ರಾಜ್ಯ

ಭಾರಿ  ಮಳೆ: ಶೀಘ್ರ ಮುಂಜಾಗ್ರತಾ ಕ್ರಮಕ್ಕೆ ಸಿಎಂ ಯಡಿಯೂರಪ್ಪ ಸೂಚನೆ

Raghavendra Adiga

ಬೆಂಗಳೂರು: ರಾಜ್ಯದ ಹಲವೆಡೆ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರನ್ನು ರಕ್ಷಿಸಲು ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ.
  
ಹವಾಮಾನ ಇಲಾಖೆ ಅಧಿಕಾರಿಗಳು ಹೆಚ್ಚಿನ ಮಳೆಯಾಗಬಹುದೆಂದು ಸೂಚನೆ ನೀಡಿರುವ ಕಾರಣ ತಗ್ಗುಪ್ರದೇಶಗಳಲ್ಲಿರುವ ಸಾರ್ವಜನಿಕರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ, ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
  
ಈ ಸಂಬಂಧ ಬೆಳಗಾವಿ, ಗದಗ, ಬಾಗಲಕೋಟೆ, ವಿಜಯಪುರ, ಹಾವೇರಿ ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮುಖ್ಯಮಂತ್ರಿ ಮಾಹಿತಿ ಪಡೆದು ಪ್ರವಾಹದಿಂದ ಮನೆ-ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವವರ ರಕ್ಷಣೆಗೆ ಆದ್ಯತೆ ನೀಡುವಂತೆ ಹೇಳಿದರು. ಮಳೆಯಿಂದ ಅನಾಹುತ ಸಂಭವಿಸಿದ ಕಡೆ ಅಧಿಕಾರಿಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು, ಕಾಳಜಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಅಗತ್ಯ ತುರ್ತು ಸೇವೆಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.

ಅಗತ್ಯವಿರುವೆಡೆ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆ, ಸಂಘ-ಸಂಸ್ಥೆಗಳ ಜೊತೆ ಕೈಜೋಡಿಸಿ ಸಂತ್ರಸ್ತರಿಗೆ ನೆರವು ಒದಗಿಸುವಂತೆ ಹಾಗೂ ಹೆಚ್ಚು ಮಳೆಯಾಗುತ್ತಿರುವ ಪ್ರದೇಶಗಳಿಗೆ ಸಾರ್ವಜನಿಕರು ತೆರಳದಂತೆ ಸೂಚನೆ ನೀಡಬೇಕೆಂದು ಯಡಿಯೂರಪ್ಪ ಹೇಳಿದ್ದಾರೆ.

SCROLL FOR NEXT