ಬೆಂಗಳೂರು: ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ(ಲೀಪ್ )ಅಡಿಯಲ್ಲಿ ಕಲಬುರಗಿಯಲ್ಲಿ ಉದ್ಯಮಶೀಲತಾ ಕೇಂದ್ರವನ್ನು ಪ್ರಾರಂಭಿಸುವುದಾಗಿ ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಹೇಳಿದ್ದಾರೆ.
ಸೋಮವಾರ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಒಂದು ಸಾವಿರ ಕೋಟಿ ರೂ. ವೆಚ್ಚದ ಐದು ವರ್ಷಗಳ ಉಪಕ್ರಮವಾಗಿದೆ. ಪ್ರಾದೇಶಿಕ ಉದ್ಯಮಶೀಲತೆಗೆ ಚೇತರಿಕೆ ನೀಡಲು, ನಾವೀನ್ಯತೆ ವಿಕೇಂದ್ರೀಕರಿಸಲು ಮತ್ತು ರಾಜ್ಯದ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಲಸ್ಟರ್‍ಗಳಲ್ಲಿ ಆರ್ಥಿಕ ಬೆಳವಣಿಗೆ ತ್ವರಿತಗೊಳಿಸಲು ಇದು ನೆರವಾಗಲಿದೆ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದಾದ್ಯಂತ ಕೃಷಿ-ತಂತ್ರಜ್ಞಾನ, ಗ್ರಾಮೀಣ ನಾವೀನ್ಯತೆ ಮತ್ತು ಯುವಜನರಲ್ಲಿ ಉದ್ಯಮಶೀಲತೆ ಉತ್ತೇಜಿಸಲು 15 ಸಾವಿರ ಚದರ ಅಡಿ ವಿಸ್ತೀರ್ಣದ ಹೊಸ ನವೋದ್ಯಮ ಕೇಂದ್ರ ಮತ್ತು ಪ್ರಾಥಮಿಕ ಮಾದರಿ ಪ್ರಯೋಗಾಲಯ ಸ್ಥಾಪನೆಯಾಗಲಿದ್ದು. ಮುಂದಿನ ವರ್ಷದ ಜನವರಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದ್ದಾರೆ.
ಕೃಷಿಕಲ್ಪ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತಿರುವ ಉದ್ಯಮಶೀಲತಾ ಕೇಂದ್ರವು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಾವೀನ್ಯತೆ ವ್ಯವಸ್ಥೆ ಬಲಪಡಿಸುವ ಗುರಿ ಹೊಂದಿದೆ. ಕೃಷಿ, ಸಂಬಂಧಿತ ವಲಯಗಳು, ಗ್ರಾಮೀಣ ನಾವೀನ್ಯತೆ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸಲಿದೆ.
ಈ ಉಪಕ್ರಮದ ಭಾಗವಾಗಿ, ಕಲಬುರಗಿ ಜಿಲ್ಲಾಡಳಿತವು 15 ಸಾವಿರ ಚದರ ಅಡಿ ವಿಸ್ತೀರ್ಣದ ಬಳಕೆಗೆ ಸಿದ್ಧವಾದ ಸ್ಥಳಾವಕಾಶ ಹಂಚಿಕೆ ಮಾಡಿದೆ. ಇದು ಈ ಪ್ರದೇಶಕ್ಕೆ ಮೀಸಲಾದ ನವೋದ್ಯಮ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ನವೋದ್ಯಮಗಳ ಸಂಸ್ಥಾಪಕರು, ಕೃಷಿ ಉದ್ಯಮಿಗಳು, ನಾವೀನ್ಯಕಾರರು ಮತ್ತು ಪೂರಕ ಉದ್ದಿಮೆಗಳ ಪಾಲುದಾರರಿಗೆ ಅಗತ್ಯ ನೆರವು ಒದಗಿಸಲಿದೆ ಎಂದು ವಿವರಿಸಿದ್ದಾರೆ.
