ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ದೆಹಲಿ ಪೊಲೀಸರು ನೊಟೀಸ್ ನೀಡಿರುವುದಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆಘಾತ ವ್ಯಕ್ತಪಡಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇದು ನನಗೆ ಆಘಾತಕಾರಿಯಾಗಿದೆ. ನನ್ನ ಸೋದರ ಮತ್ತು ನನಗೆ ಈ ಹಿಂದೆ ಸಮನ್ಸ್ ನೀಡಿದ್ದಾಗ ಜಾರಿ ನಿರ್ದೇಶನಾಲಯಕ್ಕೆ ಎಲ್ಲಾ ವಿವರಗಳನ್ನು ನೀಡಿದ್ದೆ. ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳು ಕಾಂಗ್ರೆಸ್ ಪಕ್ಷದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಕ್ಷದ ಸಂಕಷ್ಟದ ಸಮಯದಲ್ಲಿ, ನಮ್ಮಂತಹ ಕಾಂಗ್ರೆಸ್ಸಿಗರು ಟ್ರಸ್ಟ್‌ಗಳ ಮೂಲಕ ಆ ಸಂಸ್ಥೆಗಳಿಗೆ ಸಹಾಯ ಮಾಡಿದ್ದೆವು ಎಂದು ಸ್ಪಷ್ಟಪಡಿಸಿದ್ದಾರೆ.
ಇದಕ್ಕೆ ಪೊಲೀಸ್ ಪ್ರಕರಣದ ಅಗತ್ಯವಿಲ್ಲ. ನಾವು ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಹೋರಾಡುತ್ತೇವೆ. ಇದು ನನಗೆ ನೀಡುತ್ತಿರುವ ಕಿರುಕುಳ ನೀಡುವ ದುರುದ್ದೇಶ ಹೊರತು ಬೇರೇನೂ ಅಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಪ್ರಕರಣದಲ್ಲಿ ತಮಗೆ ಇಡಿ ನೋಟಿಸ್ ಬಂದ ಕೂಡಲೇ ಅಗತ್ಯವಿರುವ ಎಲ್ಲ ಮಾಹಿತಿ ಹಾಗೂ ಉತ್ತರಗಳನ್ನು ಈಗಾಗಲೇ ನೀಡಲಾಗಿದೆ. ಚಾರ್ಜ್‌ಶೀಟ್ ಕೂಡ ಸಲ್ಲಿಕೆಯಾಗಿದೆ. ಇದೀಗ ದೆಹಲಿ ಪೊಲೀಸರು ಈ ತಿಂಗಳ 19 ರೊಳಗೆ ಬಂದು ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಇದನ್ನು ಕಾನೂನಾತ್ಮಕವಾಗಿ ಪರಿಶೀಲಿಸುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಒಟ್ಟಾರೆ
ಈ ಬೆಳವಣಿಗೆಯನ್ನು ಕಿರುಕುಳ ನೀಡುವ ಯತ್ನ ಎಂದು ಬಣ್ಣಿಸಿರುವ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಅವರ ಬೆಂಬಲಿಗರಿಗೆ ಕಿರುಕುಳ ನೀಡಲು, ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ನನಗೆ ನಿನ್ನೆ ನೊಟೀಸ್ ಬಂದಿದೆ, ನನ್ನ ಸೋದರ ಡಿಕೆ ಸುರೇಶ್ ಅವರಿಗೂ ಒಂದು ನೋಟಿಸ್ ಬಂದಿದೆ. ನಾವು ಅದನ್ನು ಪರಿಶೀಲಿಸುತ್ತೇವೆ ಎಂದರು,
ಈ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW)ವಿವರವಾದ ಹಣಕಾಸು ಮತ್ತು ವಹಿವಾಟಿನ ಮಾಹಿತಿ ಕೋರಿ ಡಿ.ಕೆ. ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.