ್ ಉಲ್ಫತ್ ಹುಸೇನ್ ಶನಿವಾರ ಉದ್ಘಾಟಿಸಿದರು. ಮಾರುಕಟ್ಟೆಗಿಂತ ಶೇ.10 ರಿಂದ 20 ವರವರೆಗೆ ರಿಯಾಯಿತಿ ದರದಲ್ಲಿ ಎಲ್ಲಾ ರೀತಿಯ ಗೃಹೋಪಯೋಗಿ ವಸ್ತುಗಳನ್ನು ಪಡೆಯಬಹುದಾಗಿದೆ ಎಂದು ಐಜಿಪಿ ಹೇಳಿದರು.
ಸದ್ಯಕ್ಕೆ ವ್ಯಾಟ್ ತೆರಿಗೆ ವಿಧಿಸುತ್ತಿರುವುದರಿಂದ ಮಿಲಿಟರಿ ಕ್ಯಾಂಟಿನ್‌ಗಿಂತ ಇಲ್ಲಿ ಸ್ವಲ್ಪ ಬೆಲೆ ಹೆಚ್ಚಾಗಿದೆ. ಆದರೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಪ್ರಸ್ತುತ ಕಾನ್ಸ್‌ಟೇಬಲ್ ಮತ್ತು ಹೆಡ್ ಕಾನ್ಸ್‌ಟೇಬಲ್ ಪ್ರತಿ ತಿಂಗಳು ಐದು ಸಾವಿರ, ಎಎಸ್‌ಐ ಯಿಂದ ಡಿವೈಎಸ್ಪಿ ವರೆಗೂ ಏಳೂವರೆ ಸಾವಿರ, ಮತ್ತು ಎಸ್ಪಿ ದರ್ಜೆಗಿಂತ ಮೇಲ್ಪಟ್ಟವರು 10 ಸಾವಿರ ವರೆಗೂ ವಸ್ತುಗಳನ್ನು ಖರೀದಿಸಬಹುದಾಗಿದೆ. ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗೆ ಎಂಟು ಸಾವಿರ ಮನೆಗಳನ್ನು ರಾಜ್ಯ ಸರ್ಕಾರ ನಿರ್ಮಿಸುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್‌ಹಿಲೋರಿ, ಡಿವೈಎಸ್ಪಿ ವಿವೇಕಾನಂದ ಸೇರಿದಂತೆ, ವೃತ್ತ ನಿರೀಕ್ಷಕರು, ಪಿಎಸ್‌ಐ ಮತ್ತು ಸಿಬ್ಬಂದಿ ಹಾಜರಿದ್ದರು.
ತಾಲೂಕು ಸಮ್ಮೇಳನ 25, 26ಕ್ಕೆ
ಮುಳಬಾಗಲು: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜೂ.25 ಮತ್ತು 26ರಂದು ನಡೆಸಲು ಶನಿವಾರ ಪಟ್ಟಣದ ಡಿವಿಜಿ ಸರ್ಕಾರಿ ಶಾಲೆಯಲ್ಲಿ ಮು.ಕೃಪದ್ಮನಾಭರಾವ್ ಅಧ್ಯಕ್ಷತೆಯಲ್ಲಿ ಸೇರಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು. ನೂತನವಾಗಿ ಪ್ರಾರಂಭವಾಗಲಿರುವ ಡಿವಿಜಿ ರಂಗ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾಹಿತ್ಯ ಸಮ್ಮೇಳನಾಧ್ಯಕ್ಷರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮುಂದಿನ ಸೋಮವಾರ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಲು ಸಭೆ ನಿರ್ಧರಿಸಿತು. ಸಂಭವಿತ ಅಧ್ಯಕ್ಷರ ಪಟ್ಟಿಯನ್ನು ಸದಸ್ಯರಿಂದ ಪಡೆಯಲಾಯಿತು. ಕೋಲಾರ ಜಿಲ್ಲಾ ಕಸಾಪ ಕಾರ್ಯದರ್ಶಿ ಜಗನ್ನಾಥ್, ಗೋಪಿ, ಅಪ್ಪಾಜಿಗೌಡ ಇದ್ದರು.
