ಇಂದಿನ ಆಧುನಿಕ ಜೀವನಶೈಲಿ ಮತ್ತು ಬದಲಾದ ಆಹಾರ ಪದ್ಧತಿಯಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸರ್ವೇಸಾಮಾನ್ಯವಾಗಿವೆ. ಸಣ್ಣಪುಟ್ಟ ಹೊಟ್ಟೆನೋವು, ಗ್ಯಾಸ್ಟ್ರಿಕ್ ಅಥವಾ ಅಜೀರ್ಣ ಕಾಣಿಸಿಕೊಂಡಾಗ ನಾವೆಲ್ಲರೂ ಸಾಮಾನ್ಯವಾಗಿ ಮನೆಮದ್ದು ಅಥವಾ ಮೆಡಿಕಲ್ ಸ್ಟೋರ್ಗಳಲ್ಲಿ ಸಿಗುವ ಮಾತ್ರೆಗಳನ್ನು ತೆಗೆದುಕೊಂಡು ಸುಮ್ಮನಾಗುತ್ತೇವೆ. ಆದರೆ, ಕೆಲವೊಮ್ಮೆ ಈ ಸಾಮಾನ್ಯವೆಂದು ತೋರುವ ಲಕ್ಷಣಗಳು 'ಹೊಟ್ಟೆಯ ಕ್ಯಾನ್ಸರ್' (Stomach Cancer) ನಂತಹ ಗಂಭೀರ ಕಾಯಿಲೆಯ ಮುನ್ಸೂಚನೆಯಾಗಿರಬಹುದು.
ಹೊಟ್ಟೆಯ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಆದ್ದರಿಂದ, ಈ ಕಾಯಿಲೆಯ ಆರಂಭಿಕ ಲಕ್ಷಣಗಳ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದಿರುವುದು ಅತ್ಯಗತ್ಯ.
ನವೆಂಬರ್ ತಿಂಗಳನ್ನು ಜಾಗತಿಕವಾಗಿ ಹೊಟ್ಟೆಯ ಕ್ಯಾನ್ಸರ್ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೊಟ್ಟೆಯ ಕ್ಯಾನ್ಸರ್ನ ಲಕ್ಷಣಗಳು, ಅಪಾಯದ ಅಂಶಗಳು ಮತ್ತು ಆರಂಭಿಕ ಹಂತದಲ್ಲೇ ರೋಗ ಪತ್ತೆಹಚ್ಚುವ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಸಾಕಷ್ಟು ಮಂದಿ ಅಜೀರ್ಣ, ಎದೆಯುರಿ, ಹೊಟ್ಟೆನೋವು ಅಥವಾ ಹೊಟ್ಟೆಯಲ್ಲಿ ಅಸ್ವಸ್ಥತೆ ಕಾಣಿಸಿಕೊಂಡರೆ ಬಹುತೇಕರು ಅದನ್ನು ಸಾಮಾನ್ಯ ಜೀರ್ಣಕ್ರಿಯೆ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಪ್ರತಿಯೊಂದು ಸಣ್ಣ ಆರೋಗ್ಯ ಸಮಸ್ಯೆಯನ್ನೂ ಗಂಭೀರ ಕಾಯಿಲೆಯೊಂದಿಗೆ ತಳಕು ಹಾಕುವ ಅಗತ್ಯವಿಲ್ಲ. ಆದರೆ, ಪದೇಪದೆ ಕಾಣಿಸಿಕೊಳ್ಳುವ ಅಥವಾ ದೀರ್ಘಕಾಲ ಮುಂದುವರಿಯುವ ಲಕ್ಷಣಗಳನ್ನು ಕಡೆಗಣಿಸುವುದು ಅಪಾಯಕಾರಿ
ಹೊಟ್ಟೆಯ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವೈದ್ಯರು ಇದರ ಎಚ್ಚರಿಕೆಯ ಲಕ್ಷಣಗಳು, ಅಪಾಯದ ಅಂಶಗಳು ಮತ್ತು ಆರಂಭಿಕ ಪತ್ತೆಯ ಮಹತ್ವವನ್ನು ವಿವರಿಸಿದ್ದಾರೆ.
