ಇಂದಿರಾನಗರ ಪೊಲೀಸರು ವಶಕ್ಕೆ ಪಡೆದ ಪದಕಗಳು online desk
ರಾಜ್ಯ

ಹಾಕಿ ದಂತಕಥೆ ಸೋಮಯ್ಯ ಅವರ 1980ರ ಒಲಿಂಪಿಕ್ ಚಿನ್ನದ ಪದಕ ಕಳವು ಪ್ರಕರಣ: ಇಬ್ಬರ ಬಂಧನ

ಬೆಂಗಳೂರಿನ ನಿವಾಸಿಗಳಾದ ಕೂಲಿ ಕಾರ್ಮಿಕ ಮಾಣಿಕ್ಯ ಅಲಿಯಾಸ್ ಮಣಿಕಂಠ (31) ಮತ್ತು ಭರತ್ (25) ಬಂಧಿತ ಆರೋಪಿಗಳಾಗಿದ್ದಾರೆ.

ಭಾರತೀಯ ಹಾಕಿ ತಂಡದ ಮಾಜಿ ಆಟಗಾರ ಎಂ. ಎಂ. ಸೋಮಯ್ಯ ಅವರ ಬೆಂಗಳೂರಿನ ಮನೆಗೆ ಕನ್ನ ಹಾಕಿ, 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಅವರು ಗೆದ್ದ ಚಿನ್ನದ ಪದಕವೂ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದ ಇಬ್ಬರು ಆರೋಪಿಗಳನ್ನು ಇತ್ತೀಚೆಗೆ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಬೆಂಗಳೂರಿನ ನಿವಾಸಿಗಳಾದ ಕೂಲಿ ಕಾರ್ಮಿಕ ಮಾಣಿಕ್ಯ ಅಲಿಯಾಸ್ ಮಣಿಕಂಠ (31) ಮತ್ತು ಭರತ್ (25) ಬಂಧಿತ ಆರೋಪಿಗಳಾಗಿದ್ದಾರೆ.

ಮಾಣಿಕ್ಯ, ಕರ್ನಾಟದಲ್ಲಿ 25 ಹಾಗೂ ತಮಿಳುನಾಡಿನಲ್ಲಿ 8 ಸೇರಿದಂತೆ ಒಟ್ಟು 33 ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಭರತ್ ಕೊಲೆ ಮತ್ತು ಕಳವು ಸೇರಿದಂತೆ 2 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪತ್ರಿಕಾಗೋಷ್ಠಿಯಲ್ಲಿ ಈ ಬಂಧನದ ಕುರಿತು ಮಾಹಿತಿ ನೀಡಿದರು.

ಆರೋಪಿಗಳ ಬಂಧನದೊಂದಿಗೆ ಪೊಲೀಸರು ಕಳುವಾಗಿದ್ದ ಎಲ್ಲಾ 8 ಪದಕಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳಲ್ಲಿ 1980ರ ಮಾಸ್ಕೋ ಒಲಿಂಪಿಕ್ಸ್ ಚಿನ್ನದ ಪದಕ, 1982ರ ನವದೆಹಲಿ ಏಷ್ಯನ್ ಗೇಮ್ಸ್‌ನ ಬೆಳ್ಳಿ ಪದಕ, 1986ರ ಸಿಯೋಲ್ ಏಷ್ಯನ್ ಗೇಮ್ಸ್‌ನ ಕಂಚಿನ ಪದಕ ಮತ್ತು 1982ರ ಆಮ್‌ಸ್ಟರ್‌ಡ್ಯಾಮ್ ಚಾಂಪಿಯನ್ಸ್ ಟ್ರೋಫಿಯ ಕಂಚಿನ ಪದಕ ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳು ಸೇರಿವೆ.

ಈ ಕಳ್ಳತನದ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಚ್‌ಎಎಲ್ 3ನೇ ಹಂತದಲ್ಲಿರುವ ಸೋಮಯ್ಯ ಅವರ ನಿವಾಸದಲ್ಲಿ ಅಕ್ಟೋಬರ್ 28 ರಂದು ನಡೆದಿತ್ತು

67 ವರ್ಷದ ಮಾಜಿ ಹಾಕಿ ಆಟಗಾರ ಸೋಮಯ್ಯ, ತಮ್ಮ ಕುಟುಂಬದೊಂದಿಗೆ ಕೊಡಗು ಜಿಲ್ಲೆಯಲ್ಲಿರುವ ಸ್ವಂತ ಊರಿಗೆ ತೆರಳಿದ್ದಾಗ ಈ ಕಳವು ನಡೆದಿತ್ತು.

ಸೋಮಯ್ಯ ಅವರ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಹೊರೆಯವರು, ಕಳವು ನಡೆದಿರಬಹುದು ಎಂದು ಶಂಕಿಸಿ ಅವರಿಗೆ ಮಾಹಿತಿ ನೀಡಿದ್ದರು.

ಅಕ್ಟೋಬರ್ 28 ರಂದು ಮನೆಗೆ ಹಿಂತಿರುಗಿದ ಸೋಮಯ್ಯ ಅವರಿಗೆ ಕಳ್ಳರು ಮುಖ್ಯ ದ್ವಾರದ ಬೀಗ ಮುರಿದು ಒಳನುಗ್ಗಿರುವುದು ಕಂಡುಬಂದಿದೆ. ಕಳ್ಳರು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಗೆದ್ದ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳು ಹಾಗೂ ಇತರೆ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ಹಣವನ್ನು ದೋಚಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗಾಗಿ 8 ವಿಶೇಷ ತಂಡಗಳನ್ನು ರಚಿಸಿದ್ದರು. ನವೆಂಬರ್ 9 ರಂದು ರಾಮನಗರದ ಹಗಳಹಳ್ಳಿ ಕ್ರಾಸ್ ಬಳಿ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನದೊಂದಿಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಚಾರಣೆ ವೇಳೆ ತಮ್ಮ ಮತ್ತೊಬ್ಬ ಸ್ನೇಹಿತನೊಂದಿಗೆ ಸೇರಿ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ನವೆಂಬರ್ 10 ರಂದು ಹೆಚ್ಚಿನ ವಿಚಾರಣೆಗಾಗಿ ಇಬ್ಬರೂ ಆರೋಪಿಗಳನ್ನು 8 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.

"ವಿಚಾರಣೆ ವೇಳೆ ಆರೋಪಿಗಳು ಕಳವು ಮಾಡಿದ ಪದಕಗಳಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ರಾಜಾಜಿನಗರದ ಚಿನ್ನದ ಕಂಪನಿಯೊಂದಕ್ಕೆ ಮಾರಾಟ ಮಾಡಿರುವುದಾಗಿ ಹಾಗೂ ಉಳಿದ ಪದಕಗಳನ್ನು ಹೊಸಕೋಟೆಯ ಎಚ್ ಕ್ರಾಸ್ ಬಳಿಯಿರುವ ತಮ್ಮ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾರೆ" ಎಂದು ಅಧಿಕಾರಿ ಹೇಳಿದ್ದಾರೆ.

"ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಚಿನ್ನದ ಕಂಪನಿಯಿಂದ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಆರೋಪಿಯ ಮನೆಯಿಂದ ಆರು ಪದಕಗಳು, ಒಂದು ಕೊಡವ ಕತ್ತಿ, ಒಲಿಂಪಿಕ್ ಬ್ಯಾಗ್ ಮತ್ತು ಒಂದು ಕ್ಯಾಮೆರಾವನ್ನು ಜಪ್ತಿ ಮಾಡಲಾಗಿದೆ" ಎಂದು ಅವರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗೆ ಜಾಲ ಬೀಸಲಾಗಿದ್ದು, ತನಿಖೆ ಮುಂದುವರಿದಿದೆ.

ಇಂದಿರಾನಗರ ಇನ್ಸ್‌ಪೆಕ್ಟರ್ ಆನಂದ್, ಡಿಸಿಪಿ (ಪೂರ್ವ) ವಿಕ್ರಮ್ ಅಮಟೆ ಹಾಗೂ ಅವರ ತಂಡದ ತ್ವರಿತ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸೋಮಯ್ಯ, ನಗರ ಪೊಲೀಸ್ ಆಯುಕ್ತರಿಗೆ ಮತ್ತು ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು.

ಪೋಲಿಸರು ಕೇವಲ ಪದಕಗಳನ್ನು ಮಾತ್ರವಲ್ಲದೆ ಕಳುವಾಗಿದ್ದ ಇತರ ಬೆಲೆಬಾಳುವ ವಸ್ತುಗಳನ್ನು ಸಹ ಚುರುಕಾಗಿ ಪತ್ತೆಹಚ್ಚಿ ಮರಳಿ ನೀಡಿದ್ದಾರೆ ಎಂದು ಅವರು ಹೇಳಿದರು.

"ಮೊದಲ ದಿನದಿಂದಲೂ ಇಂದಿರಾನಗರ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ಅವರು ಪದಕಗಳನ್ನು ಖಂಡಿತ ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದರು. ಈ ಪದಕಗಳು ಕೇವಲ ನನ್ನ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ರಾಜ್ಯ ಮತ್ತು ದೇಶದ ಗೌರವವಾಗಿದ್ದವು. ಇಡೀ ತಂಡ ಅತ್ಯುತ್ತಮವಾಗಿ ಕೆಲಸ ಮಾಡಿದೆ" ಎಂದು ಸೋಮಯ್ಯ ಸಂತಸ ಹಂಚಿಕೊಂಡರು.

ಕಳುವಾದ ಪದಕಗಳು ಮತ್ತೆ ಸಿಕ್ಕಿದ್ದಕ್ಕೆ ತಮಗೆ ಮತ್ತೊಮ್ಮೆ ಒಲಿಂಪಿಕ್ ಪದಕ ಗೆದ್ದಷ್ಟೇ ಸಂತೋಷವಾಗಿದೆ ಎಂದು ಅವರು ಹೇಳಿದರು. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ತಂಡಕ್ಕೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ ಎಂದು ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಮಾಲಿನ್ಯ ಹೆಚ್ಚಾದರೇನಂತೆ, ತಾನಾಗೇ ಕಡಿಮೆಯಾಗುತ್ತೆ", ದೀಪಾವಳಿ ಪಟಾಕಿಗಷ್ಟೇ ವಿರೋಧವೇಕೆ?: ಟೀಕಾಕಾರರಿಗೆ ಯೋಗಿ ಆದಿತ್ಯನಾಥ್ ತಿರುಗೇಟು

ಸಿಇಒ ಹನಿಟ್ರ್ಯಾಪ್ ಕೇಸ್: Nvidia ಷೇರು ಮೌಲ್ಯ ಭಾರಿ ಕುಸಿತ, ನೂರಾರು ಬಿಲಿಯನ್ ಡಾಲರ್ ನಷ್ಟ, 2ನೇ ಸ್ಥಾನಕ್ಕೂ ಕುತ್ತು!

‘INDIA ಒಕ್ಕೂಟದ ವಿಭಜನೆಗೆ ಅವರೇ ಕಾರಣ’: ಸೋನಿಯಾ ಗಾಂಧಿ ಆತ್ಮಕಥನದಲ್ಲಿ ನಿತೀಶ್ ಕುಮಾರ್‌ಗೆ ಅಪಮಾನ?; JDU ತೀವ್ರ ಆಕ್ರೋಶ..!

ಬಾಕ್ಸ್ ಆಫೀಸ್‌ನಲ್ಲಿ 'Ramayana' ಅಬ್ಬರ; 6 ದಿನಕ್ಕೆ ₹849 ಕೋಟಿ ಕಲೆಕ್ಷನ್, ಜವಾನ್ ದಾಖಲೆ ಧೂಳಿಪಟ! ಕಾಂತಾರ ರೆಕಾರ್ಡ್`ಗೂ ಕುತ್ತು!

Air India ವಿಮಾನಕ್ಕೆ Hijack ಬೆದರಿಕೆ: ಶೌಚಾಲಯದ ಕನ್ನಡಿಯಲ್ಲಿ ಸಂದೇಶ ಪತ್ತೆ; Kolkata ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ..!