ಈ ಕೇಂದ್ರವು ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ ಮತ್ತು ಹಣಕಾಸು ನೆರವಿನ ಲಭ್ಯತೆ ಚೌಕಟ್ಟು ಆಧರಿಸಿ ಕಾರ್ಯನಿರ್ವಹಿಸಲಿದೆ, ನವೋದ್ಯಮಗಳ ವೇಗವರ್ಧನೆ, ಸಾಮರ್ಥ್ಯ ವೃದ್ಧಿ ಮತ್ತು ಉದ್ಯಮಶೀಲತೆಗೆ ಉತ್ತೇಜನ ತತ್ವಗಳಡಿ ಇದು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಮೂಲಸೌಲಭ್ಯ ಮತ್ತು ಮಾರುಕಟ್ಟೆ ಲಭ್ಯತೆ ಅಡೆತಡೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಮೂಲಕ ನವೋದ್ಯಮಗಳು ಸ್ಥಳೀಯವಾಗಿ ವಿಶ್ವ ದರ್ಜೆಯ ನಾವೀನ್ಯತೆಗಳನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ಪರೀಕ್ಷಿಸಲು ಅನುವು ಮಾಡಿಕೊಡಲು ಅತ್ಯಾಧುನಿಕ ಮೂಲಮಾದರಿ ಪ್ರಯೋಗಾಲಯವನ್ನು (ಪ್ರೊಟೊಟೈಪಿಂಗ್ ಲ್ಯಾಬ್) ಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕಲಬುರಗಿಯು ಗ್ರಾಮೀಣ ಕರ್ನಾಟಕದ ಬಳಕೆಯಾಗದ ಅಪಾರ ಸಾಮರ್ಥ್ಯ ವನ್ನು ಪ್ರತಿನಿಧಿಸುತ್ತದೆ. ಈ ಪ್ರದೇಶದಲ್ಲಿ ಶೇ.70ಕ್ಕೂ ಹೆಚ್ಚು ಉದ್ಯೋಗಿಗಳು ಕೃಷಿ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ. ‘ಲೀಪ್’ ಉಪಕ್ರಮದಡಿ ಮತ್ತು ಹೊಸ ಉದ್ಯಮಶೀಲತಾ ಕೇಂದ್ರದ ಮೂಲಕ, ನಾವು ತಂತ್ರಜ್ಞಾನ, ನಾವೀನ್ಯತೆ ಮತ್ತು ಅವಕಾಶಗಳನ್ನು ನೇರವಾಗಿ ನಮ್ಮ ಸಮುದಾಯಗಳಿಗೆ ತಲುಪಿಸುವ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವಣ ಅಂತರವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.
ರಾಜ್ಯದ ಐಟಿ-ಬಿಟಿ ವಲಯದ ವಹಿವಾಟು 1.5 ಲಕ್ಷ ಕೋಟಿ ರೂ. ದಾಟಿದೆ. ‘ಲೀಪ್’ ಉಪಕ್ರಮದಡಿ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯೊಂದಿಗೆ, ಈ ಶ್ರೇಷ್ಠತಾ ಕೇಂದ್ರವು ಕಲಬುರಗಿಯ ಯುವಕರಿಗೆ ಕೃಷಿ-ತಂತ್ರಜ್ಞಾನ, ಡೀಪ್-ಟೆಕ್ ಮತ್ತು ಸಂಬಂಧಿತ ವಲಯದ ನಾವೀನ್ಯತೆಗಳ ಮೂಲಕ ಸುಸ್ಥಿರ ಜೀವನೋಪಾಯ ನಿರ್ಮಿಸಲು ಶಕ್ತಿ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ನ ಸಿಇಒ ಸಂಜೀವ್ ಕುಮಾರ್ ಗುಪ್ತಾ ಅವರು ಮಾತನಾಡಿ, ಡೀಪ್-ಟೆಕ್, ಐಟಿ/ಐಟಿಇಎಸ್ ಮತ್ತು ಕೃಷಿ-ತಂತ್ರಜ್ಞಾನವನ್ನು ಸಂಯೋಜಿಸುವ, ಸಮಗ್ರ, ಭವಿಷ್ಯಕ್ಕೆ ಸಿದ್ಧವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.