ಸಂಗ್ರಹ ಚಿತ್ರ 
ರಾಜ್ಯ

ಉಪ ಲೋಕಾಯುಕ್ತರ ವಿರುದ್ಧ ಅವಹೇಳನಕಾರಿ ಹೇಳಿಕೆ; ಆರೋಪಿಗೆ 6 ತಿಂಗಳ ಜೈಲು ಶಿಕ್ಷೆ, 5 ಸಾವಿರ ರೂ. ದಂಡ..!

ಆರೋಪಿಯು 2023ರ ಫೆಬ್ರವರಿಯಲ್ಲಿ ಬರೆದ ಎರಡು ಪತ್ರಗಳು ಹಾಗೂ 2023ರ ಮೇ 11ರಂದು ನೀಡಲಾದ ಶೋಕಾಸ್ ನೋಟಿಸ್‌ಗೆ ಸಲ್ಲಿಸಿದ ಉತ್ತರದಲ್ಲಿ ಬಳಸಿದ ಪದಗಳು ಮತ್ತು ಆರೋಪಗಳು ಉಪ ಲೋಕಾಯುಕ್ತ ಹಾಗೂ ಲೋಕಾಯುಕ್ತ ಸಂಸ್ಥೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಮಾಡಲಾಗಿದೆ.

ಬೆಂಗಳೂರು: ಉಪ ಲೋಕಾಯುಕ್ತ ಹಾಗೂ ಲೋಕಾಯುಕ್ತ ಸಂಸ್ಥೆಯ ವಿರುದ್ಧ ನಿಂದನಾತ್ಮಕ ಮತ್ತು ಅವಹೇಳನಕಾರಿ ಪತ್ರಗಳನ್ನು ಬರೆದಿದ್ದ ಬಳ್ಳಾರಿ ನಿವಾಸಿ ಎಸ್.ಜಿ. ಶಂಕರ್ ಎಂಬುವವರಿಗೆ ಬೆಂಗಳೂರಿನ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಬೆಂಗಳೂರಿನ 68ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಈ ಮಹತ್ವದ ಆದೇಶ ಪ್ರಕಟಿಸಿದೆ. ಒಂದು ವೇಳೆ ದೋಷಿಯು 5,000 ರೂಪಾಯಿ ದಂಡ ಪಾವತಿಸಲು ವಿಫಲರಾದರೆ, ಜೈಲು ಶಿಕ್ಷೆಯನ್ನು ಇನ್ನೂ ಎರಡು ತಿಂಗಳು ವಿಸ್ತರಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ರಶ್ಮಿ ಎಂ. ಅವರು, "ಉಪ ಲೋಕಾಯುಕ್ತರು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿದ್ದು, ಪ್ರಾಮಾಣಿಕತೆ, ನಿಷ್ಠೆ ಹಾಗೂ ಪರಿಶ್ರಮಕ್ಕೆ ಹೆಸರುವಾಸಿಯಾಗಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ಆರೋಪಿಯು ಉದ್ದೇಶಪೂರ್ವಕವಾಗಿ ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಿ ಲೋಕಾಯುಕ್ತ ಸಂಸ್ಥೆಯ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ" ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

ಆರೋಪಿಯು 2023ರ ಫೆಬ್ರವರಿಯಲ್ಲಿ ಬರೆದ ಎರಡು ಪತ್ರಗಳು ಹಾಗೂ 2023ರ ಮೇ 11ರಂದು ನೀಡಲಾದ ಶೋಕಾಸ್ ನೋಟಿಸ್‌ಗೆ ಸಲ್ಲಿಸಿದ ಉತ್ತರದಲ್ಲಿ ಬಳಸಿದ ಪದಗಳು ಮತ್ತು ಆರೋಪಗಳು ಉಪ ಲೋಕಾಯುಕ್ತ ಹಾಗೂ ಲೋಕಾಯುಕ್ತ ಸಂಸ್ಥೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಮಾಡಲಾಗಿದೆ ಎಂಬುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದು ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಸೆಕ್ಷನ್ 17(2) ಅಡಿಯಲ್ಲಿ ಅಪರಾಧವಾಗಿದ್ದು, ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.

ಏನಿದು ಪ್ರಕರಣ..?

ಜಿ. ಶಂಕರ್ ಅವರು 2015ರಲ್ಲಿ ಬಳ್ಳಾರಿ ಜಿಲ್ಲೆಯ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಹಾಯಕ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. 2012ರಲ್ಲಿ ಬ್ರಾಹ್ಮಣರ ಬೀದಿಯ ದೇವಸ್ಥಾನದ ಸಮೀಪ ತಮ್ಮ ತಂದೆಯ ಅಂಗಡಿ ಸೇರಿದಂತೆ ಹಲವು ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಅವರು ದೂರಿದ್ದರು.

