ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಡಿಜೆ ಎಲ್ಲಿ ತರಲಿ ಸಾಹೇಬ್ರೇ? ಬರಗಾಲದ ನಡುವೆ ಜಿಲ್ಲಾಧಿಕಾರಿ ನಿವಾಸದಲ್ಲಿ ಡಿಜೆ ಪಾರ್ಟಿ; ಗದಗ ಡಿಸಿಗೆ ಕರೆ ಮಾಡಿ ರೈತನ ನೇರ ಕ್ಲಾಸ್

ಭೀಕರ ಬರಗಾಲದ ನಡುವೆಯೇ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅದ್ಧೂರಿ ಡಿಜೆ ಪಾರ್ಟಿ ಆಯೋಜಿಸಿದ್ದನ್ನು ಖಂಡಿಸಿ, ರೈತ ರಾಜೀವ ಬೊಮ್ಮನಕಟ್ಟಿ ಅವರು ನೇರವಾಗಿ ಡಿಸಿ ಅವರಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿರುವ ಆಡಿಯೋ ವೈರಲ್ ಆಗಿದೆ. ಆ ಕುರಿತ ವರದಿ ಇಲ್ಲಿದೆ:

ಬರಗಾಲದ ನಡುವೆ ಡಿಜೆ ಪಾರ್ಟಿಮಾಡಿದ ಗದಗ ಡಿಸಿಗೆ ಕರೆ ಮಾಡಿ ರೈತನ ನೇರ ಕ್ಲಾಸ್ — Online Desk
Hruthin H P
Updated On : 23 Nov 2026, 1:55 pm

ಗದಗ: ಜಿಲ್ಲೆಯಲ್ಲಿ ತೀವ್ರ ಬರಗಾಲದ ನಡುವೆಯೂ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಅಧಿಕೃತ ನಿವಾಸದಲ್ಲಿ ನಡೆದ ಅದ್ಧೂರಿ ಬೀಳ್ಕೊಡುಗೆ ಡಿಜೆ ಪಾರ್ಟಿಯನ್ನು ಖಂಡಿಸಿ, ಶಿರಹಟ್ಟಿ ತಾಲೂಕಿನ ಒಡವಿ ಗ್ರಾಮದ ರೈತ ರಾಜೀವ ಬೊಮ್ಮನಕಟ್ಟಿ ಅವರು ನೇರವಾಗಿ ಡಿಸಿಗೆ ಕರೆ ಮಾಡಿ "ಡಿಜೆ ಬುಕ್ ಮಾಡಿದ್ದೇನೆ, ಎಲ್ಲಿ ತರಲಿ ಸಾಹೇಬ್ರೇ?" ಎಂದು ವ್ಯಂಗ್ಯವಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ. ಅದರಲ್ಲೂ, ರೈತ ಮತ್ತು ಜಿಲ್ಲಾಧಿಕಾರಿ ನಡುವಿನ ಈ ಫೋನ್ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲಾಡಳಿತದ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ವಿವಾದ?

ನವೆಂಬರ್ 30ರಂದು ನಿವೃತ್ತರಾಗಲಿರುವ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಶನಿವಾರ ರಾತ್ರಿ (ನವೆಂಬರ್ 21) ಅವರ ಸರ್ಕಾರಿ ನಿವಾಸದ ಆವರಣದಲ್ಲಿ ಬೀಳ್ಕೊಡುಗೆ ಔತಣಕೂಟ ಆಯೋಜಿಸಲಾಗಿತ್ತು. ತಡರಾತ್ರಿ 12 ಗಂಟೆಯವರೆಗೂ ಜಾನಪದ ಹಾಡುಗಳಿಗೆ ಜಿಲ್ಲಾಧಿಕಾರಿ ಮತ್ತು ಹಿರಿಯ ಅಧಿಕಾರಿಗಳು ಕುಣಿದು ಸಂಭ್ರಮಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಜಿಲ್ಲೆಯ ಏಳೂ ತಾಲೂಕುಗಳು ಬರದಿಂದ ತತ್ತರಿಸುತ್ತಿದ್ದು, ಕುಡಿಯುವ ನೀರು, ಮೇವಿನ ಕೊರತೆ ಹಾಗೂ ಬೆಳೆ ವಿಮೆ ಸಿಗದೆ ರೈತರು ಕಂಗಾಲಾಗಿರುವಾಗ ಅಧಿಕಾರಿಗಳು ಪಾರ್ಟಿ ಮಾಡಿದ್ದನ್ನು ಕಂಡು ರೈತ ರಾಜೀವ ಬೊಮ್ಮನಕಟ್ಟಿ ಡಿಸಿಗೆ ಕರೆ ಮಾಡಿದ್ದಾರೆ.