ಬಸ್ ಡಿಕ್ಕಿ: ಇಬ್ಬರು ಯುವಕರ ಸಾವು
ಚಿತ್ರದುರ್ಗ: ವೇಗವಾಗಿ ಬಂದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಮೃತಪಟ್ಟಿರುವ ಘಟನೆ ನಗರದ ಜೆಎಂಐಟಿ ಸಮೀಪದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ಪಟ್ಟಣದ ಸಿದ್ದಾರ್ಥ ನಗರದ ವಾಸಿಗಳಾದ ಅನಿಲ್‌ಕುಮಾರ್ (26), ಲೋಕೇಶ್ (28) ಮೃತಪಟ್ಟವರು. ಹಾವೇರಿ ಜಿಲ್ಲೆ ರಾಣೆಬೆನ್ನೂರಿಗೆ ರೇಷ್ಮೆ ಹುಳು ತರಲು ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಎದುರುಗಡೆಯಿಂದ ಬಂದ ಬಸ್ ಡಿಕ್ಕಿ ಹೊಡೆದಿದ್ದು, ಬೈಕ್‌ನಲ್ಲಿದ್ದ ಅನಿಲ್ ಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಲೋಕೇಶ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
'ಉಚಿತ ಪಠ್ಯಪುಸ್ತಕ ಸದ್ಬಳಕೆಯಾಗಲಿ'
ಕೋಲಾರ: ಸರ್ಕಾರ ನೀಡುವ ಸವಲತ್ತು ಬಳಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವಂತೆ ಮಕ್ಕಳಿಗೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಕಿವಿಮಾತಿ ಹೇಳಿದರು. ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆರಂಭೋತ್ಸವಕ್ಕೆ ಚಾಲನೆ ನೀಡಿ ಉಚಿತ ಪಠ್ಯಪುಸ್ತಕ ವಿತರಿಸಿ ಅವರು ಮಾತನಾಡಿದರು. ಸರ್ಕಾರ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಚಿತ ಪುಸ್ತಕ, ಸಮವಸ್ತ್ರ, ವಿದ್ಯಾರ್ಥಿ ವೇತನ, ಕ್ರೀಡಾ ಸೌಲಭ್ಯ ಇತ್ಯಾದಿ ಒದಗಿಸುತ್ತಿದ್ದು, ಮಕ್ಕಳು ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಬೇಕೆಂದರು. ಪ್ರತಿಯೊಬ್ಬರು ತಪ್ಪದೆ ಶಾಲೆಗೆ ಬರಬೇಕು, ಶಾಲೆಯಿಂದ ಯಾರಾದರೂ ಮಕ್ಕಳು ಹೊರಗುಳಿದಿದ್ದರೆ ಅವರನ್ನು ಕರೆ ತರಬೇಕು ಎಂದು ತಿಳಿಸಿದರು. ಚಿಣ್ಣರ ಅಂಗಳದ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳ ಜಾಡು ಕಂಡು ಹಿಡಿದು ಅನೇಕರನ್ನು ಮತ್ತೆ ವಾಪಸ್ ಕರೆತರಲಾಗಿದೆ ಎಂದರು. ಗ್ರಾಮದ ಮುಖಂಡ ನಂಜುಂಡಪ್ಪ, ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ ಚೆನ್ನಾಗಿ ಓದಿ ಗ್ರಾಮಕ್ಕೆ ಕೀರ್ತಿ ತರಬೇಕು ಎಂದರು. ಮುಖ್ಯ ಶಿಕ್ಷಕಿ ಸುನಿತಾಕುಮಾರಿ, ಮುಖಂಡ ಕೆ.ಬಿ.ಮುನಿವೆಂಕಟಪ್ಪ, ಮಹೇಂದ್ರಕುಮಾರ್ ಮತ್ತಿತರರು ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಸಿ.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಭಾರತಿ, ಸುಮಿತ್ರಾ ವೆಸ್ಲಿ, ಸಿ.ರೇಖಾ ಉಪಸ್ಥಿತರಿದ್ದರು.
