ಬೆಂಗಳೂರು: ಕರ್ನಾಟಕ ಸರ್ಕಾರ ರಂಜಾನ್ ತಿಂಗಳಲ್ಲಿ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಾಲಾ ಸಮಯವನ್ನು ಪರಿಷ್ಕರಿಸಿದ್ದು, ಬೆಳಿಗ್ಗೆ 8 ರಿಂದ ಮಧ್ಯಾಹ್ನ 12.45 ರವರೆಗೆ ಮಾತ್ರ ತರಗತಿ ನಡೆಸಲು ಆದೇಶಿಸಲಾಗಿದೆ.
ಕರ್ನಾಟಕ ಸರ್ಕಾರ ರಂಜಾನ್ ತಿಂಗಳಲ್ಲಿ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಾಲಾ ಸಮಯವನ್ನು ಪರಿಷ್ಕರಿಸಿದೆ.
ರಾಜ್ಯದ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ನಿರ್ದೇಶನದ ಪ್ರಕಾರ, ಶಾಲೆಗಳು ಈಗ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12:45 ರವರೆಗೆ ಕಾರ್ಯನಿರ್ವಹಿಸುತ್ತವೆ. ಇದು ರಂಜಾನ್ ಆರಂಭದಿಂದ (ಫೆಬ್ರವರಿ ಮಧ್ಯದಿಂದ ಬಹುಶಃ) ಮಾರ್ಚ್ 20 ರವರೆಗೆ ಜಾರಿಯಲ್ಲಿರುತ್ತದೆ ಎನ್ನಲಾಗಿದೆ.
ಸರ್ಕಾರದ ಪತ್ರದಲ್ಲಿ ರಂಜಾನ್ ಮಾಸದ ಪ್ರಯುಕ್ತ ರಾಜ್ಯದಲ್ಲಿನ ಉರ್ದು ಮಾಧ್ಯಮದ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳನ್ನು ಬೆಳಿಗ್ಗೆ 8-00 ಗಂಟೆಯಿಂದ ಮಧ್ಯಾಹ್ನ 12.45 ರವರೆಗೆ ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ ಒಂದು ತಿಂಗಳವರೆಗೆ ಮಾತ್ರ ನಡೆಸಲು ಈ ಹಿಂದೆ ದಿನಾಂಕ: 31-10-2002 ರಲ್ಲಿ ಹೊರಡಿಸಲಾಗಿದ್ದ ಸ್ಟ್ಯಾಂಡಿಂಗ್ ಆರ್ಡರ್ (Standing Order) ನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿರುತ್ತದೆ.
ಮುಂದುವರೆದು, ಉಲ್ಲೇಖಿತ-(2) ರ ಪತ್ರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಘ(ರಿ), ಬೆಂಗಳೂರು ರವರು ಮನವಿ ಮಾಡಿಕೊಂಡಿದ್ದು ಅದರಂತೆ ಪರಿಶೀಲಿಸಿ ಈ ಆದೇಶ ನೀಡಿದೆ.
ಆದೇಶದಲ್ಲೇನಿದೆ?
2025-26ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳು ರಂಜಾನ್ ತಿಂಗಳು ಪ್ರಾರಂಭವಾದ ದಿನಾಂದಿಂದ ದಿನಾಂಕ: 20-03-2026ರವರೆಗೆ ಮಾತ್ರ ಶಾಲಾ ಅವಧಿಯ ವೇಳಾಪಟ್ಟಿಯ ಬದಲಾವಣೆ ಮಾಡಲಾಗಿದೆ.
