

ಮುಂಬೈ: ಸತತ 2ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ಶುಕ್ರವಾರ ಷೇರುಮಾರುಕಟ್ಟೆ ಉಭಯ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.08ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.02ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 827.57ಅಂಕಗಳ ಏರಿಕೆಯೊಂದಿಗೆ 77,569.39 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 244.10 ಅಂಕಗಳ ಏರಿಕೆಯೊಂದಿಗೆ 24,206.90 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಐಟಿ, ಬ್ಯಾಂಕಿಂಗ್ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್, ಟೆಕ್ ಮಹೀಂದ್ರಾ, ಭಾರತ್ ಎಲೆಕ್ಟ್ರಾನಿಕ್ಸ್, ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ಇನ್ಫೋಸಿಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಎಟರ್ನಲ್, ಭಾರ್ತಿ ಏರ್‌ಟೆಲ್, ಸನ್ ಫಾರ್ಮಾ ಮತ್ತು ಟ್ರೆಂಟ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
ಟಿಸಿಎಸ್ ಲಾಭ
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಷೇರುಗಳು ಶೇ.1ರಷ್ಟು ಏರಿಕೆ ಕಂಡವು. ದೇಶದ ಅತಿದೊಡ್ಡ ಐಟಿ ಸೇವಾ ಸಂಸ್ಥೆಯಾದ ಟಿಸಿಎಸ್, ಜೂನ್ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ಶೇ.4.61ರಷ್ಟು ಏರಿಕೆಯಾಗಿ 13,349 ಕೋಟಿ ರೂಗೆ ತಲುಪಿದೆ ಎಂದು ಗುರುವಾರ ಪ್ರಕಟಿಸಿತ್ತು. ಅಲ್ಲದೆ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ತಾತ್ಕಾಲಿಕವಾಗಿ ಕುಂಠಿತಗೊಂಡಿದ್ದ ಬೇಡಿಕೆ ಪ್ರಸಕ್ತ ತ್ರೈಮಾಸಿಕದಲ್ಲಿ ಮತ್ತೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಕಂಪನಿ ತಿಳಿಸಿದೆ.
ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಗುರುವಾರ, ಇರಾನ್‌ನೊಂದಿಗಿನ ಬಾಕಿ ಉಳಿದಿರುವ ವಿಷಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಾಷಿಂಗ್ಟನ್ ಬದ್ಧವಾಗಿದೆ ಹಾಗೂ ಇತ್ತೀಚಿನ ಉದ್ವಿಗ್ನತೆಯ ನಡುವೆಯೂ ತಾಂತ್ರಿಕ ಮಟ್ಟದ ಮಾತುಕತೆಗಳು ಮುಂದುವರಿದಿವೆ ಎಂದು ಹೇಳಿದ ಬಳಿಕ ಹೂಡಿಕೆದಾರರ ವಿಶ್ವಾಸ ಹೆಚ್ಚಿದ್ದು ಇದು ಇಂದಿನ ಚೇತೋಹಾರಿ ವಹಿವಾಟಿಗೆ ಕಾರಣಗಳಲ್ಲಿ ಒಂದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.