ಸಿಎಂ ಸಿದ್ದರಾಮಯ್ಯ 
ರಾಜ್ಯ

ನಾಗಮಂಗಲ ಗಲಭೆ: ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ- ಸಿಎಂ ಸಿದ್ದರಾಮಯ್ಯ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲುತೂರಾಟವು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ. ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲುತೂರಾಟವು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯವಾಗಿದ್ದು, ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.

ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟವಾಗಿರುವ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲುತೂರಾಟವು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ. ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಈಗಾಗಲೇ 50ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು, ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಗಲಭೆ, ಗಲಾಟೆ, ಹಿಂಸಾಚಾರಗಳು ನಡೆಯದೆ ಸರ್ವಜನಾಂಗದ ಶಾಂತಿಯ ತೋಟದಂತಿದ್ದ ನಾಡನ್ನು, ಧಾರ್ಮಿಕ ನೆಲೆಗಟ್ಟಿನಲ್ಲಿ ವಿಭಜಿಸಲು ಯತ್ನಿಸುವ ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಪ್ರಚೋದನೆಗಳಿಗೆ ಒಳಗಾಗದೆ ಶಾಂತಿ, ಸಂಯಮ ಕಾಪಾಡಿಕೊಳ್ಳುವ ಮೂಲಕ ನಮ್ಮೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆಂದು ಹೇಳಿದ್ದಾರೆ.

ಸಂವಿಧಾನವನ್ನೇ ಬದಲಾಯಿಸಲು ಹೊರಟವರಿಗೆ ಪ್ರತಿಭಟನೆ ಮಾಡುವ ನೈತಿಕತೆ ಇದೆಯೇ?

ಈ ನಡುವೆ ಮೀಸಲಾತಿ ಕುರಿತು ರಾಹುಲ್ ಗಾಂಧಿಯವರ ಹೇಳಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.

ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಮೀಸಲಾತಿ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಬಿಜೆಪಿ ನಾಯಕರು ಮಾಡುತ್ತಿರುವ ಪ್ರತಿಭಟನೆ, ‘‘ಪ್ರಾಣಿ ಹಿಂಸೆ ವಿರುದ್ಧ ಕಟುಕರು ಪ್ರತಿಭಟನೆ ಮಾಡಿದಂತೆ’’. ಮೀಸಲಾತಿಯನ್ನು ವಿರೋಧಿಸುತ್ತಾ ಬಂದವರಿಗೆ, ಸಂವಿಧಾನವನ್ನೇ ಬದಲಾಯಿಸಲು ಹೊರಟವರಿಗೆ ಇಂತಹ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.

ಮೀಸಲಾತಿ ವಿರೋಧವನ್ನು ರಕ್ತಗತವಾಗಿಸಿಕೊಂಡಿರುವ ಬಿಜೆಪಿ ನಾಯಕರಿಗೆ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಅರ್ಥಮಾಡಿಕೊಳ್ಳುವ ಜ್ಞಾನವಾಗಲಿ, ವ್ಯವಧಾನವಾಗಲಿ ಇಲ್ಲದಿರುವುದು ಆಶ್ಚರ್ಯವೇನಲ್ಲ. ವಿದ್ಯೆ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸರ್ವರಿಗೂ ಸಮಾನ ಪಾಲನ್ನು ನೀಡುವುದೇ ಮೀಸಲಾತಿಯ ಮೂಲ ಉದ್ದೇಶ. ಆ ಉದ್ದೇಶ ಸಾಧನೆಯಾದ ನಂತರ ಮೀಸಲಾತಿ ಯಾಕೆ ಬೇಕು? ಇದನ್ನು ರಾಹುಲ್ ಗಾಂಧಿಯವರು ಮಾತ್ರ ಅಲ್ಲ ನಾನೂ ಹೇಳುತ್ತೇನೆ. ಇದು ಹೇಗೆ ಮೀಸಲಾತಿ ವಿರೋಧಿ ಹೇಳಿಕೆ ಆಗುತ್ತದೆ?