ಈ ವ್ಯವಸ್ಥೆಯಿಂದ ಶಾಲೆಗಳ ಕೆಲಸದ ಅವಧಿಯಲ್ಲಿ ಕಡಿಮೆ ಆಗುವ ಅವಧಿಯನ್ನು ಇತರೇ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಸರಿದೂಗಿಸಿಕೊಳ್ಳತಕ್ಕದ್ದು. ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ರಂಜಾನ್ ಮಾಹೆಯಲ್ಲಿ ಉಪವಾಸ ವ್ರತವನ್ನು ಕೈಗೊಳ್ಳುವುದರಿಂದ ಅವರುಗಳಿಗೆ ರಂಜಾನ್ ಮಾಹೆಯಲ್ಲಿ ಪ್ರತಿದಿನ ಸಂಜೆ ಅರ್ಧ ಗಂಟೆ ಮುಂಚಿತವಾಗಿ ತೆರಳಲು ಅನುಮತಿಸಬಹುದು.
2025-26ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಪರೀಕ್ಷಾ ವೇಳಾಪಟ್ಟಿಯಂತೆ ನಡೆಸುವಂತೆ ಕ್ರಮವಹಿಸುವುದು. 2025-26ನೇ ಸಾಲಿಗೆ ನಿಗದಿಪಡಿಸಿರುವ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ಕರ್ತವ್ಯ ನಿರತ ಉರ್ದು ಮಾಧ್ಯಮದ ಶಿಕ್ಷಕರಿಗೆ ಈ ಆದೇಶವು ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ.
ತುಷ್ಟೀಕರಣ ರಾಜಕೀಯ: BJP ಟೀಕೆ
ಭಾರತೀಯ ಜನತಾ ಪಕ್ಷವು ಈ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿದ್ದು, ಕಾಂಗ್ರೆಸ್ "ತುಷ್ಟೀಕರಣ ರಾಜಕೀಯ"ದಲ್ಲಿ ತೊಡಗಿದೆ. ಯಾವುದೇ ಹಿಂದೂ ಹಬ್ಬಕ್ಕೂ ಅದು ಅದೇ ಕ್ರಮವನ್ನು ತೆಗೆದುಕೊಳ್ಳುತ್ತದೆಯೇ ಎಂದೂ ಬಿಜೆಪಿ ಪ್ರಶ್ನಿಸಿದೆ.
"ಇದು ಅವರ ತುಷ್ಟೀಕರಣ ರಾಜಕೀಯವನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಹಿಂದೂ ಧರ್ಮದ ವಿರುದ್ಧ ಹೋಗುತ್ತದೆ. ಸಿದ್ದರಾಮಯ್ಯ ಕೂಡ ಅದನ್ನೇ ಮಾಡುತ್ತಿದ್ದಾರೆ... ನೀವು ರಂಜಾನ್‌ಗೆ ವಿಶೇಷ ಗಮನ ನೀಡಲಿದ್ದರೆ, ಹಿಂದೂಗಳಿಗೆ ಏಕೆ ಗಮನ ನೀಡಬಾರದು?... ಈ ಸರ್ಕಾರ ಮುಸ್ಲಿಮರಿಗೆ ಮಾತ್ರ, ಮತಗಳ ಲಾಭಕ್ಕಾಗಿ ಎಂದು ಕರ್ನಾಟಕದ ಜನರು ಭಾವಿಸುತ್ತಾರೆ' ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ್ಲಾ ಪ್ರಶ್ನಿಸಿದ್ದಾರೆ.