Advertisement

Advertisement

Also Read

'ಬಾಯಿ ಮುಚ್ಚಿಕೊಂಡು ಕೇಳಯ್ಯ, ಕೇಳೋ ಯೋಗ್ಯತೆ ಇದ್ಯಾ ನಿನಗೆ?': ಶೂ, ಸಾಕ್ಸ್ ವಿತರಣೆ ವಿಳಂಬ ಪ್ರಶ್ನಿಸಿದವರ ಮೇಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ದರ್ಪ? Video ವೈರಲ್..!

ಫೋನ್ ಸಂಭಾಷಣೆಯಲ್ಲಿ ಏನಾಯಿತು?

ಫೋನ್ ಕರೆ ಮಾಡಿದ ರೈತ ರಾಜೀವ ಬೊಮ್ಮನಕಟ್ಟಿ, "ಸಾಹೇಬ್ರೇ, ಡಿಜೆ ಬುಕ್ ಮಾಡಿದ್ದೇನೆ, ಇವತ್ತು ತರಿಸುತ್ತಿದ್ದೇನೆ, ಎಲ್ಲಿ ತರಿಸಲಿ?" ಎಂದು ವ್ಯಂಗ್ಯವಾಡಿದ್ದಾರೆ. ಮೊದಲು ಅದನ್ನು 'ಡೀಸೆಲ್' ಎಂದು ತಪ್ಪಾಗಿ ಅರ್ಥೈಸಿಕೊಂಡ ಜಿಲ್ಲಾಧಿಕಾರಿ ಪೆಟ್ರೋಲ್ ಬಂಕ್‌ಗೆ ಹೋಗುವಂತೆ ಹೇಳಿದಾಗ, "ಡೀಸೆಲ್ ಅಲ್ಲ ಸಾಹೇಬ್ರೇ, ಡಿಜೆ. ಮೊನ್ನೆ ನಿಮ್ಮ ಮನೆಯಲ್ಲಿ ಪಾರ್ಟಿ ಮಾಡಿದ್ದೀರಲ್ಲ, ಅದಕ್ಕೆ ನಾವೂ ಡಿಜೆ ತರುತ್ತೇವೆ" ಎಂದು ರೈತ ತಿರುಗೇಟು ನೀಡಿದ್ದಾರೆ. ಈ ವೇಳೆ, ಜಿಲ್ಲೆಯಲ್ಲಿ ಮಳೆಯಿಲ್ಲದೆ ಬೆಳೆ ನಷ್ಟವಾಗಿದೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಿದೆ, ಇನ್ನೂ ರೈತರಿಗೆ ಬೆಳೆ ವಿಮೆ ಪರಿಹಾರ ಬಂದಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ನೀವು ಪಾರ್ಟಿ ಮಾಡುತ್ತಿದ್ದೀರಿ ಎಂದು ರೈತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ಮುಂದಿನ ಸೋಮವಾರ ರೈತರ ಖಾತೆಗಳಿಗೆ ಬೆಳೆ ವಿಮೆ ಹಣ ಜಮೆಯಾಗಲಿದೆ ಎಂದು ಹೇಳಿದ್ದು, ಮಾತುಕತೆಯ ಕೊನೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನು, ನಿವೃತ್ತಿಯ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲು ಸ್ವಂತ ಖರ್ಚಿನಲ್ಲಿ ಈ ಭೋಜನಕೂಟ ಏರ್ಪಡಿಸಲಾಗಿತ್ತು ಎಂದು ಜಿಲ್ಲಾಡಳಿತದ ಮೂಲಗಳು ಸ್ಪಷ್ಟಪಡಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement