ಬೆಂಗಳೂರು: ಮನೆಯೊಂದರಲ್ಲಿ LPG ಸಿಲಿಂಡರ್ ಸ್ಫೋಟಗೊಂಡ ಕಾರಣ ಭಾರೀ ಬೆಂಕಿ ಉಂಟಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ನಗರದ ಕೆಆರ್ ಪುರಂ ವ್ಯಾಪ್ತಿಯ ಮಂಜುನಾಥ ಲೇಔಟ್‌ನಲ್ಲಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಸ್ಫೋಟದಲ್ಲಿ ಮನೆ ಮಾಲೀಕರಾದ ಪೂರ್ಣಿಮಾ (46) ಮತ್ತು ಪಕ್ಕದ ಮನೆಯ ಬಾಡಿಗೆದಾರ ವೆಂಕಟೇಶ್ (40) ಅವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಮನೆಯೊಂದರಿಂದ ಅನಿಲ ಸೋರಿಕೆ ವಾಸನೆ ಬರುತ್ತಿರುವುದಾಗಿ ವೆಂಕಟೇಶ್ ಪೂರ್ಣಿಮಾಗೆ ಹೇಳಿದ್ದಾರೆ.
ಬಳಿಕ ಮನೆಗೆ ಬಂದ ಪೂರ್ಣಿಮಾ ಲೈಟ್ ಆನ್ ಮಾಡಿದ ನಂತರ ಬೆಂಕಿ ಹೊತ್ತಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಪೂರ್ಣಿಮಾ ಅವರಿಗೆ ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ವೆಂಕಟೇಶ್ ಅವರಿಗೂ ಗಂಭೀರ ಗಾಯಗಳಾಗಿವೆ. ಇವರಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಅಂತಸ್ತಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೊದಲ ಮನೆಯಲ್ಲಿ ಪೂರ್ಣಿಮಾ ವಾಸವಿದ್ದರು. ಮೇಲಿನ ಮಹಡಿಯಲ್ಲಿ ಇತರ ಎರಡು ಮನೆಗಳಿವೆ. ಘಟನೆ ಸಂಭವಿಸಿದಾಗ ಮನೆಯ ಬಾಡಿಗೆದಾರರು ಕೆಲಸಕ್ಕೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಈ ಸಂಬಂಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.