ಸಂಗ್ರಹ ಚಿತ್ರ 
ರಾಜ್ಯ

‘ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ’ ಆರೋಪ: ಬೀದರ್ ಯುವಕನ ಬಂಧಿಸಿದ NIA, ವಿಚಾರಣೆಗಾಗಿ ಬೆಂಗಳೂರಿಗೆ ಶಿಫ್ಟ್..!

ನಿಷೇಧಿತ ಸಂಘಟನೆಯ ಸದಸ್ಯರು ಹಾಗೂ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ವ್ಯಕ್ತಿ ಸೇರಿದಂತೆ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಕೆಲವರೊಂದಿಗೆ ಈತ ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ.

ಬೆಂಗಳೂರು: ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಗಂಭೀರ ಆರೋಪದ ಮೇಲೆ ಬೀದರ್ ಜಿಲ್ಲೆಯ ಯುವಕನನ್ನು ರಾಷ್ಟ್ರೀಯ ತನಿಖಾ ದಳ (NIA) ಮತ್ತು ಕರ್ನಾಟಕ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ.

ಕಟಕ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲ್ ಅವರನ್ನು ಅಕ್ಟೋಬರ್ 2ರಂದು ಬಂಧಿಸಲಾಗಿತ್ತು.

ನಿಷೇಧಿತ ಸಂಘಟನೆಯ ಸದಸ್ಯರು ಹಾಗೂ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ವ್ಯಕ್ತಿ ಸೇರಿದಂತೆ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಕೆಲವರೊಂದಿಗೆ ಈತ ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.

ಬಂಧನದ ಬಳಿಕ ವಿಶಾಲ್ ಅವರ ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳನ್ನು ಪರಿಶೀಲಿಸಿದ ತನಿಖಾಧಿಕಾರಿಗಳು, ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಪಾಕಿಸ್ತಾನ ಮೂಲದ ಶಹಜಾದ್ ಭಟ್ಟಿ ಹಾಗೂ ಆತನ ಸಹಚರರೊಂದಿಗೆ ಸಂವಹನ ನಡೆಸಿರುವುದನ್ನು ಪತ್ತೆಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 2, 2026ರಂದು ವರದಿಯಾದ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮೂವರು ಪಾಕಿಸ್ತಾನಿಯರು ಸೇರಿದಂತೆ ಏಳು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಶಾಲ್ ಅಲಿಯಾಸ್ ವಿಜಯಕುಮಾರ್ ಮೇತ್ರೆ (24), ಪಾಕಿಸ್ತಾನಿಯರೆಂದು ಗುರುತಿಸಲಾದ ಶಹಜಾದ್ ಭಟ್ಟಿ, ರಾಣಾ ಹುನೇನ್ ಮತ್ತು ನೋಮಿ ಖಾನ್, ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಆಶು ಶರ್ಮಾ, ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ರಾಜ್ ಭಾಯಿ ಹಾಗೂ ಬೀದರ್‌ನ ಮತ್ತೊಬ್ಬ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಐವರು ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)ಯ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರತ್ಯೇಕ ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಲಾಗಿದ್ದು, ಪ್ರತಿಯೊಬ್ಬ ಆರೋಪಿಯ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಹಜಾದ್ ಭಟ್ಟಿ, ರಾಣಾ ಹುನೇನ್, ನೋಮಿ ಖಾನ್, ಆಶು ಶರ್ಮಾ ಮತ್ತು ರಾಜ್ ಭಾಯಿ ಅಲಿಯಾಸ್ ಲಕ್ಕಿ ಸಿಂಗ್ ಎಂಬ ಐವರ ವಿರುದ್ಧ ಕ್ರೈಂ ನಂ. 83/2026ರ ಅಡಿಯಲ್ಲಿ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.

ದಾಖಲೆಗಳ ಪ್ರಕಾರ, ಈ ಆರೋಪಿಗಳು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಚಟುವಟಿಕೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದೆ.

ರಾಣಾ ಹುನೇನ್ ‘ರಹೆ ಹಕ್’ ಮತ್ತು ‘ರಾಣಾ ಭಾಯಿ 333’ ಎಂಬ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಪ್ರೊಫೈಲ್‌ಗಳನ್ನು ಬಳಸಿದ್ದಾನೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ. ಆತನ ಚಟುವಟಿಕೆಗಳು ಸೇರಿದಂತೆ ಇತರ ಆರೋಪಿಗಳ ಕುರಿತು ಸಂಗ್ರಹಿಸಲಾದ ಮಾಹಿತಿಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

UAPA ಕಾಯ್ದೆಯ ಸೆಕ್ಷನ್ 18, 20 ಮತ್ತು 39 ಹಾಗೂ 2023ರ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR Row: ನೋಟಿಸ್ ನೀಡದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ- ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್!

ಏಷ್ಯನ್ ಗೇಮ್ಸ್‌ 2026: ಭಾರತ ಚಿನ್ನದ ಪದಕ ಗೆದ್ದ ಬಳಿಕ ಜಪಾನ್‌ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ ಭಾರತೀಯ ಅಭಿಮಾನಿಗಳು! Video

ಕುಸಿದ ಅಮೆರಿಕ: ಬದಲಾಗ್ತಿದೆ ವಿಶ್ವದ ದೊಡ್ಡಣ್ಣನ ಸ್ಥಾನ; ಇನ್ಮುಂದೆ EMPs ಪ್ರಬಲ- EAM Jaishankar

'ನನಗೆ ಸಾವಿನ ಭಯವಿರಲಿಲ್ಲ': ವಿಮಾನವನ್ನು ಪತನಗೊಳಿಸುವುದೇ ಉದ್ದೇಶವಾಗಿತ್ತು! ಸಹ-ಪೈಲಟ್ ಹಮ್ಮಾಮಿ ಹೇಳಿಕೆ

2.5 ಲಕ್ಷ ರೂ ಲಂಚ ಪ್ರಕರಣ: DGCA ಅಧಿಕಾರಿ, ವಿಮಾನಯಾನ ಸಂಸ್ಥೆಯ ನಿರ್ದೇಶಕರನ್ನು ಬಂಧಿಸಿದ ಸಿಬಿಐ