ಸರ್ವರಿಗೂ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸಮಾನ ಪಾಲು ಸಿಗಬೇಕೆಂಬ ಉದ್ದೇಶದಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿ ನೀತಿಯನ್ನು ಸಂವಿಧಾನದಲ್ಲಿ ಅಳವಡಿಸಿದ್ದರು. ಆದರೆ ಮೀಸಲಾತಿಯ ಹೊರತಾಗಿಯೂ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮಾನ ಅವಕಾಶ ಇನ್ನೂ ಸಿಕ್ಕಿಲ್ಲ, ಸಾಮಾಜಿಕ ಅಸಮಾನತೆ ಕಡಿಮೆಯಾಗಿಲ್ಲ. ಇದಕ್ಕೆ ಬಿಜೆಪಿ ನಾಯಕರಂತಹ ಜಾತಿ ಪಟ್ಟಭದ್ರರು ಕಾರಣ ಎನ್ನುವುದು ಗೋಡೆ ಬರಹದಷ್ಟು ಸ್ಪಷ್ಟ.

ಬಿಜೆಪಿಯ ಮಾತೃ ಸಂಸ್ಥೆಯಾದ ಆರ್ ಎಸ್ ಎಸ್ ಹುಟ್ಟಿನಿಂದಲೆ ವರ್ಣವ್ಯವಸ್ಥೆಯನ್ನು ಸಮರ್ಥಿಸಿಕೊಂಡು ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿ. ಸಾಮಾಜಿಕ ನ್ಯಾಯದಾನದ ಅವಕಾಶಗಳು ತೆರೆದುಕೊಂಡಾಗೆಲ್ಲ ಅದರ ವಿರುದ್ಧ ಹೋರಾಟ ನಡೆಸಿರುವುದು ಬಿಜೆಪಿ. ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿನ ಮೀಸಲಾತಿಯನ್ನು ವಿರೋಧಿಸಿ ದಿವಂಗತ ನ್ಯಾ.ರಾಮ ಜೋಯಿಸ್‌ರಿಂದ ಸುಪ್ರೀಂ ಕೋರ್ಟ್ ಗೆ ಕಟ್ಲೆ ಹಾಕಿಸಿದ್ದ ಬಿಜೆಪಿ ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ಮೀಸಲಾತಿಯನ್ನು ವಿರೋಧಿಸಿ ಚಳುವಳಿ ನಡೆಸಿದೆ.

ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರು ಮಂಡಲ್ ವರದಿ ಜಾರಿಗೊಳಿಸಿದ್ದಾಗ ಅಮಾಯಕ ವಿದ್ಯಾರ್ಥಿಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರಕ್ಕೆ ಪ್ರಚೋದಿಸಿದ್ದ ಬಿಜೆಪಿ, ಮಂಡಲ್ ವರದಿಗೆ ವಿರುದ್ಧವಾಗಿ ಕಮಂಡಲ ಚಳವಳಿಗೆ ಚಾಲನೆ ನೀಡಿ ಜನರ ತಲೆಯಲ್ಲಿ ಧರ್ಮದ ಅಫೀಮು ತುಂಬುವ ಪ್ರಯತ್ನ ಮಾಡಿತ್ತು. ಕೋಮುವಾದದ ಗುರಿ ಕೇವಲ ಅಲ್ಪಸಂಖ್ಯಾತರಲ್ಲ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ನಾಶವೂ ಅದರ ಗುರಿಯಾಗಿದೆ.