ಸಾಮಾನ್ಯ ಅಜೀರ್ಣ ಎಂದು ಭಾವಿಸಿ ದೀರ್ಘಕಾಲದ ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಎಂಬುದು ವೈದ್ಯರ ಪ್ರಮುಖ ಸಲಹೆಯಾಗಿದೆ.
ದೀರ್ಘಕಾಲ ಸಮಸ್ಯೆ ಮುಂದುವರಿಯುವ ಅಥವಾ ಪದೇಪದೆ ಕಾಣಿಸಿಕೊಳ್ಳುವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಕೆಲವೊಮ್ಮೆ ಇವು ಹೊಟ್ಟೆಯ ಕ್ಯಾನ್ಸರ್ನ ಆರಂಭಿಕ ಸೂಚನೆಗಳಾಗಿರಬಹುದು.
ವಿಶೇಷವಾಗಿ ಹೆಲಿಕೋಬ್ಯಾಕ್ಟರ್ ಪೈಲೋರಿ (ಎಚ್. ಪೈಲೋರಿ) ಎಂಬ ಬ್ಯಾಕ್ಟೀರಿಯಾದ ದೀರ್ಘಕಾಲದ ಸೋಂಕು ಮತ್ತು ಬಹುಕಾಲದಿಂದ ಇರುವ ಅಟ್ರೋಫಿಕ್ ಗ್ಯಾಸ್ಟ್ರೈಟಿಸ್ನಂತಹ ಸಮಸ್ಯೆಗಳು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು" ಎಂದು ರೆನೋವಾ ಸೆಂಚುರಿ ಆಸ್ಪತ್ರೆಯ ಹಿರಿಯ ವೈದ್ಯಕೀಯ ಮತ್ತು ರಕ್ತ ಕ್ಯಾನ್ಸರ್ ತಜ್ಞ ಡಾ. ಎಂ.ಎ. ಸುಬೂರ್ ಶಹರೋಸ್ ತಿಳಿಸಿದ್ದಾರೆ.
ಇದರೊಂದಿಗೆ ಕೆಲವು ಪ್ರಮುಖ ಎಚ್ಚರಿಕೆಯ ಲಕ್ಷಣಗಳ ಬಗ್ಗೆಯೂ ಅವರು ಗಮನ ಸೆಳೆದಿದ್ದಾರೆ. ಯಾವುದೇ ಸ್ಪಷ್ಟ ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ಹಸಿವು ಕಡಿಮೆಯಾಗುವುದು, ನಿರಂತರ ಹೊಟ್ಟೆನೋವು, ಆಹಾರ ನುಂಗಲು ತೊಂದರೆಯಾಗುವುದು, ಪದೇಪದೆ ವಾಂತಿಯಾಗುವುದು, ರಕ್ತಹೀನತೆ ಹಾಗೂ ಜೀರ್ಣಾಂಗದಲ್ಲಿ ರಕ್ತಸ್ರಾವವಾಗುವುದು ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಹೊಟ್ಟೆಯ ಕ್ಯಾನ್ಸರ್ ಸಾಮಾನ್ಯವಾಗಿ ಹೊಟ್ಟೆಯ ಕೆಳಭಾಗದಲ್ಲಿ ಕಾಣಿಸಿಕೊಳ್ಳುವುದು ಏಷ್ಯಾದ ಹಲವು ಜನಸಮುದಾಯಗಳಲ್ಲಿ ಹಿಂದಿನಿಂದಲೂ ಕಂಡುಬಂದಿದೆ. ಆದರೆ, ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ಕ್ಯಾನ್ಸರ್ ಕಾಣಿಸಿಕೊಳ್ಳುವ ಸ್ಥಳದಲ್ಲಿ ವ್ಯತ್ಯಾಸವಿರುತ್ತದೆ. ಹೊಟ್ಟೆ ಮತ್ತು ಅನ್ನನಾಳ ಸೇರುವ ಭಾಗದಲ್ಲಿಯೂ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಗುರುತಿಸಲ್ಪಡುತ್ತಿವೆ ಎಂದು ಡಾ. ಸುಬೂರ್ ವಿವರಿಸಿದ್ದಾರೆ.
ಮಹಿಳೆಯರಿಗಿಂತ ಪುರುಷರಲ್ಲಿ ಹೊಟ್ಟೆಯ ಕ್ಯಾನ್ಸರ್ ಹೆಚ್ಚು ಕಂಡುಬರುತ್ತದೆ. ಭಾರತದಲ್ಲಿ ಪುರುಷರನ್ನು ಬಾಧಿಸುವ ಪ್ರಮುಖ ಐದು ಕ್ಯಾನ್ಸರ್ಗಳಲ್ಲಿ ಇದೂ ಒಂದಾಗಿದೆ. ಜಾಗತಿಕ ಕ್ಯಾನ್ಸರ್ ಅಂಕಿಅಂಶಗಳ ಸಂಸ್ಥೆಯ 2022ರ ಅಂದಾಜಿನ ಪ್ರಕಾರ, ಭಾರತದಲ್ಲಿ ಆ ವರ್ಷ ಸುಮಾರು 64,600 ಹೊಸ ಹೊಟ್ಟೆಯ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದರೆ, ಈ ಕಾಯಿಲೆಯಿಂದ ಸುಮಾರು 57,700 ಮಂದಿ ಮೃತಪಟ್ಟಿದ್ದಾರೆ.
ಹೊಟ್ಟೆಯ ಕ್ಯಾನ್ಸರ್ಗೆ ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ವಿಕಿರಣ ಚಿಕಿತ್ಸೆ, ಗುರಿ ಆಧಾರಿತ ಚಿಕಿತ್ಸೆ, ರೋಗನಿರೋಧಕ ಆಧಾರಿತ ಚಿಕಿತ್ಸೆ ಮತ್ತು ಉಪಶಮನಕಾರಿ ಆರೈಕೆ ಸೇರಿದಂತೆ ಹಲವು ಚಿಕಿತ್ಸಾ ವಿಧಾನಗಳು ಲಭ್ಯವಿವೆ. ಆದರೆ, ಯಾವ ಚಿಕಿತ್ಸೆ ನೀಡಬೇಕು ಎಂಬುದು ಕ್ಯಾನ್ಸರ್ ಯಾವ ಹಂತದಲ್ಲಿದೆ, ರೋಗಿಯ ಒಟ್ಟಾರೆ ಆರೋಗ್ಯ ಸ್ಥಿತಿ ಮತ್ತು ಇತರ ವೈದ್ಯಕೀಯ ಅಂಶಗಳನ್ನು ಅವಲಂಬಿಸಿರುತ್ತದೆ.
ಕ್ಯಾನ್ಸರ್ ಪತ್ತೆಯಾಗುವ ಹಂತವು ರೋಗಿಯ ಬದುಕುಳಿಯುವ ಸಾಧ್ಯತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರಂಭಿಕ ಹಂತದಲ್ಲೇ ಪತ್ತೆಯಾದರೆ ಹೊಟ್ಟೆಯ ಕ್ಯಾನ್ಸರ್ಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಆದರೆ, ಅನೇಕರು ಆರಂಭದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳನ್ನು ಸಾಮಾನ್ಯ ಅಜೀರ್ಣ ಅಥವಾ ಜೀರ್ಣಕ್ರಿಯೆ ಸಮಸ್ಯೆ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಹೀಗಾಗಿ ಅವರು ವೈದ್ಯರನ್ನು ಸಂಪರ್ಕಿಸುವಷ್ಟರಲ್ಲಿ ಕಾಯಿಲೆ ಮುಂದುವರಿದ ಹಂತ ತಲುಪಿರುತ್ತದೆ ಎಂದು ಕೇರ್ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಾ ಕ್ಯಾನ್ಸರ್ ತಜ್ಞ ಡಾ. ರಾಹುಲ್ ರೆಡ್ಡಿ ಲೆವಕ ತಿಳಿಸಿದ್ದಾರೆ.