ದೂರಿನ ಆಧಾರದ ಮೇಲೆ ನೋಟಿಸ್ ಜಾರಿಯಾದ ಬಳಿಕ, ಸಹಾಯಕ ಆಯುಕ್ತರು 2017ರ ಜುಲೈ 20ರಂದು ಉಪ ಲೋಕಾಯುಕ್ತರಿಗೆ ವರದಿ ಸಲ್ಲಿಸಿದ್ದರು. ದೇವಸ್ಥಾನದ ಆದಾಯ ಹೆಚ್ಚಿಸುವ ಉದ್ದೇಶದಿಂದ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ನಿಯಮಾನುಸಾರ ಅಂಗಡಿಗಳನ್ನು ಹಂಚಿಕೆ ಮಾಡಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಇದೇ ವೇಳೆ, ಸರ್ಕಾರದ ಅನುಮೋದನೆಯಂತೆ ರಥ ಬೀದಿಯನ್ನು 15 ಮೀಟರ್‌ನಿಂದ 18 ಮೀಟರ್‌ಗೆ ವಿಸ್ತರಿಸುವ ಯೋಜನೆ ಇರುವ ಕಾರಣ ಅಂಗಡಿಗಳ ನಿರ್ಮಾಣ ಪ್ರಸ್ತಾವವನ್ನು ನಗರಸಭೆ ಆಯುಕ್ತರು ತಿರಸ್ಕರಿಸಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ನಂತರ, ರಥಬೀದಿಯಲ್ಲಿನ ಅತಿಕ್ರಮಣ ತೆರವುಗೊಳಿಸಿಲ್ಲ ಎಂದು ಶಂಕರ್ ಮತ್ತೊಂದು ದೂರು ನೀಡಿದ್ದರು. ಉಪ ಲೋಕಾಯುಕ್ತರ ಸೂಚನೆಯಂತೆ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿ ವರದಿ ಸಲ್ಲಿಸಿದ್ದರು.

ದೂರಿನ ವಿಚಾರಣೆ ಪೂರ್ಣಗೊಂಡ ಬಳಿಕ, ಅತಿಕ್ರಮಣ ತೆರವುಗೊಂಡಿರುವುದರಿಂದ ಪ್ರಕರಣವನ್ನು ಉಪ ಲೋಕಾಯುಕ್ತರು ಮುಕ್ತಾಯಗೊಳಿಸಿದ್ದರು. ಜೊತೆಗೆ, ತಮ್ಮ ಸಮಸ್ಯೆಗೆ ಪರಿಹಾರ ಪಡೆಯಲು ಕರ್ನಾಟಕ ಬಾಡಿಗೆ ಕಾಯ್ದೆ ಹಾಗೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆ ಅಡಿಯಲ್ಲಿ ಪರ್ಯಾಯ ಕಾನೂನು ಮಾರ್ಗಗಳು ಲಭ್ಯವಿವೆ ಎಂದು ಸೂಚಿಸಲಾಗಿತ್ತು.

ಆದರೆ, ಪ್ರಕರಣ ಮುಕ್ತಾಯಗೊಂಡ ನಂತರವೂ ಶಂಕರ್ ಅವರು ಉಪ ಲೋಕಾಯುಕ್ತರಿಗೆ ಅವಹೇಳನಕಾರಿ ಪತ್ರಗಳನ್ನು ಕಳುಹಿಸಿದ್ದರು. ಇದೇ ರೀತಿಯ ಆರೋಪಗಳನ್ನು ಒಳಗೊಂಡ ಮತ್ತೊಂದು ಪತ್ರವನ್ನು ಲೋಕಾಯುಕ್ತರಿಗೂ ರವಾನಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೆ, ಅದಕ್ಕೆ ನೀಡಿದ ಉತ್ತರದಲ್ಲೂ ಮಾನಹಾನಿಕರ ಆರೋಪಗಳನ್ನು ಪುನರಾವರ್ತಿಸಿದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಾಗಿ, ಇದೀಗ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ದಾಳಿಗೆ Iran ಪ್ರತೀಕಾರ; Hormuzನಲ್ಲಿ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿಗಳ ಸುರಿಮಳೆ; ಭಾರತೀಯ ನಾವಿಕ ಸಾವು, 8 ಮಂದಿಗೆ ಗಾಯ

ಯುವಕರಿಗೆ ಭರ್ಜರಿ ಗಿಫ್ಟ್: 10 ಸಾವಿರ ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಸರ್ಕಾರ ಆದೇಶ; ಪ್ರತಿ ಸಂಘಕ್ಕೆ ₹10 ಲಕ್ಷ, ಯಾರೆಲ್ಲಾ ಅರ್ಹ?

ಪಾಕಿಸ್ತಾನದಲ್ಲಿ ಹಿಂದೂ ಯುವ ವೈದ್ಯನಿಗೆ ಗುಂಡಿಕ್ಕಿ ಹತ್ಯೆ; ಇಲ್ಲಿದೆ ಕಾರಣ...

ತೀವ್ರ ವಿರೋಧದ ಬೆನ್ನಲ್ಲೇ ಸಿಎಂ ಮಾಧ್ಯಮ ಕಾರ್ಯದರ್ಶಿ ರಾಘವೇಂದ್ರ ಭಟ್ ನೇಮಕಾತಿ ವಾಪಸ್: ರಾಜ್ಯ ಸರ್ಕಾರ ಆದೇಶ

'Hormuz ಭದ್ರತೆಗೆ ಸರಕು ಸಾಗಣೆಯ ಮೇಲೆ ಶೇ.20 ಶುಲ್ಕ ಹೇರಿ': ಜಗತ್ತಿಗೆ ಮತ್ತೆ ಶಾಕ್ ಕೊಟ್ಟ Donald Trump, ಇರಾನ್ ಕೆಂಡಾಮಂಡಲ