ದೇವರು ತೊಟ್ಟಿಲು ಕೇಂದ್ರಕ್ಕೆ ಚಾಲನೆ
ಗುಡಿಬಂಡೆ: ಪಟ್ಟಣದ ಬಾಪೂಜಿ ನಗರದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ದೇವರು ತೊಟ್ಟಿಲು ಕೇಂದ್ರಕ್ಕೆ ಸಿಡಿಪಿಒ ಸಿದ್ದಲಿಂಗಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ನಾಗರಿಕ ಸಮಾಜ ತಲೆತಗ್ಗಿಸುವಂತೆ ಇಂದಿನ ಸಮಾಜದಲ್ಲಿ ನವಜಾತ ಶಿಶುಗಳನ್ನು ಕಸದ ತೊಟ್ಟಿಗಳಲ್ಲಿ ಚರಂಡಿಗಳಲ್ಲಿ ಬೀಸಾಡುವ ಕ್ರೂರ ಕೃತ್ಯ ನಡೆಯುತ್ತಿವೆ. ಇಂತಹ ನವಜಾತ ಶಿಶುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ದೇವರ ತೊಟ್ಟಿಲು ಎಂಬ ಯೋಜನೆಯನ್ನು ಜಾರಿ ಮಾಡಿದೆ. ಈ ತೊಟ್ಟಿಲಿನಲ್ಲಿ ತಮಗೆ ಬೇಡವಾದ ಮಗುವನ್ನು ಯಾರು ಬೇಕಾದರೂ ತಂದು ಮಲಗಿಸಬಹುದು. ಮಗುವನ್ನು ತಂದವರು ಯಾರೆಂಬುದರ ಬಗ್ಗೆ ಮಾಹಿತಿ ಗೌಪ್ಯವಾಗಿ ಇಡಲಾಗುವುದು. ಜೊತೆಗೆ ಈ ಶಿಶುಗಳಿಗೆ ಆರೋಗ್ಯ ತಪಾಸಣೆ ಮಾಡಿ ಅದರ ಯೋಗಕ್ಷೇವು ನೋಡಿಕೊಂಡು 3 ತಿಂಗಳ ನಂತರ ಆ ಮಗುವನ್ನು ದತ್ತು ನೀಡಲಾಗುವುದು ಎಂದರು.
ಸಾಂತ್ವನ ಕೇಂದ್ರದ ಶ್ರೀನಿವಾಸ, ಅಂಗನವಾಡಿ ಕೇಂದ್ರದ ಪುಷ್ಪಾವತಮ್ಮ, ಪದ್ಮಾವತಮ್ಮ, ಗಾಯತ್ರಮ್ಮ, ಶಾಂತಮ್ಮ, ಮಂಗಳ ಸೇರಿದಂತೆ ಹಲವರು ಇದ್ದರು.
ಲಂಚ ಪಡೆದರೆ ಕಾನೂನು ಕ್ರಮ: ಶಾಸಕರ ಎಚ್ಚರಿಕೆ
ಮುಳಬಾಗಲು: ನೆಮ್ಮದಿ ಕೇಂದ್ರಗಳ ಚಟುವಟೆಕೆ ಬಗ್ಗೆ ಗಮನ ಹರಿಸಲು ಶಾಸಕ ಕೊತ್ತೂರು ಮಂಜುನಾಥ್ ತಹಸೀಲ್ದಾರ್‌ಗೆ ಸೂಚನೆ ನೀಡಿದರು.
ತಾಲೂಕಿನ ನೆಮ್ಮದಿ ಕೇಂದ್ರಗಳಿಗೆ ಶನಿವಾರ ಭೇಟಿ ನೀಡಿದ ಅವರು ಸಾರ್ವಜನಿಕರು ಸಂಧ್ಯಾ ಸುರಕ್ಷ, ಅಂಗವಿಕಲ, ವಿಧವಾ ವೇತನ, ಪಡೆಯಲು ಅರ್ಜಿ ಸಲ್ಲಿಸಲು ಬಂದವರಿಂದ ಲಂಚಕ್ಕೆ ಪೀಡಿಸುತ್ತಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ ಶಾಸಕರು ತಹಸೀಲ್ದಾರ್ ಕಚೇರಿಗೆ ಭೇಟೆ ನೀಡಿದ್ದರು. ನೆಮ್ಮದಿ ಕೇಂದ್ರಗಳ ಚಟುವಟೆಕೆಗಳ ಕುರಿತು ಗಮನ ಹರಿಸುವಂತೆ ಸೂಚಿಸಿದರು. ಯಾವುದೇ ವ್ಯಕ್ತಿ ಲಂಚ ಸ್ವೀಕರಿಸಿದ ಕುರಿತು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಗಂಗಾಂಬಿಕದೇವಿ ಕುಂಭಾಭಿಷೇಕ
ಮುಳಬಾಗಲು: ತಾಲೂಕಿನ ಕೆ.ಜಿ.ಲಕ್ಷ್ಮೀ ಸಾಗರ ಗ್ರಾಮದಲ್ಲಿ ಶನಿವಾರ ಗಂಗಾಂಬಿಕದೇವಿ ಕುಂಭಾಭಿಷೇಕ ವಿಜೃಂಭಣೆಯಿಂದ ನಡೆಯಿತು. ಕೆ.ಆರ್.ಪುರಂ ಗಾಯತ್ರಿ ಮಠದ ಪೀಠಾಧಿಪತಿ ಡಾ.ಸುಂದರ ಶಿವಾಚಾರ್ಯ ಘನಪಾಟೆ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಕ್ತಿ ದೇವಾಲಯಗಳಲ್ಲಿ ಪ್ರಾಣಿಬಲಿ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು. ತಾಲೂಕಿನಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಮಾಡುತ್ತಿರುವ ಸೇವೆ ಶ್ಲಾಘಿಸಿದರು. ಶಾಸಕ ಕೊತ್ತೂರು ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ರಾಮಲಿಂಗಾರೆಡ್ಡಿ, ತಾಲೂಕು ಭೂ ಬ್ಯಾಂಕ್ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ, ಉಪಾಧ್ಯಕ್ಷ ಗಟ್ಟಪ್ಪ, ನಿರ್ದೇಶಕ ಗಟ್ಟಪ್ಪ, ಮುಖಂಡರಾದ ಉತ್ತನೂರು ಶ್ರೀನಿವಾಸ್, ಚಿನ್ನಪ್ಪಯ್ಯ ಭಾಗವಹಿಸಿದ್ದರು.