"ಈಗ, ಕರ್ನಾಟಕದ ಶಾಲೆಗಳು ರಂಜಾನ್ ಸಮಯದಲ್ಲಿ ವಿಭಿನ್ನ ಸಮಯಗಳನ್ನು ಹೊಂದಿರುತ್ತವೆ ಎಂದು ನಾವು ನೋಡುತ್ತಿದ್ದೇವೆ. ಆದರೆ ನೀವು (ಕರ್ನಾಟಕ ಸರ್ಕಾರ) ಯಾವುದೇ ಹಿಂದೂ ಹಬ್ಬದ ಸಮಯದಲ್ಲಿ ಅಂತಹ ಯಾವುದೇ ರಿಯಾಯಿತಿಗಳನ್ನು ನೀಡಿದ್ದೀರಾ? ರಂಜಾನ್ ಸಮಯದಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಬೇಗನೆ ಹೊರಡಬಹುದು ಎಂದು ನೀವು ಹೇಳುತ್ತಿದ್ದೀರಿ, ಆದರೆ ನವರಾತ್ರಿಯ ಸಮಯದಲ್ಲಿ ನೀವು ಅದಕ್ಕೆ ಅವಕಾಶ ನೀಡುತ್ತೀರಾ? ಕಾಂಗ್ರೆಸ್ ಯಾವಾಗಲೂ ತನ್ನ ಮತಬ್ಯಾಂಕ್ ಅನ್ನು ಮೊದಲು ಇಡುತ್ತದೆ. ಸಂವಿಧಾನದ ಪ್ರಕಾರ ನ್ಯಾಯಯುತವಾಗಿ ಮತ್ತು ಸಮಾನವಾಗಿ ಕೆಲಸಗಳನ್ನು ಮಾಡುವ ದೃಷ್ಟಿಕೋನ ಅವರಿಗೆ ಇಲ್ಲ. ಇದು ಕರ್ನಾಟಕದಲ್ಲಿ ಮತ್ತೆ ಮತ್ತೆ ಕಂಡುಬಂದಿದೆ." ಪೂನವಾಲ್ಲಾ ತಿಳಿಸಿದರು.
ಬಿಜೆಪಿ ಸಮಾನತೆಗೆ ವಿರುದ್ಧ: ಪರಮೇಶ್ವರ್ ಟೀಕೆ
ಇನ್ನು ಕಾಂಗ್ರೆಸ್ ನಾಯಕರು ಬಿಜೆಪಿಯ ವಿರೋಧವನ್ನು ತಳ್ಳಿಹಾಕಿದ್ದು, ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ ಅವರು 'ಬಿಜೆಪಿ ಜನರನ್ನು ಸಮಾನವಾಗಿ ನಡೆಸಿಕೊಳ್ಳುವುದನ್ನು ವಿರೋಧಿಸುತ್ತದೆ' ಎಂದು ಆರೋಪಿಸಿದ್ದಾರೆ.
"ಈ ಜನರನ್ನು ಸಾವಿರಾರು ವರ್ಷಗಳಿಂದ ನಿರ್ಲಕ್ಷಿಸಲಾಗಿದೆ. ಅವರು ಸಮಾನರಾಗಬೇಕೆಂದು ನೀವು ಬಯಸುವುದಿಲ್ಲವೇ?... ಇದನ್ನು ಸಹಿಸದಿದ್ದರೆ, ಅವರು ಜನರನ್ನು ಸಮಾನವಾಗಿ ನಡೆಸಿಕೊಳ್ಳುವುದನ್ನು ವಿರೋಧಿಸುತ್ತಾರೆ ಎಂದರ್ಥ" ಎಂದು ಅವರು ಹೇಳಿದರು.
ಇದೇ ವಿಚಾರವಾಗಿ ಮಾತನಾಡಿದ ಕರ್ನಾಟಕದ ಸಚಿವ ಸಂತೋಷ್ ಲಾಡ್, "ಅವರಿಗೆ ಮಾತನಾಡಲು ದೊಡ್ಡ ಸಮಸ್ಯೆಗಳಿವೆ. ಅವರು ಇರಾನ್ ಬಗ್ಗೆ ಮಾತನಾಡಬೇಕು... ಅವರು ಉರ್ದು, ಬಾಂಗ್ಲಾದೇಶ, ಪಾಕಿಸ್ತಾನ, ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡಲು ಬಯಸುತ್ತಾರೆ... ಹಾಗಾದರೆ ಅವರು ಬಾಂಗ್ಲಾದೇಶಕ್ಕೆ 50 ರೂ.ಗೆ ಇಂಧನ ಏಕೆ ನೀಡುತ್ತಿದ್ದಾರೆ?... ಈಗ ಓಲೈಕೆ ಮಾಡುವವರು ಯಾರು?" ಎಂದು ಪ್ರಶ್ನಿಸಿದ್ದಾರೆ.