ಮೈಸೂರು: 2019 ರಿಂದ 2023ರ ವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲಾ ಸೈಟುಗಳನ್ನು ರದ್ದುಪಡಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮುಡಾ ಸೈಟು ಹಂಚಿಕೆ ಹಗರಣ ಸಂಬಂಧ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ದಿಂದ 50:50 ಅನುಪಾತದಲ್ಲಿ ಸೈಟು ಪಡೆದ ಗ್ರಾಹಕರಿಗೆ ಶಾಕ್ ಕೊಟ್ಟಿದ್ದಾರೆ. 2019 ರಿಂದ 2023ರ ವರೆಗಿನ ಎಲ್ಲಾ 50:50 ಸೈಟುಗಳನ್ನ ರದ್ದುಪಡಿಸಲಾಗಿದೆ. 1,100 ಕ್ಕೂ ಸೈಟುಗಳನ್ನ ರದ್ದುಮಾಡಲಾಗಿದೆ ಎಂದಿದ್ದಾರೆ.
ಸಂಪೂರ್ಣ ಆದೇಶವನ್ನ ನಾವು ಪ್ರಾಧಿಕಾರಕ್ಕೆ ಕಳುಹಿಸಿದ್ದೇವೆ. 2018 ರ ಹಿಂದೆ ಸೈಟು ಪಡೆದಿರುವ ಬಗ್ಗೆಯೂ ಪರಿಶೀಲನೆ ನಡೆದಿದೆ. ಅಲ್ಲಿ ಅಕ್ರಮಗಳಾಗಿದ್ದರೇ ಅವುಗಳನ್ನು ರದ್ದು ಮಾಡುತ್ತೇವೆ. ರಸ್ತೆಗೆ ತಮ್ಮ ಜಮೀನು ಕೊಟ್ಟು ಪರಿಹಾರ ಪಡೆದವರು ಕೂಡ ನಿವೇಶನ ಪಡೆದಿದ್ದಾರೆ. ಸಾಕಷ್ಟು ಅಕ್ರಮ ನಡೆದಿದೆ, ಹೀಗಾಗಿ ಎಲ್ಲವನ್ನೂ ರದ್ದು ಮಾಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
50:50 ಸೈಟುಗಳು ಮತ್ತು ಸೈಟುಗಳಲ್ಲಿ ಮನೆ ಕಟ್ಟಿದವರ ಲಿಸ್ಟ್ ತರಿಸುತ್ತಿದ್ದೇನೆ. ಸದ್ಯಕ್ಕೆ ಎಲ್ಲವನ್ನೂ ರದ್ದು ಮಾಡಲಾಗಿದೆ. ಕಾನೂನಾತ್ಮಕ ಹೋರಾಟ ಇರುವ ಸೈಟುಗಳ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.