ಅರ್ಜಿ ಆಹ್ವಾನ
ಗುಡಿಬಂಡೆ: ಕೇಂದ್ರ ಪುರಸ್ಕೃತ ಯೋಜನೆಯಡಿ ನಡೆಸಲ್ಪಡುತ್ತಿರುವ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಖಾಲಿಯಿರುವ ಸೀಟುಗಳ ಭರ್ತಿಗಾಗಿ ಅರ್ಜಿ ಕರೆಯಲಾಗಿದೆ. ಪ್ರಸಕ್ತ ಶ್ಯೆಕ್ಷಣಿಕ ವರ್ಷದಲ್ಲಿ 7,8,9,ಮತ್ತು10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರಾಗಿದ್ದಾರೆ.
7ರಂದು ಕೋಚಿಮುಲ್ ಅಧ್ಯಕ್ಷರ ಚುನಾವಣೆ
ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಜೂ. 7ರಂದು ಶನಿವಾರ ಚುನಾವಣೆ ನಡೆಯಲಿದೆ. ಈ ಸಂಬಂಧ ಚುನಾವಣಾಧಿಕಾರಿಯೂ ಆಗಿರುವ ಕೋಲಾರ ಉಪ ವಿಭಾಗಾಧಿಕಾರಿ ಮಂಜುನಾಥ್ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದಾರೆ. ಜೂ.7ರಂದು ಬೆಳಿಗ್ಗೆ 7ರಿಂದ 9ಗಂಟೆಯವರೆಗೆ ನಾಮಪತ್ರ ಸಲ್ಲಿಕೆ, 11ರಿಂದ 11.30 ರವರೆಗೆ ನಾಮಪತ್ರ ಪರಿಶೀಲನೆ, 11.30ರಿಂದ 12.30 ರವರೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶ ಹಾಗೂ ಅಗತ್ಯಬಿದ್ದರೆ ಮಧ್ಯಾಹ್ನ 2 ಗಂಟೆಗೆ ಮತದಾನ ನಡೆಯಲಿದ್ದು ಅಂದೇ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇಂದು ವಿಶ್ವ ಹಾಲು ದಿನ
ಕೋಲಾರ: ವಿಶ್ವ ಹಾಲು ದಿನದ ಅಂಗವಾಗಿ ಜೂ.2ರಂದು ಸೋಮವಾರ ಬೆಳಿಗ್ಗೆ 9.30ಕ್ಕೆ ನಗರದ ಸರ್ವಜ್ಞ ಪಾರ್ಕ್‌ನ ಬಳಿ ಇರುವ ನಂದಿನಿ ಪಾರ್ಲರ್ ಹತ್ತಿರ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಸಿಹಿ ವಿತರಣಾ ಉತ್ಸವ ಹಮ್ಮಿಕೊಳ್ಳಲಾಗಿದೆ.ಜಿಲ್ಲಾಧಿಕಾರಿ ಡಿ.ಕೆ.ರವಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯದಲ್ಲಿ ಜೂ.1ರಿಂದ 7ರವರೆಗೆ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು ಜಿಲ್ಲೆಯಲ್ಲಿ ಜೂ.2ರಂದು ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಾನುವಾರ ಜಿಲ್ಲೆಯ ಆಯಾ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಒಳ ರೋಗಿಗಗಳಿಗೆ ಗುಡ್‌ಲೈಫ್ 200 ಮಿಲಿ ಹಾಲಿನ್ಪೊಟ್ಟಣ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ನಾಗರಾಜಯ್ಯ ನೇಮಕಕ್ಕೆ ಸಂತಸ
