ಬೆಂಗಳೂರು: ಮುಡಾ, ವಾಲ್ಮೀಕಿ ನಿಗಮ, ವಕ್ಪ್ ಆಸ್ತಿ ವಿವಾದ, ಬಾಣಂತಿಯರ ಸಾವು ಪ್ರಕರಣ ಹೀಗೆ ಹಲವು ಅಸ್ತ್ರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಮೇಲೆ ಮುಗಿಬೀಳಲು ವಿರೋಧ ಪಕ್ಷದವರು ಸಜ್ಜಾಗಿದ್ದು, ನಾಳೆ ಬೆಳಗಾವಿಯಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ ಆರಂಭವಾಗಲಿದೆ.
ಬಿಜೆಪಿಯೊಳಗೆ ವಿಜಯೇಂದ್ರ ಬಣ ಮತ್ತು ಯತ್ನಾಳ್ ಬಣ ಬಡಿದಾಟ ಸಾಗಿದೆ. ಬಿಜೆಪಿ ಅಸ್ತ್ರಗಳಿಗೆ ಕಾಂಗ್ರೆಸ್ ಕೊರಾನಾ ಅಸ್ತ್ರ ಜೊತೆಗೆ ಯತ್ನಾಳ್ ಬಣ ಬಡಿದಾಟವನ್ನು ತಿರುಗುಬಾಣವಾಗಿ ಬಿಡಲು ಸಜ್ಜಾಗಿದೆ. ಬಿಜೆಪಿ ವಕ್ಫ್ ವಿಚಾರ ಮುಂದಿಟ್ರೆ, ಯತ್ನಾಳ್ ಪ್ರತ್ಯೇಕ ಹೋರಾಟವನ್ನೇ ಪ್ರಸ್ತಾಪಿಸಿ ತಿವಿಯಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ.
ಬೆಳಗಾವಿ ಸುವರ್ಣಸೌಧಕ್ಕೆ ಸ್ಪೀಕರ್, ಸಭಾಪತಿ ಭೇಟಿ: ನಾಳೆ ಅಧಿವೇಶನ ಆರಂಭಕ್ಕೆ ಮುನ್ನ ಇಂದು ಬೆಳಗಾವಿ ಸುವರ್ಣಸೌಧಕ್ಕೆ ಸ್ಪೀಕರ್ ಯು ಟಿ ಖಾದರ್ ಮತ್ತು ಸಭಾಪತಿ ಬಸವರಾಜ ಹೊರಟ್ಟಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹತ್ತು ದಿನಗಳ ಚಳಿಗಾಲದ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿ ಸಜ್ಜಾಗಿದೆ.
ಇಂದು ಸ್ಪೀಕರ್ ಯು.ಟಿ.ಖಾದರ್ ಬೆಳಗಾವಿ ಸುವರ್ಣಸೌಧ ಪರಿಶೀಲನೆ ಮಾಡಿದ್ದು, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಡಿಸಿ ರೋಷನ್, ಜಿ.ಪಂ. ಸಿಇಒ ರಾಹುಲ್ ಶಿಂಧೆ ಸೇರಿ ಹಲವರು ಸಾಥ್ ನೀಡಿದರು. ಬಳಿಕ ಮಾತನಾಡಿದ ಯು.ಟಿ.ಖಾದರ್, ಸುವರ್ಣಸೌಧದ ಸಭಾಂಗಣದ ಸ್ಪೀಕರ್ ಪೀಠ ವಿಧಾನಸೌಧದ ಮಾದರಿಯಲ್ಲೇ ನವೀಕರಣ ಆಗಿದೆ. ಡಿಸಿಎಂ, ಸಿಎಂ ಸಲಹೆ ಪಡೆದು ರೋಜ್ ವುಡ್ ಬಳಸಿ ನವೀಕರಣ ಮಾಡಲಾಗಿದೆ ಎಂದರು.
ಮಹಾತ್ಮ ಗಾಂಧಿ ಬೆಳಗಾವಿ ಅಧಿವೇಶದಲ್ಲಿ ಭಾಗಿಯಾಗಿ 100 ವರ್ಷ
6 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಜಿಲ್ಲಾಡಳಿತ ಸಹಯೋಗದಿಂದ ಸುಮಾರು 10 ಕಮಿಟಿ ರಚಿಸಲಾಗಿದೆ. ಪ್ರತಿಭಟನೆ ಮಾಡುವವರಿಗೂ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಯುವಕರು, ವಿದ್ಯಾರ್ಥಿಗಳು, ಶಿಕ್ಷಕ ವರ್ಗಕ್ಕೆ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಮಹಾತ್ಮ ಗಾಂಧಿ ಬೆಳಗಾವಿಗೆ ಬಂದು ಅಧಿವೇಶದಲ್ಲಿ ಭಾಗಿಯಾಗಿ 100 ವರ್ಷ ಕಳೆದಿದೆ. ಮಹಾತ್ಮ ಗಾಂಧಿ ಭಾವಚಿತ್ರ ಇರುವ ಎಜ್ಸಿಬಿಷನ್ ಮಾಡಲಾಗಿದೆ. ಚಿಲ್ಡ್ರನ್ಸ್ ಸೈನ್ಸ್ ಸೆಂಟರ್ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಇಡೀ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು. ಇದು ಸ್ವಾಭಿಮಾನದ ಸುವರ್ಣಸೌಧ, ಆದರೆ ಹೆಚ್ಚಿನ ಆದ್ಯತೆ ಈ ಭಾಗಕ್ಕೆ ಕೊಡಬೇಕು. ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಅಧಿವೇಶನದ ಸಮಯದಲ್ಲಿ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು. ಹಿಮಾಚಲ ಪ್ರದೇಶ, ನಾಗಪುರದಲ್ಲೂ ಎರಡು ವಿಧಾನಸಭೆ ಇದೆ. ಶಾಶ್ವತವಾಗಿ ಶಾಸಕರ ಭವನ ಮಾಡುವ ಯೋಚನೆ ಇದೆ. ಲೋಕೋಪಯೋಗಿ ಸಚಿವರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
ಅಂತಿಮ ಹಂತದ ಸಿದ್ಧತೆಯನ್ನ ಡಿಸಿ, ಪೊಲೀಸ್ ಕಮೀಷನರ್ ಮತ್ತು ಎಸ್ಪಿ ಪರಿಶೀಲನೆ ಮಾಡಿದ್ದಾರೆ. ಉತ್ತರ ಕರ್ನಾಟಕದ ಸಮಸ್ಯೆ ಸೇರಿದಂತೆ ಮುಡಾ, ವಾಲ್ಮಿಕಿ, ಬಳ್ಳಾರಿ ಬಾಣಂತಿಯರ ಸಾವುಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು, ಯಾವುದೇ ವಿಷಯ ಇಟ್ಟುಕೊಂಡು ಧರಣಿ ನಡೆಸಿ ಕಾಲಹರಣ ಬದಲು ಅಭಿವೃದ್ಧಿಯತ್ತ ಗಮನಹರಿಸುವಂತೆ ಎಲ್ಲಾ ಪಕ್ಷಗಳಿಗೆ ಕಿವಿಮಾತು ಹೇಳಿದ್ದಾರೆ.
ಬೆಳಗಾವಿ ಅಧಿವೇಶನ ಅರ್ಥಪೂರ್ಣವಾಗಿ ನಡೆಯಬೇಕೆಂಬುದು ನಮ್ಮ ಉದ್ದೇಶ. ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚಿಸಲು 20 ಕೋಟಿ ರೂ. ಖರ್ಚು ಮಾಡಿ ಸದನ ನಡೆಸಲಾಗುತ್ತಿದೆ. ಹೀಗಾಗಿ ಎರಡೂ ವಾರಗಳಲ್ಲಿ 4 ದಿನ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚಿಸಲು ಮೀಸಲು. ಮಂಗಳವಾರ, ಬುಧವಾರ ಸುದೀರ್ಘವಾಗಿ ಚರ್ಚಿಸಲು ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದರು.