ಬೆಂಗಳೂರು: ಖಿನ್ನತೆಗೊಳಗಾಗಿದ್ದ ಹುಚ್ಚ ಪ್ರೇಮಿಯೊಬ್ಬ ತನ್ನ ಪ್ರೇಯಸಿ ಮನೆಗೆ ಬೆಂಕಿ ಇಟ್ಟಿರುವ ಘಟನೆಯೊಂದು ನಗರದ ಶ್ರೀರಾಂಪುರದ ಸಾಯಿಬಾಬಾ ನಗರದಲ್ಲಿ ಶುಕ್ರವಾರ ನಡೆದಿದೆ.
ದೀಪಕ್ ಬೆಂಕಿ ಇಟ್ಟ ಯುವಕನಾಗಿದ್ದು, ಕಳೆದ ರಾತ್ರಿ 12.20 ರ ಸುಮಾರಿಗೆ ಪ್ರೇಯಸಿ ಮನೆ ಹತ್ತಿರುವ ಬಂದಿರುವ ದೀಪಕ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆಂದು ತಿಳಿದುಬಂದಿದೆ. ಬೆಂಕಿ ಹಚ್ಚಿದ ಪರಿಣಾಮ ಮನೆಯಲ್ಲಿದ್ದ ಮೇಘನಾ, ಸಂಜನಾ, ನಟರಾಜ್ ಹಾಗೂ ಅನುಪಮಾ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೇಘನಾ ಹಾಗೂ ದೀಪಕ್ ಒಂದೇ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಇಬ್ಬರು ಕೆಲವು ವರ್ಷದಿಂದ ಪ್ರೀತಿಸುತ್ತಿದ್ದರು. ಅಲ್ಲದೆ, ಇಬ್ಬರು ಮದುವೆಯಾಗುವುದಾಗಿ ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ. ಆದರೆ, ಮಗಳ ಪ್ರೀತಿ ವಿಷಯ ತಿಳಿದಿದ್ದ ಮೇಘನಾ ತಂದೆ ನಟರಾಜ್ ಅವರು ದೀಪಕ್ ನನ್ನು ಕರೆದು ವಿದ್ಯಾಭ್ಯಾಸ ಮುಗಿಸಿ, ಕೆಲಸ ಪಡೆದ ನಂತರ ಮದುವೆಯಾಗುವಂತೆ ಬುದ್ಧಿವಾದ ಹೇಳಿದ್ದಾರೆ.
ಆದರೆ, ಇದರಿಂದ ಬೇಸರಗೊಂಡಿದ್ದ ದೀಪಕ್ ಎಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲವೋ, ಕೆಲಸ ಸಿಗುವುದಿಲ್ಲವೋ ಎಂದು ಕೆಲವು ದಿನಗಳಿಂದ ಖಿನ್ನತೆಗೊಳಗಾಗಿದ್ದಾನೆ. ಅಲ್ಲದೆ, ತಾನು ಪ್ರೀತಿಸಿದ್ದ ಯುವತಿಯನ್ನು ಆಕೆಯ ಪೋಷಕರು ಎಲ್ಲಿ ಬೇರೆಯವರೊಂದಿಗೆ ಕೊಟ್ಟು ಮದುವೆ ಮಾಡಿಬಿಡುತ್ತಾರೋ ಎಂಬ ಆತಂಕದಿಂದ ಪ್ರೇಯಸಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆಂದು ತಿಳಿದುಬಂದಿದೆ.
ಗಾಯಗೊಂಡವರು ಪ್ರಸ್ತುತ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರು ದೀಪಕ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ವೇಳೆ ದೀಪಕ್ ಮದ್ಯಪಾನ ಮಾಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.