ಕುಣಿಗಲ್: ತಾಲೂಕಿನ ವ್ಯಾಪ್ತಿಯ ವಿವಿಧ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾಗಿ ಹೋಗಿದ್ದ, ಕವಿ, ಸಾಮಾಜಿಕ ಹೋರಾಟಗಾರರಾದ ವಡ್ಡಗೆರೆ ನಾಗರಾಜಯ್ಯ ಅವರನ್ನು ಸಾಹಿತ್ಯ ಅಕಾಡಮಿ ಸದಸ್ಯರಾಗಿ ರಾಜ್ಯ ಸರ್ಕಾರ ನೇಮಕ ಮಾಡಿರುವುದಕ್ಕೆ ತಾಲೂಕಿನ ಪ್ರಮುಖರು ಸಂತಸ ವ್ಯಕ್ತಪಡಿಸಿದ್ದಾರೆ. ವಡ್ಡಗೆರೆ ನಾಗರಾಜಯ್ಯನವರು ತಾವು ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಸಮಯದಲ್ಲೆ ಹಲವು ಕವನಸಂಕಲನ, ಪುಸ್ತಕಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದು, ರಾಜ್ಯ ಸರ್ಕಾರ ಅವರ ಸೇವೆಯನ್ನು ಗುರುತಿಸಿ ಅಕಾಡಮಿ ಸದಸ್ಯರನ್ನಾಗಿ ನೇಮಕ ಮಾಡಿದ್ದು ಅವರು ಮತ್ತಷ್ಟು ಸಾಧನೆ ಮಾಡಲು ಸಹಕಾರಿಯಾಗಿದೆ ಎಂದು ಲೇಖಕ ವೈ.ಜಿ.ವೆಂಕಟೇಶಯ್ಯ, ಸಾಹಿತಿ ಭಾರ್ಗವಿ ಸೋಮಶೇಖರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಫಯಾಜುಲ್ಲಾ, ಪದಾಧಿಕಾರಿಗಳಾದ ಸಿದ್ದಲಿಂಗಸ್ವಾಮಿ, ಗುರುಚರಣ ಸಿಂಗ್, ಆನಂದಸಿಂಗ್, ಮೋಹನ್, ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್ ಅಭಿನಂದಿಸಿದ್ದಾರೆ.
ಸೀತಾರಾಮ ಲಕ್ಷ್ಮಣ ಪ್ರತಿಷ್ಠಾಪನೆ
ಪಾವಗಡ: ಸೀತಾರಾಮಲಕ್ಷ್ಮಣ ದೇವರ ಪ್ರತಿಷ್ಠಾಪನೆ ಮತ್ತು ಅಂಜನೇಯಸ್ವಾಮಿ ದೇವಸ್ಥಾನದ ಗೋಪುರ ಕಳಸ ಸ್ಥಾಪನೆಯನ್ನು ಮೇ 31ರಿಂದ ಜೂ 2ರವರೆವಿಗೆ ತಾಲೂಕಿನ ಭೀಮನಕುಂಟೆ ಗ್ರಾಮದಲ್ಲಿ ಹಮ್ಮಿಕೊಂಡಿರುವುದಾಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ತಾ.ಸಮಾಜ ಕಲ್ಯಾಣಧಿಕಾರಿ ವೈ.ಆರ್.ಚೌದರಿ ಅವರು ತಿಳಿಸಿದ್ದಾರೆ. ಭಕ್ತಾದಿಗಳು ಮತ್ತು ಗ್ರಾಮಸ್ಥರ ಸಹಕಾರದಿಂದ ಗರ್ಭಗುಡಿಯ ಮತ್ತು ಪಂಚಲೋಹ ಉತ್ಸವ ಮೂರ್ತಿಗಳ ದಾನಿಗಳಾದ ಶ್ರೀಮತಿ ಯಲ್ಲಂಕಿ ಹನುಮಕ್ಕ ಮತ್ತು ಯಲ್ಲಂಕಿ ಯಂಗಣ್ಣ ಜ್ಞಾಪಕರ್ಥವಾಗಿ ಸೀತಾರಾಮ ಲಕ್ಷ್ಮಣ ದೇವರ ಉತ್ಸವವನ್ನು ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಮೂರು ದಿನಗಳು ನಡೆಯುವ ಈ ಉತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಮನವಿ ಮಾಡಿದ್ದಾರೆ.