ಬೆಂಗಳೂರು: "ಶೂನ್ಯ ಬಡ್ಡಿಯಲ್ಲಿ ಚಿನ್ನದ ಸಾಲ" ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಅವರಿಂದ 1.8 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬೆಂಗಳೂರು ನಗರ ಪೊಲೀಸರ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಇಬ್ಬರು ವಂಚಕರನ್ನು ಬಂಧಿಸಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಪ್ರಮುಖ ಆರೋಪಿ ವಿದ್ಯಾರಣಪುರದಲ್ಲಿ ಆಭರಣ ಅಂಗಡಿಯನ್ನು ತೆರೆದು, ಸಾರ್ವಜನಿಕರನ್ನು ಆಕರ್ಷಿಸಲು "ಶೂನ್ಯ ಬಡ್ಡಿಯಲ್ಲಿ ಚಿನ್ನದ ಸಾಲ" ಎಂಬ ಜಾಹೀರಾತು ನೀಡಿದ್ದರು.
ಸುಳ್ಳು ಜಾಹೀರಾತನ್ನು ನಂಬಿ, ಅನೇಕ ಗ್ರಾಹಕರು ತಮ್ಮ ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿದ್ದರು.
ಆದಾಗ್ಯೂ, ಅವರಿಗೆ ಅಡವಿಟ್ಟ ಚಿನ್ನದ ನಿಜವಾದ ಮೌಲ್ಯದ ಶೇ. 50-60 ರಷ್ಟು ಹಣವನ್ನು ಮಾತ್ರ ನೀಡಲಾಗಿದೆ ಮತ್ತು ಕನಿಷ್ಠ 11 ತಿಂಗಳವರೆಗೆ ತಮ್ಮ ಆಭರಣಗಳನ್ನು ಹಿಂಪಡೆಯಬೇಡಿ ಎಂದು ಹೇಳಲಾಗಿದೆ.
ಈ ಅವಧಿಯಲ್ಲಿ, ಆರೋಪಿಗಳು ಅಡವಿಟ್ಟ ಚಿನ್ನವನ್ನು ಮತ್ತೊಂದು ಆಭರಣ ವ್ಯಾಪಾರಿಗೆ ಅಕ್ರಮವಾಗಿ ಮಾರಾಟ ಮಾಡಿ, ಶೇ. ಶೇಕಡಾ 40-50 ರಷ್ಟು ಲಾಭ ಗಳಿಸಿದ್ದಾರೆ.
ಈ ವಂಚನೆಯ ಯೋಜನೆಯಡಿಯಲ್ಲಿ, ಒಟ್ಟು ನಾಲ್ಕು ಕೆಜಿ ಚಿನ್ನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ.
11 ತಿಂಗಳ ನಂತರ, ಆರೋಪಿ ಅಂಗಡಿಯನ್ನು ಮುಚ್ಚಿ ಪರಾರಿಯಾಗಿದ್ದು, ವಂಚನೆ ಮಾಡಿರುವುದು ದೃಢಪಟ್ಟಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆ, ಬೆಂಗಳೂರಿನ ಪೀಣ್ಯದಲ್ಲಿರುವ ಅವರ ನಿವಾಸದಿಂದ ಪ್ರಮುಖ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು. ನಂತರ HRBR ಲೇಔಟ್‌ನಲ್ಲಿರುವ ಆಭರಣ ಅಂಗಡಿಯಿಂದ ಅಕ್ರಮವಾಗಿ ಒತ್ತೆ ಇಡಲಾಗಿದ್ದ 1.478 ಗ್ರಾಂ ಚಿನ್ನಾಭರಣಗಳು ಮತ್ತು ಐದು ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಶಪಡಿಸಿಕೊಂಡ ಆಭರಣಗಳ ಒಟ್ಟು ಮೌಲ್ಯ ಸುಮಾರು 1.8 ಕೋಟಿ ರೂ. ಎಂದು ಅವರು ಹೇಳಿದ್ದಾರೆ.
ಪ್ರಕರಣದ ಎರಡನೇ ಆರೋಪಿಯನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಆರೋಪಿಗಳು ಮಂಗಳೂರು ಜಿಲ್ಲೆ ಮತ್ತು ಕೇರಳದಲ್ಲಿ ಇದೇ ರೀತಿಯ ವಂಚನೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಅಧಿಕಾರಿ ಹೇಳಿದ್ದಾರೆ.