ಕ್ಯಾನ್ಸರ್ ಕುರಿತು ಇರುವ ಕೆಲವು ತಪ್ಪು ಕಲ್ಪನೆಗಳು
ಹೊಟ್ಟೆಯ ಕ್ಯಾನ್ಸರ್ ಎಂದರೆ ವಯಸ್ಸಾದವರಿಗಷ್ಟೇ ಬರುವ ಕಾಯಿಲೆ ಎಂಬ ನಂಬಿಕೆ ಇದೆ. ಆದರೆ, ಇದು ತಪ್ಪು. ವಯಸ್ಸಾದವರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬಂದರೂ, ಯುವಕರಲ್ಲಿಯೂ ಹೊಟ್ಟೆಯ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು.
ಕ್ಯಾನ್ಸರ್ ಇದ್ದರೆ ತೀವ್ರ ಹೊಟ್ಟೆನೋವು ಇರಲೇಬೇಕು ಎಂಬ ಮತ್ತೊಂದು ತಪ್ಪು ಕಲ್ಪನೆಯಿದೆ. ವಾಸ್ತವವಾಗಿ ಆರಂಭಿಕ ಹಂತದಲ್ಲಿ ತೀವ್ರ ನೋವು ಕಾಣಿಸಿಕೊಳ್ಳದೇ ಇರಬಹುದು. ಅಜೀರ್ಣ, ಹೊಟ್ಟೆ ಉಬ್ಬರ, ಹಸಿವು ಕಡಿಮೆಯಾಗುವುದು ಸೇರಿದಂತೆ ಸಾಮಾನ್ಯವೆಂದು ಭಾವಿಸುವ ಸಣ್ಣ ಲಕ್ಷಣಗಳೇ ಆರಂಭಿಕ ಸೂಚನೆಗಳಾಗಿರಬಹುದು.
ಧೂಮಪಾನ ಮತ್ತು ಮದ್ಯಪಾನ ಮಾಡದಿದ್ದರೆ ಹೊಟ್ಟೆಯ ಕ್ಯಾನ್ಸರ್ ಬರುವುದಿಲ್ಲ ಎಂಬ ಭಾವನೆಯೂ ಸರಿಯಲ್ಲ. ಇವುಗಳಿಂದ ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಾದರೂ, ಅದರಿಂದ ಕ್ಯಾನ್ಸರ್ ಅಪಾಯ ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ.
ಎಚ್. ಪೈಲೋರಿ ಸೋಂಕು, ಕುಟುಂಬದಲ್ಲಿ ಕ್ಯಾನ್ಸರ್ನ ಇತಿಹಾಸ ಮತ್ತು ಆಹಾರ ಪದ್ಧತಿಯಂತಹ ಅಂಶಗಳೂ ಹೊಟ್ಟೆಯ ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗಬಹುದು ಎಂದು ಡಾ. ರಾಹುಲ್ ವಿವರಿಸಿದ್ದಾರೆ.
ಹೊಟ್ಟೆಯ ಕ್ಯಾನ್ಸರ್ನಿಂದ ರಕ್ಷಿಸಿಕೊಳ್ಳಲು ದೇಹ ನೀಡುವ ಎಚ್ಚರಿಕೆಯ ಸಂಕೇತಗಳನ್ನು ಗುರುತಿಸುವುದು ಅತ್ಯಂತ ಮುಖ್ಯ. ಅಜೀರ್ಣ, ಹಸಿವಿನ ಕೊರತೆ ಅಥವಾ ಹೊಟ್ಟೆನೋವು ನಿರಂತರವಾಗಿ ಕಾಡುತ್ತಿದ್ದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ವೈದ್ಯರನ್ನು ಸಂಪರ್ಕಿಸಬೇಕು.
ಅಗತ್ಯವಿದ್ದಲ್ಲಿ ವೈದ್ಯರ ಸಲಹೆಯಂತೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲೇ ರೋಗ ಪತ್ತೆಯಾದರೆ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾಮಾನ್ಯ ಜೀರ್ಣಕ್ರಿಯೆ ಸಮಸ್ಯೆ ಎಂದುಕೊಂಡು ಆರೋಗ್ಯದ ಎಚ್ಚರಿಕೆಗಳನ್ನು ನಿರ್ಲಕ್ಷಿಸಬೇಡಿ.