ಮೀಸಲಾತಿ ಫಲಾನುಭವಿಗಳಲ್ಲಿನ್ನ ಜಾಗೃತಿಯಿಂದಾಗಿ ಮೀಸಲಾತಿಯನ್ನು ನೇರವಾಗಿ ವಿರೋಧಿಸುವ ದಮ್ಮ-ತಾಕತ್ತು ಇಂದಿನ ಬಿಜೆಪಿ ನಾಯಕರಿಗೆ ಇಲ್ಲ. ಇದಕ್ಕಾಗಿ ಒಂದೆಡೆ ಮೀಸಲಾತಿಗೆ ಕಾನೂನಿನ ರಕ್ಷಣೆ ನೀಡಿರುವ ಸಂವಿಧಾನವನ್ನೇ ಬದಲಾಯಿಸುವ ಪ್ರಯತ್ನ ಮಾಡಿದರೆ ಇನ್ನೊಂದೆಡೆ ಮೀಸಲಾತಿ ಫಲಾನುಭವಿಗಳ ನಡುವೆಯೆ ಅಂತಃಕಲಹ ಏರ್ಪಡಿಸಿ ಸಾಮಾಜಿಕ ನ್ಯಾಯದ ಅಸ್ತ್ರವನ್ನು ಮೊಂಡಾಗಿಸುವ ಪ್ರಯತ್ನ ಮಾಡುತ್ತಿದೆ. ಮೀಸಲಾತಿಯ ಫಲಾನುಭವಿಗಳಾದ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯ ಇಂದು ಜಾಗೃತವಾಗಿದೆ. ಯಾರು ತಮ್ಮ ಶತ್ರುಗಳು ಮತ್ತು ಮಿತ್ರರು ಎನ್ನುವುದನ್ನು ಅವರು ಅರಿತುಕೊಂಡಿದ್ದಾರೆ. ಮೀಸಲಾತಿ ವಿರೋಧವನ್ನು ಅಂತರ್ಯದಲ್ಲಿ ಅಡಗಿಸಿಕೊಂಡು ಬಹಿರಂಗವಾಗಿ ಮೀಸಲಾತಿ ಪರ ಘೋಷಣೆ ಕೂಗಿದರೆ ನಂಬುವಷ್ಟು ನಮ್ಮ ಜನ ದಡ್ಡರಲ್ಲ. ಮೀಸಲಾತಿಯೂ ಸೇರಿದಂತೆ ಸಾಮಾಜಿಕ ನ್ಯಾಯದಾನದ ಅವಕಾಶಗಳನ್ನು ಕಾಲಕಾಲಕ್ಕೆ ಹೇಗೆ ಬಿಜೆಪಿ ಮತ್ತು ಸಂಘ ಪರಿವಾರ ಚಿವುಟಿಹಾಕಿದೆ ಎನ್ನುವುದನ್ನು ನಮ್ಮ ಜನ ನೋಡಿ, ಅನುಭವಿಸಿ ತಿಳಿದುಕೊಂಡಿದ್ದಾರೆ. ನಿಮ್ಮ ಹುಸಿ ಸಾಮಾಜಿಕ ನ್ಯಾಯದ ಘೋಷಣೆಗೆ ಅವರು ಮರುಳಾಗುವವರಲ್ಲ.

ಸಮಾನ ಅವಕಾಶ ಸಿಕ್ಕಿದೆಯೇ, ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲಿಕ್ಕಾಗಿಯೇ ಸುಪ್ರೀಂ ಕೋರ್ಟ್ ಜಾತಿ ಆಧಾರದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಬೇಕೆಂದು ಹೇಳಿದ್ದು. ಅದನ್ನು ನಮ್ಮ ಸರ್ಕಾರ ಕರ್ನಾಟಕದಲ್ಲಿ ಮಾಡಿ ತೋರಿಸಿದೆ. ಬಿಜೆಪಿ ನಾಯಕರಿಗೆ ಮತ್ತು ಕೇಂದ್ರದಲ್ಲಿರುವ ಅವರ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಮೊದಲು ಜಾತಿಗಣತಿಯನ್ನು ಶೀಘ್ರವಾಗಿ ದೇಶಾದ್ಯಂತ ನಡೆಸಿ ಮುಗಿಸಲಿ. ಮೀಸಲಾತಿ ಸಮಾಜದ ಕಟ್ಟಕಡೆಯ ಮನುಷ್ಯನನ್ನು ತಲುಪಿದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲು ಇದು ಅವಶ್ಯಕವಾಗಿದೆ.

ಮೀಸಲಾತಿ ಪ್ರಮಾಣವನ್ನು ಈಗಿನ ಶೇಕಡಾ 50ರಿಂದ ಶೇಕಡಾ 75ಕ್ಕೆ ಹೆಚ್ಚಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ನಮ್ಮ ನಾಯಕರಾದ ರಾಹುಲ್ ಗಾಂಧಿ ಯವರು ಬಹಿರಂಗ ಸಭೆಗಳಲ್ಲಿ ಮಾತ್ರವಲ್ಲ ಲೋಕಸಭೆಯಲ್ಲಿಯೂ ಹೇಳಿದ್ದಾರೆ. ಬಿಜೆಪಿ ನಾಯಕರಿಗೆ ಮೀಸಲಾತಿ ಬಗ್ಗೆ ಅಷ್ಟೊಂದು ಕಾಳಜಿ-ಬದ್ಧತೆ ಇದ್ದರೆ ಮೀಸಲಾತಿಯ ಪ್ರಮಾಣವನ್ನು ಈಗಿನ ಶೇಕಡಾ 50ರಿಂದ ಶೇಕಡಾ 75ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT